2021ರಲ್ಲಿ ದಾಖಲೆ ಪ್ರಮಾಣದಲ್ಲಿ ಮಾರುತಿ ಸುಜುಕಿ ವಾಹನ ರಫ್ತು
ನವದೆಹಲಿ, ಜನವರಿ 4: ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಹಾಗೂ ರಫ್ತು ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ 2021ರಲ್ಲಿ ಅತಿ ಹೆಚ್ಚು ವಾಹನಗಳನ್ನು ರಫ್ತು ಮಾಡಿದೆ. ಸರಿ ಸುಮಾರು 2 ಲಕ್ಷಕ್ಕೂ ಅಧಿಕ ವಾಹನಗಳನ್ನು ಒಂದು ಕ್ಯಾಲೆಂಡರ್ ವರ್ಷದಲ್ಲಿ ರಫ್ತು ಮಾಡಿ ದಾಖಲೆ ಬರೆದಿದೆ.
2021ರಲ್ಲಿ ಮಾರುತಿ ಸುಜುಕಿ ಒಟ್ಟು 2,05, 450 ವಾಹನಗಳನ್ನು ರಫ್ತು ಮಾಡಿದೆ, ಇದು ಇಲ್ಲಿ ತನಕ ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಕಂಡ ಅತಿ ಹೆಚ್ಚು ರಫ್ತು ಪ್ರಮಾಣವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಹೊಸ ಮೈಲಿಗಲ್ಲು ಸಾಧಿಸಲು ಗ್ರಾಹಕರು ನಮ್ಮ ಉತ್ಪನ್ನಗಳ ಮೇಲೆ ಇರಿಸಿರುವ ವಿಶ್ವಾಸವೇ ಕಾರಣ, ಉತ್ತಮ ಗುಣಮಟ್ಟ, ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಕ್ಷಮತೆ, ಕಡಿಮೆ ವೆಚ್ಚದ ನಿರ್ವಹಣೆ ಮೂಲಕ ವಿಶ್ವದೆಲ್ಲೆಡೆ ಗ್ರಾಹಕರ ವಿಶ್ವಾಸವನ್ನು ನಮ್ಮ ಸಂಸ್ಥೆ ಕಾಯ್ದುಕೊಂಡಿದೆ. ಸುಜುಕಿ ಮೋಟರ್ ಕಾರ್ಪೊರೇಷನ್ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಸಂಸ್ಥೆಯ ವಿಸ್ತರಣೆ ಇನ್ನಷ್ಟು ಸುಲಭವಾಗಿದೆ, ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಇದು ಶುಭ ಸುದ್ದಿಯಾಗಿದೆ,'' ಎಂದು ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಗೂ ಸಿಇಒ ಕೆನಿಚಿ ಅಯುಕವಾ ತಿಳಿಸಿದರು.

ಕಾಂಪ್ಯಾಕ್ಟ್ ವಾಹನಗಳು, ಎಲ್‌ಸಿವಿಗಳು ಮತ್ತು ವ್ಯಾನ್‌ಗಳು ಸೇರಿದಂತೆ ಸುಮಾರು 15 ಮಾದರಿ ವಾಹನಗಳನ್ನು ರಫ್ತು ಮಾಡಲಾಗುತ್ತಿದೆ. ಇದರಲ್ಲಿ ಹೊಸ ಸೆಲೆರಿಯೋ, ಆಫ್ ರೋಡ್ ವಾಹನ ಜಿಮ್ನಿ ಕೂಡಾ ಸೇರಿದೆ. 2021ರಲ್ಲಿ ಅತಿ ಹೆಚ್ಚು ರಫ್ತು ಕಂಡ ವಾಹನಗಳ ಪೈಕಿ ಬಲೆನೋ, ಡಿಜೈರ್, ಸ್ವಿಫ್ತ್, ಎಸ್ ಪ್ರೆಸ್ಸೋ ಹಾಗೂ ಬ್ರೆಜಾ ಕ್ರಮವಾಗಿ ಟಾಪ್ ಸ್ಥಾನದಲ್ಲಿವೆ.
