ಇನ್ಫೋಸಿಸ್ : ಬಾಲಕೃಷ್ಣನ್ ಔಟ್; ಬಯೋಕಾನ್ ಕಿರಣ್ ಇನ್
ಬೆಂಗಳೂರು, ಡಿ.20: ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗೆ ಮತ್ತೆ ಭಾರಿ ಹಿನ್ನಡೆ ಉಂಟಾಗಿದೆ. ಅಶೋಕ್ ವೆಮೂರಿ ಹಾಗೂ ಅಮೆರಿಕದ ಇನ್ಫೋಸಿಸ್ ನ ಯುಟಿಲಿಟಿಸ್ ಅಂಡ್ ರಿಸೋರ್ಸಸ್ ವಿಭಾಗದ ಮುಖ್ಯಸ್ಥ ಸ್ಟೀಫನ್ ಪ್ರಾಟ್, ಇನ್ಫೋಸಿಸ್ ಲ್ಯಾಬ್ಸ್ ನ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಸುಬ್ರಮಣ್ಯಂ(ಸುಬ್ಬು) ಗೋಪರಾಜು ಅವರ ನಂತರ ಇನ್ಫೋಸಿಸ್ ಬಿಪಿಒ ಮುಖ್ಯಸ್ಥ ವಿ. ಬಾಲಕೃಷ್ಣನ್ ಅವರು ಇನ್ಫೋಸಿಸ್ ತೊರೆದಿದ್ದಾರೆ.
ಇನ್ಫೋಸಿಸ್ ಬಿಪಿಒ, ಫಿನಾಕಲ್ ಹಾಗೂ ಇಂಡಿಯಾ ಬಿಸಿನೆಸ್ ಯೂನಿಟ್ ಮುಖ್ಯಸ್ಥ ಹಾಗೂ ಇನ್ಫೋಸಿಸ್ ನ ಲೊಡೆಸ್ಟೋನ್ ಚೇರ್ಮನ್ ಆಗಿರುವ ವಿ ಬಾಲಕೃಷ್ಣನ್ ಅವರು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಇತ್ತಿದ್ದಾರೆ. ಅವರ ಅಧಿಕಾರ ಅವಧಿ ಡಿಸೆಂಬರ್ 31, 2013ಕ್ಕೆ ಕೊನೆಗೊಳ್ಳಲಿದೆ.
1991ರಲ್ಲಿ ಇನ್ಫೋಸಿಸ್ ಸೇರಿದ್ದ ವಿ ಬಾಲಕೃಷ್ಣನ್ ಅವರನ್ನು ಹಾಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಡಿ ಶಿಬುಲಾಲ್ ಅವರ ನಂತರದ ಟಾಪ್ ಅಧಿಕಾರಿ ಎಂದೇ ಗುರುತಿಸಲಾಗುತ್ತಿತ್ತು. ಶಿಬುಲಾಲ್ ಅವರು 2015ರಲ್ಲಿ ನಿವೃತ್ತರಾಗಲಿದ್ದಾರೆ.

ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಾಂದರ್ ಶಾ ಅವರನ್ನು ಇನ್ಫೋಸಿಸ್ ನ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಯುಬಿ ಪ್ರವೀಣ್ ರಾವ್ ಅವರನ್ನು ಶಾಶ್ವತ ನಿರ್ದೇಶಕರಾಗಿ ನೇಮಿಸಲಾಗಿದೆ.
