UPI: ಡಿಜಿಟಲ್ ಪಾವತಿ ಕುರಿತು ಕೇಂದ್ರ ಸರ್ಕಾರದಿಂದ ಹೊಸ ನಿಯಮ, ಯಾರಿಗೆ ಹೊರೆ? ಇಲ್ಲಿದೆ ಮಾಹಿತಿ
UPI: ಡಿಜಿಟಲ್ ಪಾವತಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಬರೆ ಎಳೆಯಲಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಈ ನಿರ್ಧಾರ ಬದಲಾಗಿದ್ದು, ಸಿಹಿಸುದ್ದಿ ನೀಡಿದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಸಾಮಾನ್ಯ ಯುಪಿಐ ವಹಿವಾಟುಗಳು ಮೊತ್ತದ ಮಿತಿ ಇಲ್ಲದೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟನೆ ನೀಡಿದೆ.
ಇದೇ ವೇಳೆ ವ್ಯಾಪಾರಿಗಳಿಗೆ ಮಾಡುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಮಾತ್ರ ಅನ್ವಯ ಆಗುವಂತೆ ಶೇಕಡಾ 0.4ರಷ್ಟು ವ್ಯಾಪಾರಿ ರಿಯಾಯಿತಿ ದರವನ್ನು ಒಳಗೊಂಡ ಹೊಸ ಪಾವತಿ ನೀತಿಯನ್ನು ಮಂಗಳವಾರ (ಸೆಪ್ಟೆಂಬರ್ 15) ಪ್ರಕಟಿಸಿದೆ. ಹಾಗಾದ್ರೆ ಇದರ ಉದ್ದೇಶ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾರಿಗೆ ಹೆಚ್ಚುವರಿ ಶುಲ್ಕ ಇರುವುದಿಲ್ಲ?
ಜನಸಾಮಾನ್ಯರ ದೈನಂದಿನ ಡಿಜಿಟಲ್ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ನೋಡಿಕೊಳ್ಳುವುದು ಮತ್ತು ಯುಪಿಐ ಪಾವತಿ ವ್ಯವಸ್ಥೆಯ ಸುಸ್ಥಿರತೆಯನ್ನು ಕಾಪಾಡುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯಾರಿಗೆಲ್ಲಾ ಹೊಸ ನಿಯಮ ಅನ್ವಯ?
ಹೊಸ ನಿಯಮಗಳ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಯನ್ನು ಎಂಡಿಆರ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅಂದರೆ ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಅಥವಾ ಪರಿಚಿತರಿಗೆ ಯಾವುದೇ ಮೊತ್ತದ ಹಣವನ್ನು ಯುಪಿಐ ಮೂಲಕ ಕಳುಹಿಸಿದರೂ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡಲಾಗುವುದಿಲ್ಲ ಎಂದು ಹೇಳಿದೆ.
ವ್ಯಾಪಾರಿ ಪಾವತಿಗಳಿಗೆ ಹೊಸ ನಿಯಮ
ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ ವಹಿವಾಟುಗಳಲ್ಲಿ 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ ಶೇಕಡಾ 0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ. ಆದರೆ, ಸಣ್ಣ ಮೊತ್ತದ ದಿನನಿತ್ಯದ ಖರೀದಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮೌಲ್ಯದ ವಾಣಿಜ್ಯ ವಹಿವಾಟುಗಳಲ್ಲಿ ಶುಲ್ಕದ ಹೊರೆ ಮಿತಿಮೀರಿ ಹೆಚ್ಚಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ.
75,000 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕಕ್ಕೆ ಗರಿಷ್ಠ 300 ರೂಪಾಯಿ ಮಿತಿಯನ್ನು ನಿಗದಿಪ ಮಾಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪಾವತಿಗಳಲ್ಲೂ ಶುಲ್ಕವು 300 ರೂಪಾಯಿ ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ನೆಮ್ಮದಿ ಸಿಕ್ಕಂತಾಗಿದೆ.


Click it and Unblock the Notifications
