ಮೇಕ್ ಇನ್ ಇಂಡಿಯಾ ಲೋಗೋ ಕದ್ದಿದ್ದಲ್ಲ: ಮೋದಿ ಸರ್ಕಾರ
ನವದೆಹಲಿ, ಜೂ.3: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ 'ಮೇಕ್ ಇನ್ ಇಂಡಿಯಾ' ಕ್ಕೆ ಬಳಸಿರುವ ಲೋಗೋ ಸ್ವಿಜರ್ಲೆಂಡ್ ನಿಂದ ಕದ್ದಿದ್ದು ಎಂಬ ವರದಿಯನ್ನು ಎನ್ ಡಿಎ ಸರ್ಕಾರ ತಳ್ಳಿ ಹಾಕಿದೆ.
ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ಸಣ್ಣ ಉದ್ದಿಮೆಗಳ ಅಭಿವೃದ್ಧಿಗಾಗಿ 2014ರಲ್ಲಿ ಮೋದಿ ಸರ್ಕಾರ 'ಮೇಕ್ ಇನ್ ಇಂಡಿಯಾ' ಯೋಜನೆ ಜಾರಿಗೊಳಿಸಿತ್ತು. ಇದಕ್ಕಾಗಿ ವಿವಿಧ ಕ್ಷೇತ್ರಗಳ ಪರಿಚಯ ನೀಡುವ ಒಳಭಾಗ ಹೊಂದಿರುವ ಸಿಂಹದ ಆಕೃತಿಯನ್ನು ಅಧಿಕೃತ ಲೋಗೋ ಆಗಿ ಬಳಸಲಾಗಿತ್ತು.
ಅದರೆ, ಇದು ಸ್ವಿಟರ್ಲೆಂಡ್ ನ ಜ್ಯೂರಿಚ್ ನ ಬ್ಯಾಂಕೊಂದರ ಲೋಗೋ ಇದಾಗಿದೆ ಎಂದು ನ್ಯೂಸ್ ಮಿನಿಟ್ ವೆಬ್ ಸೈಟ್ ವರದಿ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಮೋದಿ ಅವರ ನೆಚ್ಚಿನ ಸಿಂಹ ಹೆಜ್ಜೆ ಸಿಟ್ವರ್ಲೆಂಡ್ ನಿಂದ ಬಂದಿದ್ದೇ, ವಿದೇಶದಲ್ಲಿ ಬಳಸಿದ ಲೋಗೋ ನಕಲು ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.

ಸ್ಜಿಟರ್ಲೆಂಡ್ ನ ಕ್ಯಾಂಟೋನಲ್ ಬ್ಯಾಂಕ್ ಆಫ್ ಜ್ಯೂರಿಚ್ ಕೂಡಾ ಮೇಕ್ ಇನ್ ಇಂಡಿಯಾ ಮಾದರಿ ಲೋಗೊ ಹೊಂದಿದೆ. ಜು.4, 2013ರಿಂದ ಅಲ್ಲಿನ ಸಿಂಹ ಘರ್ಜಿಸುತ್ತಿದ್ದರೆ, ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಸಿಂಹ ಘರ್ಜಿಸಲು ಆರಂಭಿಸಿದ್ದು ಸೆ.25, 2014 ರಿಂದ ಎಂಬುದು ಗಮನಾರ್ಹ. ಸ್ವಿಸ್ ವಿನ್ಯಾಸಕ ನಡೈನ್ ಜಿಯಸ್ಬುಲ್ಲರ್ ತಾನು ವಿನ್ಯಾಸ ಮಾಡಿದ ಸಿಂಹದ ಕಲಾಕೃತಿಯಡಿ ಬ್ಯಾಂಕಿನ ಪ್ರಚಾರ ಆರಂಭಿಸಿರುವುದಾಗಿ ಟ್ವೀಟ್ ಮಾಡಿದ್ದಾನೆ.
ಮೇಕ್ ಇನ್ ಇಂಡಿಯಾ ಅಭಿಯಾನಕ್ಕಾಗಿ ಲೋಗೋ ತಯಾರಿಸಲು ಭಾರತ ಸರ್ಕಾರದಿಂದ 4.3 ಕೋಟಿ ಹಣ ಪಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೇ ವೇಳೆ ಕೈಗಾರಿಕಾ ನಿಯಮ ಹಾಗೂ ಪ್ರಚಾರ ವಿಭಾಗ (ಡಿಐಪಿಪಿ) ಪರವಾಗಿ ಪ್ರತಿಕ್ರಿಯೆ ನೀಡಿರುವ ಅಮಿತಾಬ್ ಕಂಟ್ ಅವರು ಮೇಕ್ ಇನ್ ಇಂಡಿಯಾದ 30ಕ್ಕೂ ಅಧಿಕ ವೈವಿಧ್ಯಮಯ ಮೇಕ್ ಇನ್ ಇಂಡಿಯಾ ಲೋಗೋಗಳನ್ನು ಟ್ವೀಟ್ ಮಾಡಿ ಭಾರತದ ಸಿಂಹವೇ ಗ್ರೇಟ್, ಸ್ವಿಸ್ ಅಥವಾ ಕ್ಯೂಬನ್ ಸಿಂಹದಂತೆ ಅಲ್ಲ ಎಂದಿದ್ದಾರೆ.












Click it and Unblock the Notifications