ಹಣದುಬ್ಬರ ವಿರುದ್ಧ ಬಡಿದಾಟ; ಜಾಗತಿಕವಾಗಿ ಪರಿಸ್ಥಿತಿ ಹೇಗಿದೆ?
ಬೆಂಗಳೂರು, ಜೂನ್ 7: ಆರ್ಥಿಕತೆಯ ಶಿಸ್ತಿನ ಪ್ರಮುಖ ಮಾನದಂಡಗಳಲ್ಲಿ ಒಂದಾಗಿರುವ ಹಣದುಬ್ಬರ ಈಗ ವಿಶ್ವದೆಲ್ಲೆಡೆ ಆತಂಕಕಾರಿ ಸ್ಥಿತಿಯಲ್ಲಿದೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಈಗ ಹಣದುಬ್ಬರ ಏರಿಕೆ ಮಿತಿಮೀರಿ ತಲೆನೋವಾಗಿ ಪರಿಣಮಿಸಿದೆ. ಹಣದುಬ್ಬರವನ್ನು ತಹಬದಿಗೆ ತರಲು ಹಲವು ದೇಶಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.
ಹಣದುಬ್ಬರ ಈಗ ಜಾಗತಿಕ ಪಿಡುಗಾಗಿ ಹೋಗಿದೆ. ಶ್ರೀಲಂಕಾದಲ್ಲಿ ಶೇ. 40ರಷ್ಟು ಹಣದುಬ್ಬರ ಇದೆ. ಆ ದೇಶಕ್ಕೆ ಸಾಲ ಕೊಡುವವರೇ ಇಲ್ಲ ಎನ್ನುವಂತಾಗಿದೆ. ಈಗ ಪಾಕಿಸ್ತಾನದಲ್ಲೂ ಕೂಡ ಲಂಕಾ ಪರಿಸ್ಥಿತಿಯೇ ಬರುವ ಸಂಭವ ಇದೆ. ಕೆಲ ಆರ್ಥಿಕ ತಜ್ಞರು ಭಾರತಕ್ಕೂ ಇದೇ ಗತಿ ಕಾದಿದೆ ಎನ್ನುತ್ತಾರೆ. ಯೂರೋಪ್‌ನ ಬಲಾಢ್ಯ ದೇಶಗಳೂ ಹಣದುಬ್ಬರಿಂದ ತತ್ತರಿಸುತ್ತಿವೆ. ವಿವಿಧ ದೇಶಗಳಿಗೆ ಸಾಲ ಕೊಟ್ಟು ಶೂಲಕ್ಕೆ ಸಿಲುಕಿಸುವ ತಂತ್ರಗಾರಿಕೆ ನಡೆಸುವ ಚೀನಾ ಕೂಡ ಹಣದುಬ್ಬರ ಇತ್ಯಾದಿ ಹಣಕಾಸು ಸಮಸ್ಯೆಗಳಿಂದ ಕಂಗೆಟ್ಟಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕ ಹಣದುಬ್ಬರ ಸಮತೋಲನಕ್ಕೆ ತರಲು ಹರಸಾಹಸ ಮಾಡುತ್ತಿದೆ. ಆಫ್ರಿಕಾ, ದಕ್ಷಿಣ ಅಮೆರಿಕ ದೇಶಗಳ ಪರಿಸ್ಥಿತಿ ವಿಭಿನ್ನವಾಗಿಲ್ಲ. ವಿಶ್ವದ ಬಹುತೇಕ ಎಲ್ಲಾ ದೇಶಗಳೂ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಪರದಾಡುತ್ತಿರುವುದಂತೂ ಹೌದು.

ಭಾರತದಲ್ಲಿ ಹೇಗಿದೆ ಪರಿಸ್ಥಿತಿ?
ಭಾರತದಲ್ಲಿ ನೋಟ್ ಬ್ಯಾನ್ ಕ್ರಮ ಕೈಗೊಳ್ಳಲಾದ 2016ರಿಂದಲೂ ಆರ್ಥಿಕ ವೃದ್ಧಿ ದರ ಇಳಿಮುಖ ಆಗುತ್ತಲೇ ಇದೆ. ಕೋವಿಡ್ ಪಿಡುಗು ಬಂದ ನಂತರ ಇದು ಮೈನಸ್ ಹಂತಕ್ಕೆ ಹೋಗಿತ್ತು. ಭಾರತ ಅಷ್ಟೇ ಅಲ್ಲ ಬಹುತೇಕ ವಿಶ್ವದ ಆರ್ಥಿಕತೆ ಕೋವಿಡ್‌ನಿಂದ ನಲುಗಿ ಹೋಗಿದ್ದು ಹೌದು. ಈಗ ಒಂದು ವರ್ಷದಿಂದ ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕತೆ ಚೇತರಿಕೆ ಕಾಣುತ್ತಿದೆ.
ಭಾರತದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆಯಾದರೂ ಕೋವಿಡ್ ಸಾಂಕ್ರಾಮಿಕತೆಗಿಂತ ಮುಂಚಿನ ಆರ್ಥಿಕತೆಯ ಮಟ್ಟ ತಲುಪಲು ಇನ್ನೂ ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ತಜ್ಞರು. ಆ ನಿಟ್ಟಿನಲ್ಲಿ ಮುಂದಡಿ ಇಡಲು ಭಾರತಕ್ಕೆ ಈಗ ಹಣದುಬ್ಬರವೆಂಬ ತೊಡರುಗಾಲು ಇದೆ. ಶೇ. 5ಕ್ಕಿಂತ ಹೆಚ್ಚು ಹಣದುಬ್ಬರ ಭಾರತದಲ್ಲಿ ಇದೆ. ಈ ಹಣಕಾಸು ವರ್ಷ (2022-23) ದಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 5.7ರಿಂದ ಶೇ. 6.9ರಷ್ಟು ಇರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ರೀಟೇಲ್ ಹಣದುಬ್ಬರ ಏನು?
ರೀಟೇಲ್ ಇನ್‌ಫ್ಲೇಶನ್ ಲೆಕ್ಕಹಾಕುವ ವಿಧಾನ ಇಲ್ಲಿದೆ. ಜನಬಳಕೆಯ ವಸ್ತು ಮತ್ತು ಸೇವೆಗಳ ದರ ನಿರ್ದಿಷ್ಟ ತಿಂಗಳಲ್ಲಿ ಎಷ್ಟಿದೆ ಮತ್ತು ಹಿಂದಿನ ವರ್ಷದ ಅದೇ ತಿಂಗಳು ಆ ದರ ಎಷ್ಟಿತ್ತು ಎಂದು ತುಲನೆ ಮಾಡಲಾಗುತ್ತದೆ. ಮತ್ತು ಅವೆರಡು ಬೆಲೆ ನಡುವೆ ವ್ಯತ್ಯಾಸ ಎಷ್ಟಿದೆ ಎಂಬುದೇ ರೀಟೇಲ್ ಹಣದುಬ್ಬರ.

ಆರ್‌ಬಿಐ ಕ್ರಮಗಳು
ಕಳೆದ ಬಾರಿ ಆರ್‌ಬಿಐ ನಡೆಸಿದ ತುರ್ತು ಸಭೆಯಲ್ಲಿ ರೆಪೋ ಸೇರಿದಂತೆ ವಿವಿಧ ಬ್ಯಾಂಕ್ ದರಗಳನ್ನು ಏರಿಸಿತು. ಕೋವಿಡ್ ಪಿಡುಗು ಬಂದಾಗಿನಿಂದಲೂ ಯಾವತ್ತೂ ಏರಿಕೆಯಾಗದ ರೆಪೋ ದರದಲ್ಲಿ 40 ಮೂಲಾಂಕಗಳಷ್ಟು ಏರಿಕೆ ಮಾಡಲಾಯಿತು. ಈಗ ರೆಪೋ ಶೇ. 4.40 ಇದೆ. ಈಗ ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಗಳನ್ನು ಇಳಿಸಿರುವುದರಿಂದ ಹಣದುಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಇದನ್ನು ಸರಿದೂಗಿಸಲು ಆರ್‌ಬಿಐ ಮುಂದಿರುವ ಪ್ರಮುಖ ಮಾರ್ಗ ಎಂದರೆ ಅದೇ ರೆಪೋ ದರ ಹೆಚ್ಚಳವೇ. ಮುಂದಿನ ವಾರ ನಡೆಯಲಿರುವ ಆರ್‌ಬಿಐನ ಎಂಪಿಸಿ ಸಭೆಯಲ್ಲಿ 25-50 ಮೂಲಾಂಕಗಳಷ್ಟು ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕದಲ್ಲಿ ಹೇಗಿದೆ ಸ್ಥಿತಿ?
ಕೋವಿಡ್ ಸಾಂಕ್ರಾಮಿಕಕ್ಕೆ ವಿಶ್ವದಲ್ಲಿ ಅತಿಹೆಚ್ಚು ಬಾಧಿತವಾದ ದೇಶ ಎಂದರೆ ಮೊದಲು ಕಣ್ಮುಂದೆ ಬರುವುದು ಅಮೆರಿಕವೇ. ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ಅಮೆರಿಕದಂಥ ಅಮೆರಿಕ ದೇಶವೇ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಒದ್ದಾಡಿತು. ರೋಗದ ಜೊತೆಗೆ ವಿವಿಧ ಕಾಲಘಟ್ಟಗಳಲ್ಲಿ ಮಾಡಿದ ಲಾಕ್‌ಡೌನ್ ಇತ್ಯಾದಿ ಕ್ರಮಗಳಿಂದ ಅಮೆರಿಕದ ಆರ್ಥಿಕತೆ ಪರದಾಡಿತು. ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಾಡಿತ್ತು.