'ಬಾಲ(ಬಾಲಕೃಷ್ಣನ್) ರಾಜೀನಾಮೆ ನನಗೆ ಶಾಕ್ ತಂದಿದೆ. ಇನ್ಫೋಸಿಸ್ ಗೆ ಭಾರಿ ನಷ್ಟ. ಯಾವುದೇ ಸಂಸ್ಥೆಯಾಗಲಿ ಬಾಲಕೃಷ್ಣನ್ ರಂಥ ಅಧಿಕಾರಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ' ಎಂದು ಇನ್ಫೋಸಿಸ್ ಮಾಜಿ ಉದ್ಯೋಗಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಇತ್ತೀಚೆಗೆ ಇನ್ಫ್ಹೋಸಿಸ್ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಉದ್ಯೋಗಿಗಳ ಸಂಖ್ಯೆ 600 ರಿಂದ 200ಕ್ಕೆ ಇಳಿಸಿತ್ತು ಸುಬ್ರಮಣ್ಯ ಗೋಪರಾಜು ಅವರ ಇಷ್ಟಕ್ಕೆ ವಿರೋಧವಾಗಿತ್ತು ಎನ್ನಲಾಗಿದೆ. ಬಾಲಕೃಷ್ಣನ್ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ ಸಿ ಡಿಗಿರ್ ಹೊಂದಿದ್ದಾರೆ. ಸಿಎ, ಎಸಿಎಸ್, ಎಐಸಿಡಬ್ಲ್ಯೂಎ ಡಿಗ್ರಿಗಳನ್ನು ಪಡೆದಿದ್ದಾರೆ. ಇನ್ಫೋಸಿಸ್ ಆರ್ಥಿಕ ವಿಭಾಗ ಹಾಗೂ ಬಿಪಿಒ ಬೆಳವಣಿಗೆಗೆ ಕಾರಣರಾಗಿದ್ದಾರೆ. 2006ರಲ್ಲಿ ಮುಖ್ಯ ವಿತ್ತೀಯ ಅಧಿಕಾರಿಯಾಗಿದ್ದರು.
ನಿನ್ನೆ ಇನ್ನೂ ಗೋಪರಾಜು ರಾಜೀನಾಮೆ ನೀಡಿದ್ದರು ಅವರ ನಿರ್ಗಮನದ ನಂತರ ಇನ್ಫೋಸಿಸ್ ಲ್ಯಾಬ್ಸ್ ಹೊಣೆಯನ್ನು ಸಾವಿಯೋ ಡಿಸೋಜ ಅವರಿಗೆ ವಹಿಸಲಾಗುತ್ತಿದೆ. ಐಪಿ ಸೆಲ್ ನ ಜವಾಬ್ದಾರಿಯನ್ನು ಅನಿಂದ್ಯ ಸಿರ್ಕಾರ್ ಗೆ ನೀಡಲಾಗುತ್ತಿದೆ. ಇಬ್ಬರು ಅಧಿಕಾರಿಗಳು ಚಂದ್ರಶೇಖರ್ ಕೆ. ಅವರಿಗೆ ರಿಪೋರ್ಟ್ ಮಾಡತಕ್ಕದ್ದು. ಪ್ರಸಾದ್ ಜೋಶಿ ಅವರು ಟೆಕ್ನಾಲಜಿ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಲಿದ್ದು ಪ್ರವೀಣ್ ರಾವ್ ಗೆ ರಿಪೋರ್ಟ್ ಮಾಡಲಿದ್ದಾರೆ ಎಂದು ಇನ್ಫೋಸಿಸ್ ವಕ್ತಾರರು ಹೇಳಿದ್ದಾರೆ.
ಕಳೆದ ಕೆಲ ಅವಧಿಯಲ್ಲಿ ಹಿರಿಯ ಅಧಿಕಾರಿಗಳು ಇನ್ಫೋಸಿಸ್ ತೊರೆಯುತ್ತಿದ್ದು, ಇದು ನಿರೀಕ್ಷಿತ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಹೊಸ ತಂಡ ಕಟ್ಟುವ ಮುನ್ನ ಹಳೆ ಅಧಿಕಾರಿಗಳು ಸಂಸ್ಥೆ ತೊರೆಯುತ್ತಿದ್ದಾರೆ. ಸದ್ಯದ ಸಿಇಒ ಎಸ್ ಡಿ ಶಿಬುಲಾಲ್ 2015 ರಲ್ಲಿ ಹುದ್ದೆ ತೊರೆಯಲಿದ್ದಾರೆ. ಅಶೋಕ್ ವೆಮೂರಿ ಸಂಸ್ಥೆ ತೊರೆದು ಐಗೇಟ್ ಸಿಇಒ ಆಗಿದ್ದಾರೆ. ಸಂಸ್ಥೆ ಉಪಾಧ್ಯಕ್ಷರಾಗಿದ್ದ ಸುಧೀರ್ ಚತುರ್ವೇದಿ, ಜಾಗತಿಕ ಮಾರುಕಟ್ಟೆ ವಿಭಾಗದ ಬಸಬ್ ಪ್ರಧಾನ್ ಮುಂತಾದವರು ಸಂಸ್ಥೆ ತೊರೆದಿದ್ದಾರೆ.












Click it and Unblock the Notifications