ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ ಮೋಟಾರ್ಸ್
ಆಟೋಮೊಬೈಲ್ ಉತ್ಪಾದಕರು ಮೇ ತಿಂಗಳ ಕಾರು ಉತ್ಪಾದನೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಸ್ವದೇಶಿ ಕಾರು ಉತ್ಪಾದಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರತಿಸ್ಪರ್ಧಿ ಹ್ಯುಂಡೈಗಿಂತ ಹೆಚ್ಚಿನ ಕಾರುಗಳನ್ನು ಉತ್ಪಾದನೆ ಮಾಡಿದೆ ಎಂದು ತಿಳಿಸಿದೆ.
ಹ್ಯುಂಡೈಗಿಂತ ಹೆಚ್ಚಿನ ಕಾರುಗಳನ್ನು ಉತ್ಪಾದನೆ ಮಾಡುವ ಮೂಲಕ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ ಮೋಟಾರ್ಸ್ ಎರಡನೇ ಸ್ಥಾನಕ್ಕೇರಿದೆ. ಮಾರುತಿ ಸುಜುಕಿ ಮೊದಲನೇ ಸ್ಥಾನದಲ್ಲಿದೆ.
ಟಾಟಾ ಮೋಟಾರ್ಸ್ ತಮ್ಮ ದೇಶೀಯ ಡೀಲರ್ ಗಳಿಗೆ 43,341 ಕಾರುಗಳನ್ನು ರವಾನಿಸಿದೆ. ಹ್ಯುಂಡೈ 42,293 ಕಾರುಗಳನ್ನು ರವಾನೆ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ ಮಾರುತಿ ಸುಜುಕಿ 1.24 ಲಕ್ಷ ಕಾರುಗಳನ್ನು ರವಾನೆ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.
ಟಾಟಾ ಮೋಟಾರ್ಸ್‌ನ ರವಾನಿಸಿರುವ ಒಟ್ಟು ಕಾರುಗಳಲ್ಲಿ ಟಾಟಾ ನೆಕ್ಸಾನ್ ಇವಿ ಮತ್ತು ಟಿಗೊರ್ ಇವಿಗಳ 3,454 ಎಲೆಕ್ಟ್ರಿಕ್ ವಾಹನಗಳು ಸೇರಿವೆ. ನಿಗದಿತ ದ್ವೈವಾರ್ಷಿಕ ನಿರ್ವಹಣೆ ಕಾರಣದಿಂದ ಹ್ಯುಂಡೈ ಆರು ದಿನ ಕಾರು ಉತ್ಪಾದನೆಯನ್ನು ನಿಲ್ಲಿಸಿದ್ದು, ಈ ಬಾರಿ ಕಾರುಗಳ ಪೂರೈಕೆ ಸಂಖ್ಯೆ ಕುಸಿಯಲು ಕಾರಣವಾಗಿದೆ.

ಹ್ಯುಂಡೈ ಹಿಂದಿಕ್ಕಿದ ಟಾಟಾ
ಟಾಟಾ ಮೋಟಾರ್ಸ್ ಹ್ಯುಂಡೈನ ಮಾಸಿಕ ರವಾನೆ ಅಂಕಿಅಂಶಗಳನ್ನು ಹಿಂದಿಕ್ಕಲು ಇದು ಎರಡನೇ ಬಾರಿಗೆ ಸಾಧ್ಯವಾಯಿತು. ಇದಕ್ಕೂ ಮೊದಲು, 2021ರ ಡಿಸೆಂಬರ್‌ನಲ್ಲಿ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ, ಪಂಚ್ ಮೈಕ್ರೋ ಎಸ್‌ಯುವಿ ಬಿಡುಗಡೆಯಾದಾಗ ಹ್ಯುಂಡೈಗಿಂತ ಟಾಟಾ ಮೋಟಾರ್ಸ್ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಪೂರೈಸಿತ್ತು.
ಸೆಮಿಕಂಡಕ್ಟರ್ ಕೊರತೆಯನ್ನು ನಿಭಾಯಿಸಲು ಟಾಟಾ ಮೋಟಾರ್ಸ್ ಸಮರ್ಥವಾಗಿ ಕೆಲಸ ಮಾಡಿದೆ. ಆದರೆ ಇತರ ಕಾರು ತಯಾರಕರು ಇನ್ನೂ ಸೆಮಿಕಂಡಕ್ಟರ್ ಕೊರತೆ ಎದುರಿಸುತ್ತಿದ್ದಾರೆ.