1986-87ರಿಂದ ರಫ್ತು ಕ್ಷೇತ್ರದಲ್ಲಿರುವ ಮಾರುತಿ ಸುಜುಕಿ ಮೊದಲಿಗೆ ಹಂಗೇರಿ ದೇಶಕ್ಕೆ ತನ್ನ ಕಾರುಗಳನ್ನು ಪರಿಚಯಿಸಿತ್ತು. ಸದ್ಯ ಸುಮಾರು 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿದ್ದು, ಈ ಸಮಯಕ್ಕೆ 2.15 ಲಕ್ಷ ವಾಹನಗಳನ್ನು ರಫ್ತು ಮಾಡಿದೆ. ಲ್ಯಾಟಿನ್ ಅಮೆರಿಕ, ಅಸೀಯನ್, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಉಪಖಂಡದ ಇತರೆ ದೇಶಗಳಲ್ಲಿ ಮಾರುತಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ.
ಉತ್ಪಾದನೆ ಕುಸಿತ, ಬೆಲೆ ಏರಿಕೆ ಕಂಡಿದ್ದ ಮಾರುತಿ ಸುಜುಕಿ:
2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿತ್ತು. ಜೊತೆಗೆ ಬಿಎಸ್ 6 ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ. ಡೀಸೆಲ್ ಕಾರುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಕೂಡಾ ಮುಂದಾಗಿದೆ. ಜೊತೆಗೆ, ಮಾರುತಿ ಸುಜುಕಿಯ ಆಯ್ದ ವಾಹನಗಳ ಎಕ್ಸ್ ಷೋರೂಂ ಬೆಲೆ ಶೇ 1.9ರಷ್ಟು ಏರಿಕೆ ಮಾಡಲಾಗಿದೆ ಎಂದು ಷೇರುಪೇಟೆಗೆ ಸಂಸ್ಥೆ ತಿಳಿಸಿತ್ತು.
ಬೆಲೆ ಏರಿಕೆ ಏಕೆ?: ಕಚ್ಚಾವಸ್ತು ಕೊರತೆ, ಸೆಮಿಕಂಡೆಕ್ಟರ್ ಚಿಪ್, ಬಿಡಿ ಭಾಗಗಳ ಕೊರತೆ, ಉತ್ಪದನಾ ವೆಚ್ಚ ಹೆಚ್ಚಳವಾಗಿದ್ದು, ಬೇಡಿಕೆಗೆ ತಕ್ಕ ಮಾರಾಟವಾಗದ ಕಾರಣ ಬೆಲೆ ಏರಿಕೆ ಮಾಡಲಾಗಿತ್ತು. ''ಉತ್ಪಾದನಾ ವೆಚ್ಚ ನಿರ್ವಹಣಾ ಹೊರೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ'' ಎಂದು ಮಾರುತಿ ಸುಜುಕಿ ಇಂಡಿಯಾದ (ಮಾರ್ಕೆಟಿಂಗ್) ಕಾರ್ಯಕಾರಿ ನಿರ್ದೇಶಕ ಶಶಾಂಕ್ ವಾಸ್ತವ ಪ್ರತಿಕ್ರಿಯಿಸಿದ್ದರು.
ಜನಪ್ರಿಯ ಹ್ಯಾಚ್ ಬ್ಯಾಕ್ಸ್ ಸರಣಿಯ ಸ್ವಿಫ್ಟ್ ಹಾಗೂ ಬಲೆನೋಗೆ ಬೇಕಾದ ಚಿಪ್ ಅಲಭ್ಯವಾಗಿರುವುದರಿಂದ ಉತ್ಪದನಾ ಸಾಮರ್ಥ್ಯವನ್ನು ಸೆಪ್ಟೆಂಬರ್ ತಿಂಗಳಲ್ಲಿ ತಗ್ಗಿಸಲು ಸಂಸ್ಥೆ ಮುಂದಾಗಿದೆ. ಪೆಟ್ರೋಲ್ ಮಾದರಿಯ 1,81,754 ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಇದು ಮಾರುತಿ ಸುಜುಕಿ ಇತಿಹಾಸದಲ್ಲೇ ಅತಿ ದೊಡ್ಡ ರೀಕಾಲ್ ಎನಿಸಿಕೊಂಡಿತ್ತು.












Click it and Unblock the Notifications