Cheque Bounce : ಮತ್ತೆ ಖಾತೆ ತೆರೆಯಲು ಆಗಲ್ಲ; ಚೆಕ್ ಬೌನ್ಸ್ ಆದ್ರೆ ಏನೇನು ಕ್ರಮ?
ನವದೆಹಲಿ, ಅ. 10: ಚೆಕ್ ಬೌನ್ಸ್ ಪ್ರಕರಣಗಳು ಕೋರ್ಟ್‌ನಲ್ಲಿ ಲೆಕ್ಕವಿಲ್ಲದಷ್ಟು ದಾಖಲಾಗುತ್ತಿವೆ. ಚೆಕ್ ಬೌನ್ಸ್ ವ್ಯಾಜ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಾನೂನುಗಳನ್ನು ಬಿಗಿ ಮಾಡುವ ಚಿಂತನೆಯಲ್ಲಿದೆ. ತಪ್ಪು ಚೆಕ್‌ಗಳನ್ನು ನೀಡಿ ವಂಚಿಸಲು ಭಯಪಡುವ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಇತ್ತೀಚೆಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಚೆಕ್ ಬೌನ್ಸ್ ವಿಚಾರವನ್ನು ಚರ್ಚಿಸಲಾಗಿರುವುದು ತಿಳಿದುಬಂದಿದೆ. ಒಬ್ಬ ವ್ಯಕ್ತಿ ಅಮಾನ್ಯ ಚೆಕ್ ನೀಡಿದರೆ ಅದನ್ನು ಲೋನ್ ಡೀಫಾಲ್ಟ್ ಅಥವಾ ಸಾಲದ ಸುಸ್ತಿದಾರ ಎಂದು ಪರಿಗಣಿಸಬಹುದು ಎಂಬ ಸಲಹೆ ಈ ಸಭೆಯಲ್ಲಿ ವ್ಯಕ್ತವಾಗಿದೆ.
ಹಾಗೆಯೇ, ಚೆಕ್ ನೀಡಿದ ವ್ಯಕ್ತಿಯ ಖಾತೆಯಲ್ಲಿ ಅಷ್ಟು ಹಣ ಇಲ್ಲದೇ ಚೆಕ್ ಬೌನ್ಸ್ ಆಗಿದ್ದರೆ ಆಗ ಆ ವ್ಯಕ್ತಿಯ ಬೇರೆ ಖಾತೆಯಲ್ಲಿ ಅಷ್ಟು ಹಣವನ್ನು ವಸೂಲಿ ಮಾಡುವ, ಅಥವಾ ಆ ವ್ಯಕ್ತಿ ಹೊಸ ಖಾತೆ ತೆರೆಯದಂತೆ ನಿರ್ಬಂಧಿಸುವ ಯೋಜನೆಯೂ ಇದೆ.

ಅಮಾನ್ಯ ಚೆಕ್ ನೀಡಿದರೆ ಲೋನ್ ಡೀಫಾಲ್ಟ್ ಎಂದು ಪರಿಗಣಿಸಿ ಕ್ರೆಡಿಟ್ ಸ್ಕೋರ್ ಕಡಿಮೆಗೊಳಿಸುವಂತೆ ಮಾಡಬೇಕು ಎಂಬುದು ಸೇರಿದಂತೆ ಹಲವು ರೀತಿಯ ಸಲಹೆಗಳು ಕೇಂದ್ರ ಹಣಕಾಸು ಸಚಿವಾಲಯದ ಸಭೆಯಲ್ಲಿ ವ್ಯಕ್ತವಾಗಿವೆ.
ಈ ಎಲ್ಲಾ ಸಲಹೆಗಳನ್ನು ಸರಕಾರ ಪರಿಗಣಿಸಿದೆ. ಕಾನೂನು ತಜ್ಞರ ಜೊತೆ ಅವಲೋಕಿಸಿ ಯಾವ್ಯಾವ ಸಲಹೆಗಳನ್ನು ಜಾರಿಗೊಳಿಸಲು ಸಾಧ್ಯ ಎಂಬುದನ್ನು ಸರಕಾರ ಅವಲೋಕಿಸಿ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಈ ಸಲಹೆಗಳು ಜಾರಿಯಾದಲ್ಲಿ ಚೆಕ್ ಬೌನ್ಸ್ ಪ್ರಕರಣಗಳನ್ನು ಆರಂಭದಲ್ಲೇ ಚಿವುಟಿ ಹಾಕಲು ಸಾಧ್ಯವಾಗಬಹುದು, ವಿಪರೀತ ಚೆಕ್ ಬೌನ್ಸ್ ಪ್ರಕರಣಗಳಿಂದ ನ್ಯಾಯಾಲಯದ ಮೇಲೆ ಸುಖಾಸುಮ್ಮನೆ ಹೊರೆಹಾಕಿ ಸಮಯ ಹಾಳು ಮಾಡುವುದನ್ನು ತಪ್ಪಿಸಬಹುದು.