ಕಾಯುವಿಕೆಯ ಅವಧಿ ಕಡಿಮೆ
ಬೇರೆ ಕಾರುಗಳಿಗೆ ಹೋಲಿಸಿದರೆ ಟಾಟಾ ಕಾರುಗಳನ್ನು ಬುಕ್ಕಿಂಗ್ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪೂರೈಕೆ ಮಾಡುತ್ತಿದೆ. ಆದರೆ ಇತರೆ ಕಾರು ಉತ್ಪಾದಕರು ಕಾರುಗಳನ್ನು ಪೂರೈಸಲು ತಡ ಮಾಡುತ್ತಿರುವುದು ಕೂಡ ಟಾಟಾ ಕಾರುಗಳ ಮಾರಾಟ ಹೆಚ್ಚಾಗಲು ಕಾರಣವಾಗಿದೆ. ಹೊಸ ಮಾದರಿಯ, ವಿನ್ಯಾಸದ ಕಾರುಗಳನ್ನು ನೀಡುವ ಮೂಲಕ, ವೈಶಿಷ್ಟ್ಯತೆಗಳನ್ನು ಬದಲಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಹ್ಯುಂಡೈ 8,970 ಕಾರುಗಳನ್ನು ರಫ್ತು ಮಾಡಿದೆ. ಮಹೀಂದ್ರಾ 26,904 ಯುನಿಟ್‌ಗಳನ್ನು, ಕಿಯಾ ಮೋಟಾರ್ಸ್ 18,718 ಯುನಿಟ್‌ಗಳನ್ನು ರವಾನಿಸಿದೆ, ಟೊಯೊಟಾ 10,216 ಯುನಿಟ್‌ಗಳನ್ನು ರವಾನಿಸಿದೆ ಮತ್ತು ಹೋಂಡಾ 8,188 ಯುನಿಟ್‌ಗಳನ್ನು ರವಾನೆ ಮಾಡಿದೆ.

ಟಾಟಾ ಕರ್ವ್ ಇವಿ (Tata Curvv EV)
ಟಾಟಾ ತನ್ನ ಹೊಸ ಕಾರುಗಳ ಪರಿಕಲ್ಪನೆ, ವಿನ್ಯಾಸದ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. Curvv ಕಾರಿನ ಚಿತ್ರ ಬಿಡುಗಡೆ ಮಾಡಿದೆ. ಎರಡನೇ ತಲೆಮಾರಿನ ಪ್ಲಾಟ್‌ಫಾರ್ಮ್ ಆಧಾರದ ಮೇಲಿ ಉತ್ಪಾದನೆ ಮಾಡಲಾಗುತ್ತಿದೆ. ICE-ಪ್ಲಾಟ್‌ಫಾರ್ಮ್‌ನ ಹೆಚ್ಚು ಮಾರ್ಪಡಿಸಿದ ಆವೃತ್ತಿಯಾಗಿದೆ.
ಕೂಪೆ ಎಸ್‌ಯುವಿ ಮಾದರಿ ವಿನ್ಯಾಸ ಒಳಗೊಂಡಿದೆ. ಮೊದಲು ಎಲೆಕ್ಟ್ರಾನಿಕ್ ಕಾರು ಬಿಡುಗಡೆಯಾಗಲಿದ್ದು, ನಂತರ ಪೆಟ್ರೋಲ್, ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. 2023 ಅಥವಾ 2024 ರ ವೇಳೆಗೆ ಕೂಪೆ ಎಸ್‌ಯುವಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ನೆಕ್ಸಾನ್ ಮಾದರಿಯ ಎಕ್ಸ್1 ಫ್ಲಾಟ್ ಫಾರ್ಮ್ ಆಧರಿಸಿದ್ದು ಪರಿಷ್ಕರಣೆ ಮಾಡಲಾಗಿದೆ. ಬ್ಯಾಟರಿಗೆ ಹೆಚ್ಚಿನ ಮೀಸಲಿಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 400 ಕಿ.ಮೀ. ಚಲಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಟಾಟಾ ಅವಿನ್ಯಾ ಇವಿ
ಮತ್ತೊಂದು ಮಾದರಿ ಕಾರು ಅನಿನ್ಯಾ ಇವಿ ವಿನ್ಯಾಸ, ಪರಿಲ್ಪನೆ ಬಗ್ಗೆ ಮಾಹಿತಿ ಅನಾವರಣಗೊಂಡಿದೆ. ಅವಿನ್ಯಾ EV ಎಂದು ಕರೆಯಲಾಗುವ ಇದು ಟಾಟಾದ ಹೊಸ ಜೆನ್3 ಪ್ಲಾಟ್‌ಫಾರ್ಮ್ ಆಧರಿಸಿದೆ. ಟಾಟಾ ಮೋಟಾರ್ಸ್ ಇದನ್ನು "ಬಾರ್ನ್ ಎಲೆಕ್ಟ್ರಿಕ್" ಎಂದು ಕರೆಯುತ್ತಾರೆ. ಜೆನ್3 ಪ್ಲಾಟ್‌ಫಾರ್ಮ್ ಅನ್ನು ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪ್ಲಾಟ್‌ಫಾರ್ಮ್ ಆಧಾರಿತ ವಾಹನಗಳು 2025 ರಲ್ಲಿ ಮಾರುಕಟ್ಟೆಗೆ ಬರಲಿವೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ. ಚಲಿಸುವ ಸಾಮರ್ಥ್ಯ ಹೊಂದಿದೆ.
ಭವಿಷ್ಯದಲ್ಲಿ ವಾಯ್ಸ್ ಕಮಾಂಡ್‌ಗಳ ಮೂಲಕ ಕಾರುಗಳನ್ನು ನಿಯಂತ್ರಿಸಲಾಗುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.












Click it and Unblock the Notifications