ಇತ್ತೀಚಿನ ಕೆಲ ತಿಂಗಳಿಂದ ವಿಶ್ವ ಹಿರಿಯಣ್ಣನ ನಿರುದ್ಯೋಗ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಿದೆ. ಆದರೆ ಹಣದುಬ್ಬರ ಶೇ. 4ಕ್ಕಿಂತ ಹೆಚ್ಚಿರುವುದು ತುಸು ಚಿಂತೆಗೆ ಕಾರಣವಾಗಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸುವ ತಂತ್ರಕ್ಕೆ ಮೊರೆಹೋಗಿದೆ. ಇದು ಜನರಿಗೆ ಸಿಡಿಲಿನಂತೆ ಭಾರಿಸಿದರೂ ಅಮೆರಿಕದ ಆರ್ಥಿಕತೆಗೆ ಅಗತ್ಯವಾದ ಕ್ರಮ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ಅದೇನೇ ಇದ್ದರೂ ಕಾಲೇಜು ವಿದ್ಯಾಭ್ಯಾಸಕ್ಕೆ ಸಾಲ ಮಾಡಬೇಕಾದ ಅಮೆರಿಕನ್ನರಿಗೆ ಈಗ ಹೆಚ್ಚು ಬಡ್ಡಿ ಕಟ್ಟುವ ಚಿಂತೆ ಕಾಡುತ್ತಿದೆ. ಕೆಲಸ ಸಿಗುತ್ತಿದೆಯಾದರೂ ಸಂಬಳ ಕಡಿಮೆ ಎನ್ನುವ ಪರಿಸ್ಥಿತಿ ಅಮೆರಿಕದಲ್ಲಿದೆ. ಹೀಗಿರುವಾಗ ಅಧಿಕ ಬಡ್ಡಿಗೆ ಸಾಲ ಮಾಡಿ ನಾಲ್ಕು ವರ್ಷ ಗ್ರಾಜುಯೇಶನ್ ಪಡೆಯುವ ಮಕ್ಕಳು ಕೆಲಸಕ್ಕೆ ಸೇರಿ ಬರುವ ಸಂಬಳದಲ್ಲಿ ಸಾಲ ತೀರಿಸಲು ಸಾಧ್ಯವೇ ಎಂದು ಅಲ್ಲಿನ ಪೋಷಕರು ಪ್ರಶ್ನಿಸುತ್ತಿದ್ದಾರಂತೆ. ಇದು ಅಮೆರಿಕದ ಸದ್ಯದ ಸಂಕಟ.

ಯೂರೋಪ್‌ನಲ್ಲಿ ಅತೀವ ಹಣದುಬ್ಬರ
ಯೂರೋಪ್ ಖಂಡದ ಬಹುತೇಕ ದೇಶಗಳು ಹಣದುಬ್ಬರದಿಂದ ಬಾಧಿತವಾಗಿವೆ. ಯೂರೋ ಕರೆನ್ಸಿ ಬ್ಲಾಕ್‌ನ 19 ದೇಶಗಳ ಸರಾಸರಿ ಹಣದುಬ್ಬರ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿದೆ ಎನ್ನಲಾಗಿದೆ. ಯೂರೋ ಕರೆನ್ಸಿ ಬ್ಲಾಕ್ ಎಂದರೆ ಯೂರೋ ಕರೆನ್ಸಿಯನ್ನು ಅಳವಡಿಸಿಕೊಂಡಿರುವ ಐರೋಪ್ಯ ದೇಶಗಳ ಗುಂಪು. ವಾಸ್ತವದಲ್ಲಿ ಐರೋಪ್ಯ ಒಕ್ಕೂಟಕ್ಕೆ ಸದಸ್ಯರಾಗಬೇಕಾದರೆ ಯೂರೋ ಕರೆನ್ಸಿಯನ್ನು ಅಳವಡಿಸಿಕೊಳ್ಳಬೇಕು ಎಂಬ ನಿಯಮ ಇದೆ. ಆದರೆ, ಸ್ವೀಡನ್, ಡೆನ್ಮಾರ್ಕ್, ಹಂಗೇರಿ, ಪೋಲೆಂಡ್, ಚೆಕ್ ರಿಪಬ್ಲಿಕ್ ಮೊದಲಾದ ಐರೋಪ್ಯ ಒಕ್ಕೂಟ ಸದಸ್ಯ ದೇಶಗಳು ಯೂರೋ ಕರೆನ್ಸಿಯನ್ನು ಅಳವಡಿಸಿಕೊಂಡಿಲ್ಲ ಎಂಬುದು ಬೇರೆ ವಿಷಯ.