ಒಂದು ವೇಳೆ ಈ ಸಲಹೆಗಳನ್ನು ಜಾರಿ ಮಾಡುವ ಉದ್ದೇಶ ಸರಕಾರಕ್ಕೆ ಇದ್ದರೆ ವಿವಿಧ ಬ್ಯಾಂಕ್‌ಗಳ ನಡುವೆ ಸಮನ್ವಯತೆಯ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಒಂದು ಬ್ಯಾಂಕ್‌ನ ಅಕೌಂಟ್‌ನ ಚೆಕ್ ಬೌನ್ಸ್ ಆದರೆ ಆ ವ್ಯಕ್ತಿಯ ಇನ್ನೊಂದು ಬ್ಯಾಂಕ್‌ನ ಅಕೌಂಟ್‌ನಿಂದ ಹಣ ಪಡೆಯಲು ಈ ವ್ಯವಸ್ಥೆ ಅಗತ್ಯ ಇರುತ್ತದೆ.

ಚೆಕ್ ಬೌನ್ಸ್ ವಿಚಾರದಲ್ಲಿ ಈಗಿನ ಕಾನೂನು ಹೇಗಿದೆ?
ಒಬ್ಬ ವ್ಯಕ್ತಿ ನಿರ್ದಿಷ್ಟ ಮೊತ್ತ ನಮೂದಿಸಿ ಚೆಕ್ ನೀಡಿದಾಗ ಆ ಖಾತೆಯಲ್ಲಿ ಅಷ್ಟು ಹಣ ಇಲ್ಲದಿದ್ದರೆ ಆ ಚೆಕ್ ಅನ್ನು ಬ್ಯಾಂಕ್ ತಿರಸ್ಕರಿಸುತ್ತದೆ. ಅಗ ಚೆಕ್ ಬೌನ್ಸ್ ಎಂದು ಪರಿಗಣಿಸಲಾಗುತ್ತದೆ.
1881ರ ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ಸ್ ಆ್ಯಕ್ಟ್‌ನ ಸೆಕ್ಷನ್ 138ರ ಪ್ರಕಾರ ಚೆಕ್ ಬೌನ್ಸ್ ಶಿಕ್ಷಾರ್ಹ ಅಪರಾಧವಾಗಿದೆ. ಚೆಕ್ ಸ್ವೀಕರಿಸಿದವರು ಕೋರ್ಟ್‌ನಲ್ಲಿ ದೂರು ನೀಡಬಹುದು. ಚೆಕ್ ಬೌನ್ಸ್ ಆರೋಪ ಸಾಬೀತಾದಲ್ಲಿ ಚೆಕ್‌ನಲ್ಲಿರುವ ಮೊತ್ತದ ಎರಡರಷ್ಟು ಹಣದವರೆಗೂ ದಂಡ ವಿಧಿಸಬಹುದು. ಅಥವಾ ಎರಡು ವರ್ಷದವರೆಗೂ ಜೈಲುಶಿಕ್ಷೆ ವಿಧಿಸಬಹುದು. ಅಥವಾ ದಂಡ ಮತ್ತು ಜೈಲುಶಿಕ್ಷೆ ಎರಡನ್ನೂ ಹೇರಬಹುದು.
ಕೋರ್ಟ್‌ನಲ್ಲಿ 35 ಲಕ್ಷ ಚೆಕ್ ಬೌನ್ಸ್ ಕೇಸ್?
ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬರೋಬ್ಬರಿ 35 ಲಕ್ಷದಷ್ಟು ಚೆಕ್ ಬೌನ್ಸ್ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ಇನ್ನು, ಆಫ್ ಕೋರ್ಟ್ ಸೆಟಲ್ಮೆಂಟ್ ಆಗಿರುವ ಪ್ರಕರಣಗಳು, ಇತ್ಯರ್ಥವಾಗಿರುವ ಪ್ರಕರಣಗಳು ಎಲ್ಲವನ್ನೂ ಸೇರಿಸಿದರೆ ಚೆಕ್ ಬೌನ್ಸ್ ಸಂಖ್ಯೆ ಕೋಟಿ ಕೋಟಿ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಂದು ಸಮಿತಿ ರಚಿಸಿದ್ದು, 35 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳನ್ನು ಆದಷ್ಟೂ ವಿಲೇವಾರಿ ಮಾಡಲು ಏನೇನು ಕ್ರಮ ಕೈಗೊಳ್ಳಬಹುದು ಎಂಬ ಸಲಹೆ ನೀಡುವಂತೆ ಈ ಸಮಿತಿಗೆ ಸೂಚಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications