Success Story: ಅನಾಥನಾಗಿ ಹುಟ್ಟಿ ಅನ್ನದಾತನಾಗಿ ಬೆಳೆದ ಹೋಟೆಲ್ ಮಾಲೀಕನ ಕತೆ
ಮನಸು ನಿರಾಳವಾಗಿದ್ದರೆ, ಪರೋಪಕಾರಿ ಮನಃಸ್ಥಿತಿ ಇದ್ದರೆ ಅವಕಾಶಗಳು ತಾನಾಗೆ ಒದಗಿ ಬರುತ್ತದೆ. ವ್ಯವಹಾರದಲ್ಲಿ ಲಾಭ-ನಷ್ಟದ ಜೊತೆಗೆ ತೃಪ್ತಿ ಕಾಣುವುದು ಮುಖ್ಯ. ರಾತ್ರಿ ಮಲಗುವಾಗ ಕಣ್ತುಂಬ ನಿದ್ರೆ ಬಂದರೆ ಅದೇ ಆ ದಿನದ ಸಾರ್ಥಕತೆ ಎನ್ನುತ್ತಾರೆ ಸರ್ಜಾಪುರ ಬಳಿಯ ಸೋಂಪುರ ಬಳಿಯಿರುವ ಬೀದಿಬದಿಯ ಹೋಟೆಲ್ ಮಾಲೀಕ ಪುಟ್ಟಾಚಾರ್ಯ.
ವ್ಯವಹಾರದಲ್ಲಿ ಕಷ್ಟ-ಸುಖ, ಲಾಭ-ನಷ್ಟಗಳ ನಡುವೆಯೂ ಆನಂದಮಯವಾಗಿ ಬದುಕುವುದು ಹೇಗೆಂಬುದರ ಕುರಿತು ಅವರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅನಾಥನಾಗಿ ಹುಟ್ಟಿದರೂ ಅನ್ನದಾತನಾದ ವ್ಯಕ್ತಿ
ಸಮಸ್ಯೆಗಳನ್ನೆ ಸಾಧನೆಯ ಮೆಟ್ಟಿಲಾಗಿಸಿಕೊಳ್ಳುವುದು ಹೇಗೆಂಬುದು ಪುಟ್ಟಾಚಾರ್ಯರ ಮಾತಿನಲ್ಲಿ ಕೇಳುವುದಾದರೆ, ನಾನು ಹುಟ್ಟುತ್ತಲೆ ತಂದೆ-ತಾಯಿ ನನ್ನ ಬಿಟ್ಟು ಎಲ್ಲಿಗೋ ಹೋಗಿ ಬಿಟ್ಟರು. ಇಂದಿಗೂ ಅವರು ಜೀವಂತವಾಗಿರಬಹುದು. ಆದರೆ, ಅವರು ಎಲ್ಲಿದ್ದಾರೆಂಬುದು ಗೊತ್ತಿಲ್ಲ. ಅವರ ಮುಖಗಳು ನೆನಪಿಗೆ ಬರುತ್ತಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ.
ನನ್ನ ದೊಡ್ಡಪ್ಪ-ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದೆ. ತಂಪಾದ ಹೊತ್ತಿನಲ್ಲಿ ನನ್ನ ದೊಡ್ಡಪ್ಪನನ್ನು ನೆನಸಿಕೊಳ್ಳಬೇಕು. ಸ್ವಂತ ಮಗನಂತೆ ನನ್ನನ್ನು ಸಾಕಿ ಸಲುಹಿದರು. ಅವರು ಹಾಕಿಕೊಟ್ಟ ಮಾನವೀಯ ಮೌಲ್ಯದ ಮಾರ್ಗದಲ್ಲಿ ನಡೆಯುತ್ತಿದ್ದೇನೆಂಬ ಹಮ್ಮೆ ನನಗಿದೆ. ಹಾಗೆ ನೋಡಿದರೆ ನಮ್ಮದು ಚಿನ್ನ ತಯಾರಿ ಮಾಡುವ ಕುಟುಂಬ. ನನ್ನ ತಾತ ಊರಿಗೆ ಊಟ ಹಾಕಿಸುವಷ್ಟು ಆರ್ಥಿಕವಾಗಿ ಶಕ್ತಿವಂತರಾಗಿದ್ದವರು. ಹಾಗೆಯೇ ಪರೋಪಕಾರಿಯೂ ಆಗಿದ್ದರೆಂದು ನನ್ನ ಹುಟ್ಟೂರಾದ ಯಮರೆ ಗ್ರಾಮದ ಹಿರಿಯರು ಅಭಿಮಾನದಿಂದ ಸ್ಮರಿಸುತ್ತಾರೆ. ಆದರೆ, ನನ್ನ ಅಪ್ಪ ಮಾತ್ರ ಅದಕ್ಕೆ ತದ್ವಿರುದ್ಧವಾಗಿದ್ದರು. ಅದರ ಪರಿಣಾಮವಾಗಿ ಹುಟ್ಟುತ್ತಲೆ ನಾನು ಅನಾಥನಾಗುವ ಪರಿಸ್ಥಿತಿ ಎದುರಿಸುವಂತಾಯಿತು ಎನ್ನುತ್ತಾರೆ.
ಆಸರೆಯಾದ ಹೋಟೆಲ್ ಉದ್ಯಮ
ಎಲ್ಲ ಸಮಯದಲ್ಲೂ ಬದುಕು ಸಾದಾ ಸೀದಾ ಇರುವುದಿಲ್ಲ. ಅಚ್ಚರಿಗಳ ತಿರುವುಗಳು ಎದುರಾಗುತ್ತವೆ. ಆ ತಿರುವುಗಳನ್ನು ಶ್ರದ್ಧೆಯಿಂದ ದಾಟಿದರೆ ಮುಂದೆ ಯಶಸ್ಸಿನ ದಾರಿ ನಮ್ಮದಾಗುತ್ತದೆ. ಒಂದು ವೇಳೆ ತಿರುವಿನಲ್ಲಿ ಸ್ವಲ್ಪ ಯಾಮಾರಿದರೆ ಪ್ರಪಾತಕ್ಕೆ ಬೀಳುವುದಂತು ಗ್ಯಾರಂಟಿ. ಇದೇ ರೀತಿಯಲ್ಲಿ ಹೋಟೆಲ್ ಉದ್ಯಮಿ ಪುಟ್ಟಾಚಾರ್ಯ ಅವರ ಬದುಕು ಸಹ ಆಕಸ್ಮಿಕ ತಿರುವುಗಳಿಂದ ಕೂಡಿತ್ತು. ಅದು ಹೇಗೆ ಅಂತೀರ; ಅವರ ಮಾತಲ್ಲೆ ಕೇಳೋಣ.
ಬೇರೆ, ಬೇರೆ ಕಡೆ ಕಾರ್ಮಿಕನಾಗಿ ಕೆಲಸ ಮಾಡಿದ ನಾನು, ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡು ಚಿಲ್ಲರೆ ಅಂಗಡಿಯೊಂದನ್ನು ಪ್ರಾರಂಭಿಸಿದೆ. ಕಷ್ಟನೊ-ಸುಖನೊ ಅನ್ನುತ್ತಾ ಅಂಗಡಿ ನಡೆಸುತ್ತಾ ಸಾಗುತ್ತಿದ್ದೆ. ಹೀಗೆ ಇರುವಾಗ ಸಂಬಂಧಿಕನೊಬ್ಬ ಅಂಗಡಿಯ ಜಗ್ಗಲಿಯ ಮೇಲೆ ಕೂತು, ತನ್ನ ಬದುಕಿನ ಸಮಸ್ಯೆಗಳನ್ನು ಹೇಳ ತೊಡಗಿದೆ. ಏನಾದ್ರು ವ್ಯವಹಾರ ಮಾಡಬೇಕೆಂದಿದ್ದೇನೆ. ಕೈಯಲ್ಲಿ ಹಣವಿಲ್ಲವೆಂದು ದುಖಿಃತನಾದ.
ಯಾವ ವ್ಯವಹಾರ ಮಾಡಬೇಕೆಂದಿದ್ದೀಯಾ ಹೇಳು. ಬಂಡವಾಳದ ವಿಷಯ ಆಮೇಲೆ ಮಾತನಾಡೋಣ ಅಂದೆ. ಹೋಟೆಲ್ ಮಾಡೋಣ ಅಂತಿದ್ದೀನಿ ಅಂದ. ಸರ್ಜಾಪುರ-ಸೋಂಪುರ ರಸ್ತೆಯಲ್ಲಿ ಜನರ ಒಡನಾಟ ಹೆಚ್ಚಾಗಿಯೇ ಇದೆ. ಅಲ್ಲಿ ಪ್ರಾರಂಭಿಸಿದರೆ ಒಳ್ಳೆಯದು ಎಂದು ಇಬ್ಬರು ಮಾತನಾಡಿಕೊಂಡೆವು. ನಂತರ ನಾನೇ ಮುಂದುವರೆದು ನಾನೇ ಬಂಡವಾಳ ಹಾಕುತ್ತೇನೆ. ನೀನೆ ಹೋಟೆಲ್ ಮಾಲೀಕನಾಗು. ನಾನು ಈಗ ನಡೆಸುತ್ತಿರುವ ಚಿಲ್ಲರೆ ಅಂಗಡಿಯನ್ನು ಬಂದ್ ಮಾಡಿ, ನಿನ್ನ ಸಹಾಯಕನಾಗಿ ಕೆಲಸ ಮಾಡ್ತೀನಿ. ನನಗೊಂದು ಪೇಮೆಂಟ್ ಫಿಕ್ಸ್ ಮಾಡು. ಬಂಡವಾಳದ ಹಣ ನಿಧಾನವಾಗಿ ಕೊಡುವೆಯಂತೆ ಎಂದು ಆತನಿಗೆ ಭರವಸೆ ತುಂಬಿದೆ.
ಸೋಂಪುರ ಗೇಟ್ ಬಳಿಯ ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗ ನೋಡಿದೆವು. ಅಡಿಗೆ ಮಾಡುವ ಭಟ್ಟನನ್ನು ನೇಮಿಸಿಕೊಂಡೆವು. ಲಕ್ಷಾಂತರ ರೂ. ಬಂಡವಾಳ ಹಾಕಿ ಹೋಟೆಲ್‌ಗೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು ತಂದೆ. ಆದರೆ, ನಾನು ಹೋಟೆಲ್ ಮಾಲೀಕನೆಂದು ನೇಮಿಸಿಕೊಂಡಿದ್ದ ನನ್ನ ಸಂಬಂಧಿ ಮೊದಲ ದಿನವಷ್ಟೆ ಬಂದು ಕೈ ಕೊಟ್ಟುಬಿಟ್ಟ.
ಒಮ್ಮೆಲೆ ನನಗೆ ಗಾಬರಿ ಆಯ್ತು. ಏನಪ್ಪ ಮಾಡೋದು ಇವನನ್ನೆ ನಂಬಿಕೊಂಡು ಅಂಗಡಿಯನ್ನು ಮುಚ್ಚಿ ಇಲ್ಲಿಗೆ ಬಂದರೆ ಸರಿಯಾಗಿ ಕೈಕೊಟ್ಟ ಅಂತೇಳಿ ತಲೆ ಮೇಲೆ ಕೈಯಿಟ್ಟು ಕುಳಿತಿರುವಾಗ ಅಡುಗೆ ಭಟ್ಟ ಬಂದು ನಾನಿದ್ದೇನೆ. ನೀವು ಚಿಂತೆ ಮಾಡಬೇಡಿ. ಪ್ರಾರಂಭದಲ್ಲಿ ಸ್ವಲ್ಪ ಗಲಿಬಿಲಿ ಆಗಬಹುದು ಅಂತೇಳಿದ. ಆತನ ಭರವಸೆಯ ಮಾತಿನಿಂದ ಸ್ವಲ್ಪ ಧೈರ್ಯ ಬಂತು.
ನಮ್ಮ ಬೀದಿ ಬದಿಯ ಹೋಟೆಲ್ ಒಂದೇ ವಾರಕ್ಕೆ ಸುತ್ತಮುತ್ತಲೆಲ್ಲ ಫೇಮಸ್ ಆಯ್ತು. ನಮ್ಮ ಅಡುಗೆ ಭಟ್ಟನ ಕೈ ರುಚಿ ಸವಿಯಲು ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ, ಅಡುಗೆ ಭಟ್ಟನು ಕೆಲವೇ ತಿಂಗಳುಗಳಲ್ಲಿ ಕೈಕೊಟ್ಟ, ಜೊತೆಗೆ ನನ್ನ ಬಳಿ ಒಂದು ಲಕ್ಷ ರೂ.ಗೂ ಹೆಚ್ಚು ಸಾಲ ಪಡೆದು ಪರಾರಿಯಾದ. ಆದರೂ ಆತ ಹೇಳಿಕೊಟ್ಟು ಅಡುಗೆಯ ರುಚಿ ನಾನು ಹೋಟೆಲ್ ಉದ್ಯಮದಲ್ಲೆ ನೆಲೆ ನಿಲ್ಲುವಂತೆ ಮಾಡಿತು.