ಈಗ ಯೂರೋ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಮಾಲ್ಟಾ ಶೇ. 5.6ಹಣದುಬ್ಬರ ಹೊಂದಿದೆ. ಇದು ಆ ದೇಶಗಳ ಪೈಕಿ ಅತ್ಯಂತ ಕಡಿಮೆ ಹಣದುಬ್ಬರ ಎನ್ನಲಾಗಿದೆ. ಎಸ್ಟೋನಿಯಾ ದೇಶದಲ್ಲಿ ಹಣದುಬ್ಬರ ಶೇ 20 ದಾಟಿದೆ. ಈ ಸಮಸ್ಯೆ ನಿವಾರಿಸಲು ಯೂರೋಪಿಯನ್ ಯೂನಿಯನ್ 200 ಬಿಲಿಯನ್ ಯೂರೋ (ಸುಮಾರು 16 ಲಕ್ಷಕೋಟಿ ರೂಪಾಯಿ) ಮೊತ್ತದಷ್ಟು ವಿವಿಧ ಯೋಜನೆ ಹಾಕಿಕೊಂಡಿದೆ.

ವಿಶ್ವದೆಲ್ಲೆಡೆ ಪರಿಸ್ಥಿತಿ
ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಹಲವು ದೇಶಗಳಲ್ಲಿ ಹಣದುಬ್ಬರ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಆಫ್ರಿಕಾದ ಸೂಡಾನ್ ದೇಶದಲ್ಲಿ ಬರೋಬ್ಬರಿ ಶೇ. 245.1ರಷ್ಟು ಹಣದುಬ್ಬರ ಇದೆ ಎಂದರೆ ನಂಬಲು ಆಗದೇ ಹೋಗಬಹುದು. ಜಿಂಬಾಬ್ವೆಯಲ್ಲೂ ಹಣದುಬ್ಬರ ಮೂರಂಕಿ ಸಮೀಪ ಇದೆ. ಇಥಿಯೋಪಿಯಾ ಮತ್ತು ಅಂಗೋಲಾ ದೇಶಗಳಲ್ಲಿ ಹಣದುಬ್ಬರ ಶೇ. 20ಕ್ಕಿಂತ ಹೆಚ್ಚಿದೆ. ನೈಜೀರಿಯಾ, ಜಾಂಬಿಯಾ ಸೇರಿ ಹತ್ತಕ್ಕೂ ಹೆಚ್ಚು ಆಫ್ರಿಕನ್ ದೇಶಗಳಲ್ಲಿ ಹಣದುಬ್ಬರ ಶೇ. 10 ಮೀರಿದೆ.
ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ, ಬ್ರೆಜಿಲ್, ವೆನಿಜುವೆಲಾ ದೇಶಗಳಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಅರ್ಜೆಂಟೀನಾದಲ್ಲಂತೂ ಹಣದುಬ್ಬರ ಶೇ. 50ಕ್ಕಿಂತ ಹೆಚ್ಚಿದೆ. ಕಳೆದ ಹತ್ತು ವರ್ಷಗಳಿಂದ ಈ ದೇಶದಲ್ಲಿ ಹಣದುಬ್ಬರ ದರ ಒಂದಂಕಿಗೆ ಬಂದೇ ಇಲ್ಲವಂತೆ. ವೆನಿಜುವೆಲಾ ದೇಶದ್ದೂ ಇಂಥದ್ದೇ ಕಥೆ. ಇಲ್ಲಿ ಜನೋಪಯೋಗಿ ಸೇವೆಗಳಾದ ವಿದ್ಯುತ್, ನೀರು, ಗ್ಯಾಸ್, ರಸ್ತೆ ಟೋಲ್ ಇತ್ಯಾದಿಗಳಿಗೆ ಸರಕಾರ ಭಾರೀ ಸಬ್ಸಿಡಿ ನೀಡುತ್ತಿತ್ತು. ಈಗ ಆರ್ಥಿಕತೆ ಮುರುಟಿಕೊಂಡು ಬೀಳುತ್ತಿರುವುದರಿಂದ ಎಲ್ಲಾ ಸಬ್ಸಿಡಿಯನ್ನು ಹಿಂಪಡೆದಿದ್ದಾರೆ. ಸಬ್ಸಿಡಿಗೆ ಮಾನಸಿಕವಾಗಿ ಒಗ್ಗಿಹೋಗಿದ್ದ ಇಲ್ಲಿನ ಜನರಿಗೆ ಈಗ ಬರೆಬಿದ್ದಂತಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications