ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ, ಹೋಟೆಲ್‌ಗಳಲ್ಲಿ ದರ ಏರಿಕೆ?
ಬೆಂಗಳೂರು, ಜುಲೈ 04; ಜುಲೈ ತಿಂಗಳ ಆರಂಭದಲ್ಲಿಯೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಉದ್ಯಮಕ್ಕೆ ಸಿಲಿಂಡರ್ ಬೆಲೆ ಹೆಚ್ಚಳ ಮತ್ತಷ್ಟು ಸಂಕಷ್ಟ ತಂದಿದೆ.
ತೈಲ ಉತ್ಪನ್ನ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 7 ರೂ. ಏರಿಕೆ ಮಾಡಿವೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಏರಿಕೆಯನ್ನು ಮಾಡಿಲ್ಲ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯ ಬಳಿಕ ನವದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ ಬೆಲೆ 1,773 ರಿಂದ 1,780 ರೂ.ಗೆ ಏರಿಕೆಯಾಗಿದೆ. ಶನಿವಾರದಿಂದಲೇ ದೆಹಲಿ ಹೊರತುಪಡಿಸಿ ಉಳಿದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 8 ರೂ. ಹೆಚ್ಚಳವಾಗಿತ್ತು.
ಬೆಂಗಳೂರು ನಗರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರ 1,860ಕ್ಕೆ ಏರಿಕೆಯಾಗಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಮುಂಬೈನಲ್ಲಿ 8 ರೂ. 50 ಪೈಸೆ ಹೆಚ್ಚಳವಾಗಿತ್ತು. ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 1,895 ಆಗಿದೆ.
ಪ್ರತಿ ತಿಂಗಳ ಆರಂಭದಲ್ಲಿಯೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುತ್ತವೆ. ಆದರೆ ಈ ಬಾರಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿಲ್ಲ.
ಬೆಲೆ ಏರಿಕೆಯಿಂದ ಕಂಗಾಲು; ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳ ಹೆಚ್ಚಳದಿಂದಾಗಿ ಬೆಂಗಳೂರು ನಗರದಲ್ಲಿ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆಯಿಂದ ಸಾಕಷ್ಟು ಸವಾಲ ಎದುರಿಸುತ್ತಿದ್ದಾರೆ. ಹಾಲಿನ ದರವೂ ಸಹ ಏರಿಕೆಯಾಗುವ ನಿರೀಕ್ಷೆ ಇದೆ.
ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳ ಹೆಚ್ಚಳವಾದ ಬಳಿಕ ಹೋಟೆಲ್‌ಗಳಲ್ಲಿ ಊಟ, ಉಪಹಾರದ ದರವನ್ನು ಏರಿಕೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಜೂನ್ ತಿಂಗಳಿನಲ್ಲಿ ಹೋಟೆಲ್ ಮಾಲೀಕರ ಸಂಘದವರು ದರಗಳನ್ನು ಹೆಚ್ಚಳ ಮಾಡುವ ಕುರಿತು ಸುಳಿವು ನೀಡಿದ್ದರು.
ನೈಋತ್ಯ ಮುಂಗಾರು ಮಳೆ ಸರಿಯಾಗಿ ಸುರಿಯದ ಕಾರಣ ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದೆ. ಟೊಮೇಟೊ ಬೆಲೆ ಈಗಾಗಲೇ ಬೆಂಗಳೂರು ನಗರದಲ್ಲಿ ಈಗಾಗಲೇ 120ರ ಗಡಿ ದಾಟಿದೆ. ಈಗ ಸಿಲಿಂಡರ್‌ಗಳ ಬೆಲೆಯೂ ಏರಿಕೆಯಾಗಿದ್ದು, ಹೋಟೆಲ್ ಮಾಲೀಕರ ನಷ್ಟವನ್ನು ಹೆಚ್ಚಿಸಿದೆ.
ಪದೇ ಪದೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಹೆಚ್ಚಳ ಆಗುತ್ತಿರುವುದರಿಂದ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಒಂದು ವೇಳೆ ಬೆಂಗಳೂರು ನಗರದಲ್ಲಿ ಹಾಲಿನ ದರ ಮತ್ತು ಜಲಮಂಡಳಿ ನೀರಿನ ದರವನ್ನು ಏರಿಕೆ ಮಾಡಿದರೆ ಹೋಟೆಲ್‌ಗಳಲ್ಲಿ ದರ ಖಂಡಿತವಾಗಿ ಹೆಚ್ಚಳವಾಗಲಿದೆ.












Click it and Unblock the Notifications