Vegetables price: ಈರುಳ್ಳಿ, ಟೊಮೆಟೋ ಬೆಲೆ ಏರಿಕೆ! ಕುಸಿದ ಕೋಳಿ ಮಾಂಸದ ದರ
ರಾಜ್ಯದಲ್ಲಿ ಈರುಳ್ಳಿ ಬೆಲೆ ಏರಿಳಿತ ಕಾಣುತ್ತಿದೆ. ಕಳೆದ ವಾರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಈರುಳ್ಳಿ ಬೆಲೆ ಈ ವಾರ ಮತ್ತೆ ಏರಿಕೆಯತ್ತ ಸಾಗುತ್ತಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 50-60 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಮತ್ತೊಂದೆಡೆ ಈ ವರ್ಷ 200 ರೂಪಾಯಿ ದಾಟಿ ದಾಖಲೆ ಬರೆದು ನಂತರ ಪಾತಾಳ ಸೇರಿದ್ದ ಟೊಮೆಟೊ ಬೆಲೆ ಕೂಡ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆ.ಜಿ.ಗೆ 30-40 ರೂಪಾಯಿ ಆಗಿದೆ.

ಈರುಳ್ಳಿ, ಟೊಮೆಟೊ ಮಾತ್ರವಲ್ಲದೆ ಇತರೆ ತರಕಾರಿಗಳ ಬೆಲೆ ಕೂಡ ಹೆಚ್ಚಳವಾಗುತ್ತಿದೆ. ಮದುವೆ ಸೀಸನ್ ಶುರುವಾದದ್ದು ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಬೀನ್ಸ್ ಸದ್ಯ 50-60 ರೂಪಾಯಿಗೆ ಮಾರಾಟವಾಗುತ್ತಿದ್ದು, ಬದನೆಕಾಯಿ 30-40 ರೂಪಾಯಿಗೆ ಮಾರಾಟವಾಗುತ್ತಿದೆ.
ಎಲೆಕೋಸು ಮತ್ತು ಹೂ ಕೋಸು ದರ ಮಾತ್ರ ಕುಸಿತವಾಗಿದೆ. ಆದರೆ, ಮೂಲಂಗಿ, ಕ್ಯಾರೆಟ್, ನುಗ್ಗೆಕಾಯಿ, ಹಸಿರುಮೆಣಸಿನಕಾಯಿ, ಆಲೂಗೆಡ್ಡೆ, ಈರೇಕಾಯಿ ಬೆಲೆಗಳು ನಿಧಾನವಾಗಿ ಹೆಚ್ಚಾಗುತ್ತಿವೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದು ಈ ಬಾರಿ ಕೃಷಿ ಮೇಲೆ ಭಾರಿ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಬೆಲೆಗಳ ಮೇಲೂ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ.
ಸೊಪ್ಪು ಬೆಲೆಗಳು ಕೂಡ ಹೆಚ್ಚಳ
ಸೊಪ್ಪಿನ ಬೆಲೆ ಕೂಡ ಹೆಚ್ಚಳವಾಗುತ್ತಿದ್ದು, ಆವಕ ಕಡಿಮೆಯಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಎಲ್ಲಾ ಸೊಪ್ಪುಗಳ ದರ 10-15 ರೂಪಾಯಿ ಏರಿಕೆಯಾಗಿದೆ. ಕೊತ್ತಮರಿ, ಸಬ್ಬಕ್ಕಿ, ದಂಟು, ಮೆಂತ್ಯೆ, ಪಾಲಕ್, ಅರಿವೆ ಸೊಪ್ಪುಗಳ ದರ ಹೆಚ್ಚಾಗಿದೆ.
ಅಕ್ಕಿ, ರಾಗಿ ಬೆಲೆ ಕೂಡ ಹೆಚ್ಚಳವಾಗಿದ್ದು ಕೊಳ್ಳುಗರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ರಾಗಿ, ಅಕ್ಕಿ ಪೂರೈಕೆಯಾಗದೇ ಇರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕಳೆದ ಕೆಲವು ದಿನಗಳಲ್ಲೆ ರಾಗಿ ಮತ್ತು ಅಕ್ಕಿ ದರ ಪ್ರತಿ ಕೆ.ಜಿ. ಗೆ 4-5 ರೂಪಾಯಿ ಹೆಚ್ಚಳವಾಗಿದೆ.
ಕಡಿಮೆಯಾದ ಕೋಳಿ ಮಾಂಸದ ದರ
ಕಾರ್ತಿಕ ಮಾಸದಲ್ಲಿ ಮಾಂಸಕ್ಕೆ ಬೇಡಿಕೆ ಕಡಿಮೆ ಇರುವ ಕಾರಣ ಕೋಳಿ ಮಾಂಸದ ದರ ಇಳಿಕೆಯಾಗಿದೆ. ಬ್ರಾಯ್ಲರ್ ಕೋಳಿ ಪ್ರತಿ ಕೆ.ಜಿ.ಗೆ 80-90 ರೂಪಾಯಿ ಇದ್ದರೆ, ರೆಡಿ ಚಿಕನ್ 160-170 ರೂ. ಮತ್ತು ಸ್ಕಿನ್‌ಲೆಸ್ 190-200 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಮೊಟ್ಟೆ ಬೆಲೆ ಮಾತ್ರ ಕಡಿಮೆಯಾಗಿಲ್ಲ, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಇನ್ನೂ 6 ರೂಪಾಯಿ ಆಸುಪಾಸಿನಲ್ಲಿದೆ.
ಸಮುದ್ರ ಮೀನಿ ದರದಲ್ಲಿ ಭಾರಿ ಹೆಚ್ಚಳವಾಗಿದೆ. ಮಿಚಾಂಗ್ ಚಂಡಮಾರುತದ ಕಾರಣ ಹಡಗುಗಳು ಲಂಗರು ಹಾಕಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದ ಕಾರಣ ಪೂರೈಕೆ ತೀವ್ರವಾಗಿ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ. ಬುಂಗುಡೆ ಕೆ.ಜಿ. ಗೆ 170-180 ರೂಪಾಯಿ ಇದ್ದರೆ. ಅಂಜಲ್ 900-1000, ಕಪ್ಪುಮಾಂಜಿ 1000-1200 ರೂಪಾಯಿಗೆ ಮಾರಾಟವಾಗುತ್ತಿದೆ.












Click it and Unblock the Notifications