ರಸೀತಿ ಇರದ ಚಿನ್ನ ಹೊಂದಿದ್ದರೆ ಭಾರಿ ತೆರಿಗೆ ಕಟ್ಟಬೇಕಾದೀತು ಎಚ್ಚರ!
Recommended Video
ನವದೆಹಲಿ, ಅಕ್ಟೋಬರ್ 30: ಕಪ್ಪು ಹಣದ ಮೇಲೆ ನಿಯಂತ್ರಣ, ತೆರಿಗೆ ವಂಚಕರ ಮೇಲೆ ನಿಗಾ, ಮನೆಯಲ್ಲಿ ಭದ್ರವಾಗಿಟ್ಟುಕೊಂಡ ಚಿನ್ನವನ್ನು ಹೊರಕ್ಕೆ ತಂದು ಹೂಡಿಕೆ ಮಾಡುವಂತೆ ಪ್ರೇರೇಪಿಸಿರುವ ಮೋದಿ ಸರ್ಕಾರವು ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಗೋಲ್ಡ್ ಅಮ್ನೆಸ್ಟಿ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಜಾರಿಗೆ ಬಂದರೆ ರಸೀತಿ ಇರದ ಚಿನ್ನ ಹೊಂದಿದ್ದರೆ ಭಾರಿ ತೆರಿಗೆ ಕಟ್ಟಬೇಕಾದೀತು ಎಚ್ಚರ ಎಂಬ ಸಂದೇಶ ಸಿಕ್ಕಿದೆ.
2016ರ ಅಪನಗದೀಕರಣ ನಂತರ ಚಿನ್ನ ಶೇಖರಣೆ, ಖರೀದಿ ಕುರಿತಂತೆ ಭಾರಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಆದಾಯ ತೆರಿಗೆ ಇಲಾಖೆ ಇಂಥದ್ದೊಂದು ಯೋಜನೆ ಜಾರಿಗೆ ತಂದಿದ್ದು, ಈಗ ಅಕ್ರಮ ಚಿನ್ನ ದಾಸ್ತಾನು ಮೇಲೆ ಸರ್ಕಾರದ ಹದ್ದಿನ ಕಣ್ಣು ಬಿದ್ದಿದೆ. ಚಿನ್ನದ ಅಕ್ರಮ ಸಕ್ರಮ ಯೋಜನೆ ಎಂದು ಇದನ್ನು ಕರೆಯಬಹುದು.
ಚಿನ್ನದ ಠೇವಣಿ ಮತ್ತು ಚಿನ್ನ ಸಾಲ ಯೋಜನೆಗೆ ಬದಲಾಗಿ ಮೂರು ಹೊಸ ಯೋಜನೆಗಳನ್ನು ಮೋದಿ ಸರ್ಕಾರ್ 1.0 ಅವಧಿಯನ್ನು ಘೋಷಿಸಲಾಗಿತ್ತು. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಚಿನ್ನ ನಗದೀಕರಣ, ಸವರನ್ ಗೋಲ್ಡ್ ಬಾಂಡ್ ಹಾಗೂ ಇಂಡಿಯನ್ ಗೋಲ್ಡ್ ಕಾಯಿನ್ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದರು. ಇದಾದ ಬಳಿಕ ನೀತಿ ಆಯೋಗವು ಸಮಗ್ರ ಚಿನ್ನ ನೀತಿಯನ್ನು ರೂಪಿಸಿದೆ. ಈ ಯೋಜನೆಯ ರೂಪುರೇಷೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಸದ್ಯದ ಲೆಕ್ಕಾಚಾರದ ಪ್ರಕಾರ ಮದುವೆಯಾದ ಮಹಿಳೆಯರು 500ಗ್ರಾಂ, ಅವಿವಾಹಿತ ಮಹಿಳೆ 250 ಗ್ರಾಂ, ವಿವಾಹಿತ ಪುರುಷ ಹಾಗೂ ಅವಿವಾಹಿತ ಪುರುಷ 100ಗ್ರಾಂ ಚಿನ್ನವನ್ನು ರಸೀತಿ ಇಲ್ಲದೆ ಹೊಂದಬಹುದು ಎಂದು ಸಿಬಿಡಿಟಿ ತಿಳಿಸಿದೆ. ಇದರಲ್ಲಿ ಚಿನ್ನದ ಕಾಯಿನ್ ಅಥವಾ ಬಾರ್ ಲೆಕ್ಕಕ್ಕೆ ಇಲ್ಲ.
ಇತ್ತೀಚೆಗೆ ಜಾರಿಗೆ ಬಂದ ಸವರನ್ ಗೋಲ್ಡ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು 50 ಟನ್ ಗಳಷ್ಟು ಮೌಲ್ಯಕ್ಕೆ ಸಮಾನವಾದ 13,500 ಕೋಟಿ ರು ಬೆಲೆ ಬಾಳುವ ಬಾಂಡ್ ಗಳನ್ನು ಸರ್ಕಾರ ವಿತರಿಸಲಿದೆ.
ಪ್ರತಿ ವರ್ಷ 1,000 ಟನ್ ಗಳಷ್ಟು ಚಿನ್ನ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣ ಆಮದಾಗುತ್ತಿದೆ. ಇಂಧನದ ನಂತರ ಚಿನ್ನ ಆಮದು ಪ್ರಮಾಣವೇ ಅಧಿಕವಾಗಿದೆ. ಇದರಿಂದ ಚಿನ್ನದ ಆಮದು ಕಡಿಮೆ ಮಾಡುವುದು ಹಾಗೂ ಜನರು ಬಳಸದೆ ಕಪಾಟು ಸೇರಿರುವ ಚಿನ್ನವನ್ನು ಬ್ಯಾಂಕ್ನಲ್ಲಿಡುವಂತೆ ಮಾಡಿ ಬಡ್ಡಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.












Click it and Unblock the Notifications