ಗುಜರಾತ್‌ಗೆ ಹೋಗಿ 50,100 ಕೋಟಿ ರು. ತಂದ ಕರ್ನಾಟಕ ಸರ್ಕಾರ!
ಬೆಂಗಳೂರು, ಜ. 13: ನರೇಂದ್ರ ಮೋದಿ ಅವರನ್ನು ತೆಗಳುವ ಭರದಲ್ಲಿ ಗುಜರಾತ್ ಮಾದರಿ ಎಂದರೇ ಕಾಂಗ್ರೆಸ್ಸಿಗರು ಹಾವು ಮೆಟ್ಟಿದಂತೆ ಆಡುತ್ತಾರೆ. ಗುಜರಾತ್‌ನಲ್ಲಿ ಆದ ಅಭಿವೃದ್ಧಿ ಕೇವಲ ಮಾಧ್ಯಮ ನಿರ್ಮಿತ ಎಂದೂ ಟೀಕಿಸಿದವರಿದ್ದಾರೆ. ಆದರೆ, ಈಗ ಅವನ್ನೆಲ್ಲ ಮರೆತು ಅಭಿವೃದ್ಧಿಗೆ ಅವರು ರೂಪಿಸಿಕೊಟ್ಟ ಮಾದರಿಯ ಲಾಭ ಪಡೆಯಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ.
ಹೌದು, 'ವೈಬ್ರಂಟ್ ಗುಜರಾತ್ ಸಮಿತ್ 2015' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಅಧಿಕಾರಿಗಳ ತಂಡ ವಿವಿಧ ಕೈಗಾರಿಕೋದ್ಯಮಿಗಳ ಜೊತೆ ಒಟ್ಟು 50,100 ಕೋಟಿ ರು. ಮೊತ್ತದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದೆ. ಮೋದಿಯವರನ್ನು ಟೀಕಿಸಿದ್ದವರೇ ಈಗ ಗುಜರಾತ್‌ಗೆ ಹೋಗಿ ಹತ್ತಾರು ಸಾವಿರ ಕೋಟಿ ರೂ. ಬಂಡವಾಳ ಕೂಡಿಸಿಕೊಂಡು ಬಂದಿದ್ದಾರೆ! [ವೈಬ್ರಂಟ್ ಗುಜರಾತ್ : ಮೋದಿ ಭಾಷಣದ ಮುಖ್ಯಾಂಶ]

ಈ ಕುರಿತು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನ ಪ್ರಭಾ ಹಾಗೂ ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗೌರವ್ ಗುಪ್ತಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ತಂಡವು ಹಲವು ಬಂಡವಾಳಶಾಹಿಗಳ ಜೊತೆ ನಡೆಸಿದ ಸಭೆ ಯಶಸ್ವಿಯಾಗಿದ್ದು, 50,100 ಕೋಟಿ ರೂ. ಬಂಡವಾಳ ಹೂಡಿಕೆ ಕುರಿತು ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ. ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆಂದು ತಿಳಿಸಿದ್ದಾರೆ. [ಪ್ರವಾಸಿ ದಿವಸ್ ದಿಂದ ಕರ್ನಾಟಕಕ್ಕೂ ಬರುತ್ತಾ ಬಂಡವಾಳ?]
ವಿದೇಶಿ ನಿಯೋಗ ಭೇಟಿ : ಅಲ್ಲದೆ, ಕರ್ನಾಟಕ ತಂಡವು ಈ ಸಂದರ್ಭದಲ್ಲಿ ವಿದೇಶಿ ನಿಯೋಗಗಳನ್ನೂ ಭೇಟಿ ಮಾಡಿದೆ. ಭಾರತ-ಚೀನಾ ಆರ್ಥಿಕ ಸಹಕಾರ ಸಮಿತಿ, ಸಿಂಗಪುರ ಬಿಸಿನೆಸ್ ಫೆಡರೇಶನ್ ಮತ್ತು ಇಸ್ರೇಲ್ ನಿಯೋಗವನ್ನು ಭೇಟಿ ಮಾಡಿದೆ.
ಕರ್ನಾಟಕದಲ್ಲಿ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ ಮೂಲಸೌಲಭ್ಯ, ಸೌರ ಶಕ್ತಿ, ಅಂತರಿಕ್ಷಯಾನ ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications