ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ: ಷೇರು ಸೂಚ್ಯಂಕ ಗಡಗಡ
ಮುಂಬೈ, ಡಿಸೆಂಬರ್ 20: ಒಂದು ವಾರದಿಂದ ಚೇತರಿಕೆಯ ಗತಿಯಲ್ಲಿದ್ದ ಷೇರುಪೇಟೆ, ಗುರುವಾರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿನ ಹೆಚ್ಚಳದಿಂದಾಗಿ ತಲ್ಲಣಗೊಂಡಿದೆ.
ಬೆಳಗಿನ ವ್ಯಾಪಾರ ವಹಿವಾಟು ಆರಂಭವಾದಾಗಲೇ ಬಿಎಸ್ ಇ ಸೆನ್ಸೆಕ್ಸ್ 250ಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿತು. ಕೊನೆಗೆ ಸಂಜೆ ವೇಳೆಗೆ ಚೇತರಿಕೆ ಕಂಡು 52.66 ಅಂಕಗಳೊಂದಿಗೆ (ಶೇ 0.14) 36,431.67ರಲ್ಲಿ ಅಂತ್ಯಗೊಂಡಿತು.
ಎನ್‌ಎಸ್‌ಇ ನಿಫ್ಟಿ 15.60 ಅಂಕಗಳಷ್ಟು ಕುಸಿತ ಅನುಭವಿಸಿದೆ. 10,951.70 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು ಈ ವರ್ಷ ನಾಲ್ಕನೆಯ ಬಾರಿಗೆ ಹೆಚ್ಚಳ ಮಾಡಿದ್ದು ಜಾಗತಿಕ ಮಾರುಕಟ್ಟೆಯಲ್ಲಿನ ಷೇರು ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಮುಂದಿನ ವರ್ಷವೂ ಬಡ್ಡಿದರವನ್ನು ಇನ್ನಷ್ಟು ಹೆಚ್ಚಿಸುವ ಸುಳಿವು ನೀಡಿದೆ.
ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಶೇ 2.25ರಿಂದ 2.50ಗೆ ಹೆಚ್ಚಿಸಿದೆ. 2008ರಿಂದ ಇದುವರೆಗಿನ ಅವಧಿಯಲ್ಲಿ ಇದು ಅತ್ಯಧಿಕ ಬಡ್ಡಿದರವಾಗಿದೆ.
ಯೆಸ್ ಬ್ಯಾಂಕ್, ಹೀರೋ ಮೊಟೊಕಾರ್ಪ್, ಎಂ ಆಂಡ್ ಎಂ, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಎಲ್ ಆಂಡ್ ಟಿ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಶೇ 3.93ರಷ್ಟು ಸೆನ್ಸೆಕ್ಸ್ ಗಳಿಕೆ ಕಂಡಿವೆ.
ಆದರೆ, ಭಾರ್ತಿ ಏರ್ ಟೆಲ್, ಎಸ್ ಬಿಐ, ವಿಪ್ರೋ, ವೇದಾಂತ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ 2.18ರಷ್ಟು ಇಳಿಕೆ ಅನುಭವಿಸಿವೆ.
ಎರಡೂ ವಿನಿಮಯ ಕೇಂದ್ರಗಳಲ್ಲಿ ಪಿಎಸ್ ಯು ಬ್ಯಾಂಕುಗಳು ಅತ್ಯಧಿಕ ಹಿನ್ನಡೆ ಅನುಭವಿಸಿವೆ.












Click it and Unblock the Notifications