ಹೋಟೆಲ್ ಉದ್ಯಮದಲ್ಲೆ ನೆಮ್ಮದಿ
ನಮ್ಮ ಅಡುಗೆ ಭಟ್ಟ ಹೋದ ನಂತರ ಒಂದೆರಡು ತಿಂಗಳು ಭಾರಿ ಕಷ್ಟ ಪಟ್ಟಿದ್ದೇನೆ. ನಂತರ ಎಲ್ಲವೂ ಕರಗತವಾಯಿತು. ನಾವು ಯಾವುದೇ ಅಡುಗೆಗೆ ಟೇಸ್ಟಿಂಗ್ ಪೌಡರ್ ಹಾಕಲ್ಲ. ಪಲಾವ್ ಅನ್ನು ಬಿರಿಯಾನಿ ರುಚಿ ಬರುವ ರೀತಿ ಮಾಡಲು ಪ್ರಾವೀಣ್ಯತೆ ಪಡೆದಿದ್ದೇನೆ. ಇಡ್ಲಿಯನ್ನು ಹೂವಿನಷ್ಟು ಮೃದುವಾಗಿ ಮಾಡ್ತೀನಿ. ಕಳೆದ ಐದು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ಪ್ರಾರಂಭದಲ್ಲಿ ನನ್ನ ಅಡುಗೆಯ ಕೈ ರುಚಿ ನೋಡಿದವರು ಇಂದಿಗೂ ನನ್ನ ಹೋಟೆಲ್ ಗೆ ಹುಡುಕಿಕೊಂಡು ಬರುತ್ತಾರೆ.
ಪ್ರತಿ ದಿನ ಹಲವು ಮಂದಿ ಫ್ರೀಯಾಗಿಯೇ ತಿಂದು ಹೋಗ್ತಾರೆ. ನಾನು ನೋಡಿಯೂ ನೋಡಿದಂತೆ ಇದ್ದು ಬಿಡುತ್ತೇನೆ. ನಾನು ಹಸಿವನ್ನು ಕಂಡುಂಡವನು. ಹೀಗಾಗಿ ನನ್ನ ಪ್ರಥಮ ಆದ್ಯತೆ ಜನರ ಹಸಿವನ್ನು ನೀಗಿಸುವುದು ನಂತರ ಉಳಿದದ್ದು ಎಂಬ ಮನಃಸ್ಥಿತಿಯಲ್ಲಿಯೇ ಹೋಟೆಲ್ ಉದ್ಯಮದಲ್ಲಿ ತೊಡಗಿದ್ದೇನೆ. ಇಷ್ಟಾಗಿಯೇ ಆ ಭಗವಂತ, ನನ್ನ ಗ್ರಾಹಕರು ಕೈ ಬಿಟ್ಟಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಎಕರೆ ಜಮೀನು ತೆಗೆದುಕೊಂಡಿದ್ದೇನೆ. ರಾಗಿ ಬೆಳೆಯುತ್ತಿದ್ದೇನೆ. ನಾನು ಬೆಳೆದ ರಾಗಿಯನ್ನು ಬಹಳ ಸಂತೋಷದಿಂದ ಮುದ್ದೆ ಮಾಡಿ ನನ್ನ ಗ್ರಾಹಕರಿಗೆ ಪ್ರೀತಿಯಿಂದ ಉಣ ಬಡಿಸುತ್ತೇನೆ. ಇದಕ್ಕಿಂದ ನೆಮ್ಮದಿಯ ಜೀವನ ಮತ್ಯಾವುದು ಇದೆ ಎನ್ನುತ್ತಾರೆ ಪುಟ್ಟಾಚಾರ್ಯರು.












Click it and Unblock the Notifications