40,000 ಕೋಟಿ ರೂಪಾಯಿ ಬಂಪರ್, ಸೆಮಿಕಂಡಕ್ಟರ್ ವಲಯಕ್ಕೆ ಅಬ್ಬಬ್ಬಾ ಲಾಟರಿ... Union Budget
ಭಾರತ ಈಗಾಗಲೇ ಜಗತ್ತಿನ ಐಟಿ & ಬಿಟಿ ತವರು ಎಂಬ ಕೀರ್ತಿ ಪಡೆದಿದೆ, ಅದರಲ್ಲೂ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ಐಟಿ & ಬಿಟಿ ವಿಚಾರದಲ್ಲಿ ಇಡೀ ಜಗತ್ತಿಗೇ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಹೀಗಿದ್ದಾಗ ಸೆಮಿಕಂಡಕ್ಟರ್ ವಲಯ ಕೂಡ ಭಾರತದಲ್ಲಿ ಬೃಹತ್ & ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಏಷ್ಯಾದಲ್ಲಿ ಭಾರತವೇ ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಇಂತಹ ಸಮಯದಲ್ಲಿ ಭಾರತ ಸರ್ಕಾರ ಕೂಡ ಸೆಮಿಕಂಡಕ್ಟರ್ ವಲಯಕ್ಕೆ ಇನ್ನಷ್ಟು ಬಲ ತುಂಬಲು ಈಗ ನಿರ್ಧಾರ ಮಾಡಿದ್ದು, ಬರೋಬ್ಬರಿ 40,000 ಕೋಟಿ ರೂಪಾಯಿ ಬಂಪರ್ ಅನುದಾನ ಘೋಷಣೆ ಮಾಡಿದೆ.
2026-27ನೇ ಸಾಲಿನ ಕೇಂದ್ರ ಬಜೆಟ್ ಹಲವು ಕಾರಣಗಳಿಂದ ಗಮನ ಸೆಳೆದಿತ್ತು, ಇದೀಗ ಮತ್ತೆ ಸೆಮಿಕಂಡಕ್ಟರ್ ವಲಯಕ್ಕೆ ನೀಡಿರುವ ಭಾರಿ ದೊಡ್ಡ ಪ್ರಮಾಣದ ಅನುದಾನದಿಂದ ಕೂಡ ಗಮನ ಸೆಳೆದಿದೆ. ಸೆಮಿಕಂಡಕ್ಟರ್ ಮಿಷನ್ ಆವೇಗವನ್ನೇ ಈಗ ಬಂಡವಾಳ ಮಾಡಿಕೊಳ್ಳಲು 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0' ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉದ್ಯಮ ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳ ಮೇಲೆ ಗಮನ ಕೇಂದ್ರೀಕರಿಸಲು ಈ ಬೃಹತ್ ಅನುದಾನ ಬಳಕೆ ಆಗಲಿದೆ.

ಆಂಧ್ರಪ್ರದೇಶ & ತಮಿಳುನಾಡಿಗೆ ಬಂಪರ್
ಪ್ರಮುಖವಾಗಿ ಭಾರತದ ಒಡಿಶಾ, ಕೇರಳ, ಆಂಧ್ರಪ್ರದೇಶ & ತಮಿಳುನಾಡು ಸೇರಿದಂತೆ ಖನಿಜ-ಸಮೃದ್ಧ ರಾಜ್ಯಗಳಿಗೆ ಬೆಂಬಲ ನೀಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸೆಮಿಕಂಡಕ್ಟರ್ ವಲಯ ಇನ್ನಷ್ಟು ವೇಗದಲ್ಲಿ ಮುಂದೆ ನಡೆಯಲು ಇದು ಸಹಕಾರಿ ಆಗಲಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಕೂಡ ಈ ಬೃಹತ್ ಅನುದಾನದಲ್ಲಿ ಹಣವನ್ನು ಖರ್ಚು ಮಾಡಲು ನಿರ್ಧಾರ ಮಾಡಲಾಗಿದೆ. ಭಾರತದಲ್ಲಿ ಹಲವು ಕ್ಷೇತ್ರಗಳು ಈಗಾಗಲೇ ಭಾರಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು, ಆ ಸಾಲಿಗೆ ಸೆಮಿಕಂಡಕ್ಟರ್ ವಲಯ ಕೂಡ ಸೇರ್ಪಡೆ ಆಗುತ್ತಿರುವುದು ಗಮನಾರ್ಹ ಸಂಗತಿ.
ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಹಣ?
ಜಾಗತಿಕ ಮಟ್ಟದಲ್ಲಿ ಯುದ್ಧ ಹಾಗೂ ತಿಕ್ಕಾಟ ನಡೆಯುತ್ತಿರುವ ಸಮಯದಲ್ಲಿ ಭಾರತದ ಬಜೆಟ್ ಎಲ್ಲವನ್ನೂ ಸಮತೋಲನದಲ್ಲಿ ತೂಗಿಸಿಕೊಂಡು ಹೋಗಿದೆ. ಅದರಲ್ಲೂ ಸಾರಿಗೆ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ ಅತಿಹೆಚ್ಚು ಎಂದರೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯನ್ನ ಮಾಡಲಾಗಿದೆ. ಹಾಗೇ 5 ಲಕ್ಷ 94 ಸಾವಿರ ಕೋಟಿ ರೂಪಾಯಿ ಪಡೆದ ರಕ್ಷಣಾ ಕ್ಷೇತ್ರವು ಪಟ್ಟಿಯ 2ನೇ ಸ್ಥಾನದಲ್ಲಿ ಇದೆ.
ಇನ್ನುಳಿದಂತೆ ಗ್ರಾಮೀಣ ಅಭಿವೃದ್ಧಿಗಾಗಿ 2,73,108 ಕೋಟಿ ರೂಪಾಯಿ & ಗೃಹ ಸಚಿವಾಲಯಕ್ಕೆ 2,55,234 ಕೋಟಿ ರೂಪಾಯಿ ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಇದೇ ಸಮಯದಲ್ಲೇ ಸೆಮಿಕಂಡಕ್ಟರ್ ವಲಯಕ್ಕೆ ಇನ್ನಷ್ಟು ಬಲ ತುಂಬಲು ಬರೋಬ್ಬರಿ 40,000 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿರುವುದು ಭವಿಷ್ಯದ ದೃಷ್ಟಿಯಿಂದ ದೊಡ್ಡ ಸಾಧನೆ ಆಗಲಿದೆ. ಈ ವಲಯ ಜಗತ್ತಿನಲ್ಲಿ ಸಾಕಷ್ಟು ಸಂಪತ್ತು ವೃದ್ಧಿಸುವ ಸಾಮರ್ಥ್ಯ ಹೊಂದಿದೆ ಎಂಬುದು ತುಂಬಾ ಮುಖ್ಯವಾದ ವಿಚಾರ.












Click it and Unblock the Notifications