Share Market: ಷೇರು ಮಾರುಕಟ್ಟೆ ಅಪಾಯದಲ್ಲಿದೆ; ರಾಹುಲ್ ಗಾಂಧಿ ಆತಂಕ!
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದ ಷೇರು ಮಾರುಕಟ್ಟೆ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯುಎಸ್ ಸ್ಟಾಕ್ ಸೆಲ್ಲರ್ ಹಿಂಡೆನ್‌ಬರ್ಗ್ ರೀಸರ್ಚ್, ಅದಾನಿ ಷೇರು ಹಗರಣದಲ್ಲಿ ಸೆಬಿ ಮುಖ್ಯಸ್ಥರ ಕೈವಾಡವಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಈ ಹೇಳಿಕೆ ಬಂದಿದೆ. ಹಿಂಡೆನ್‌ಬರ್ಗ್ ವರದಿ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವ ಆತಂಖ ಶುರುವಾಗಿದೆ.
ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡಿದ್ದು, ಭಾರತದ ಮಾರುಕಟ್ಟೆ ನಿಯಂತ್ರಕ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥರ ಹೆಸರು ಹಿಂಡೆನ್‌ಬರ್ಗ್ ವರದಿಯಲ್ಲಿ ಕೇಳಿಬಂದಿರುವುದಕ್ಕೆ ರಾಹುಲ್ ಗಾಂಧಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

"ಭಾರತೀಯ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಗಳು ರಾಜಿ ಮಾಡಿಕೊಂಡಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಪಾಯವಿದೆ ಎಂದು ನಿಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಅದಾನಿ ಷೇರು ಹಗರಣದಲ್ಲಿ ಸಹಾಯ ಮಾಡಿದ್ದಕ್ಕಾಗಿ, ಅದಾನಿ ಅವರ ವಿದೇಶಿ ಷೇರುಗಳಲ್ಲಿ ಪಾಲು ಪಡೆದಿದ್ದಾರೆ ಎಂದು ಹಿಂಡೆನ್‌ಬರ್ಗ್ ಆರೋಪ ಮಾಡಿತ್ತು.
ಶನಿವಾರ ಬಿಡುಗಡೆಯಾದ ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಧವಿ ಬುಚ್ ಮತ್ತು ಆಕೆಯ ಪತಿ ಧವಲ್ ಬುಚ್ ಅವರು ಬರ್ಮುಡಾ ಮೂಲದ ಗ್ಲೋಬಲ್ ಆಪರ್ಚುನಿಟೀಸ್ ಫಂಡ್‌ನ ಉಪ-ನಿಧಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದೆ. ವರದಿಯ ಪ್ರಕಾರ ಈ ನಿಧಿಯು ಅದಾನಿ ಗ್ರೂಪ್‌ನ ಸ್ಟಾಕ್ ಟ್ರೇಡಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದೆ.
2017 ರಲ್ಲಿ ಮಾಧಬಿ ಪುರಿ ಬುಚ್ ಸೆಬಿಗೆ ಸೇರುವ ಮೊದಲು ಧವಲ್ ಬುಚ್ ಖಾತೆಯ ಏಕೈಕ ಆಪರೇಟರ್ ಆಗಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದೊಂದು ಗಂಭೀರ ಆರೋಪ ಎಂದು ಕರೆದಿರುವ ರಾಹುಲ್ ಗಾಂಧಿ, ಅಂಪೈರ್ ಸ್ವತಃ ರಾಜಿ ಮಾಡಿಕೊಂಡಂತೆ ಎಂದು ಹೇಳಿದ್ದಾರೆ.
ಯಾಕೆ ರಾಜೀನಾಮೆ ಕೊಟ್ಟಿಲ್ಲ
ತಮ್ಮ ಮೇಲೆ ಆರೋಪ ಬಂದ ಹೊರತಾಗಿಯೂ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಇನ್ನೂ ರಾಜೀನಾಮೆ ಕೊಟ್ಟಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ - ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷೆ ಅಥವಾ ಗೌತಮ್ ಅದಾನಿ? ಎಂದು ಪ್ರಶ್ನೆ ಮಾಡಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅದಾನಿ ಗ್ರೂಪ್ ವಿರುದ್ಧದ ಪ್ರಕರಣನವನ್ನು ಮರುಪರೀಶಲನೆ ಮಾಡಬೇಕು ಎಂದು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಹೊಸ ಆರೋಪಗಳು ಕೇಳಿ ಬಂದಿದ್ದು, ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications