WTOದಿಂದ ಸಬ್ಸಿಡಿಗೆ ತಡೆ; ಮೀನುಗಾರರಿಂದ ಮೆಚ್ಚುಗೆಯ ನಡೆ
ಜಿನಿವಾ ಜೂ.13: ಮೀನುಗಾರರಿಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಬೇಕೆಂಬ ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲುಟಿಓ) ಪ್ರಸ್ತಾವನೆ ವಿರುದ್ಧ ಭಾರತದ ವಿವಿಧ ರಾಜ್ಯಗಳ ಮೀನುಗಾರರು ಭಾನುವಾರದಂದು ಜಿನಿವಾದಲ್ಲಿನ ವಿಶ್ವಸಂಸ್ಥೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಮೀನುಗಾರರ ಬೇಡಿಕೆಗೆ ಡಬ್ಲುಟಿಓ ಸ್ಪಂದಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಸಹಾಯಧನ ವಿಚಾರದಲ್ಲಿ ಡಬ್ಲುಟಿಓಗೆ ಶಿಸ್ತು ಬೇಕಾದರೆ ಕೈಗಾರಿಕಾ ಮೀನುಗಾರರ ಮೇಲೆ ನಿಯಮಗಳನ್ನು ಜಾರಿಗೊಳಿಸಲಿ, ಅದನ್ನು ಬಿಟ್ಟು ಬಹುಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರರ ಸಬ್ಸಿಡಿ ತಡೆಹಿಡಿಯುವ ಇಲ್ಲವೇ ಕಡಿತಗೊಳಿಸುವ ನಿರ್ಧಾರ ಸರಿಯಲ್ಲ. ಇದರಿಂದ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಸಣ್ಣ ಮತ್ತು ಮಧ್ಯಮ ಮೀನುಗಾರರಿಗೆ ಸಂಕಷ್ಟ ಎದುರಾಗಲಿದೆ ಎಂದು ಪಶ್ಚಿಮ ಬಂಗಾಳದ ಮೀನುಗಾರ ಭೀಮನ್ ಜಾನಾ ಹೇಳಿದ್ದಾರೆ.
ಡಬ್ಲುಟಿಓ ಜೂ.12ರಂದು ನಡೆಸಿದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮೀನುಗಾರರಿಗೆ ಸಹಾಯಧನ ನಿರ್ಬಂಧಿಸುವ ವಿಚಾರದ ಬಗ್ಗೆ ಚರ್ಚಿಸಿದೆ. ಸಂಸ್ಥೆಯ ಪ್ರಸ್ತಾವನೆಯಲ್ಲಿ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ, ಆಹಾರ ಭದ್ರತೆ ಸೇರಿದಂತೆ ಯಾವುದೇ ಕಾಳಜಿವುಳ್ಳ ಅಂಶಗಳು ಉಲ್ಲೇಖವಾಗಿಲ್ಲ. ಅದೇ ಮುಂದುವರಿದ ರಾಷ್ಟ್ರಗಳಲ್ಲಿ ಸಣ್ಣ ಮೀನುಗಾರಿಕೆ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿವೆ ಎಂದರು.

ನೂರಾರು ವರ್ಷಗಳಿಂದ ಮೀನುಗಾರಿಕೆ
''ನಮ್ಮ ಕುಟುಂಬ ನೂರಾರು ವರ್ಷಗಳಿಂದ ಮೀನುಗಾರಿಕೆಯಿಂದ ಜೀವನ ಸಾಗಿಸುತ್ತಿದೆ. ಒಂಭತ್ತನೇ ತಲೆಮಾರಿನವನಾದ ನಾನು ಸಹ ಅದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ಚೀನಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೀನು ಹಿಡಿದು ಫ್ರೀಜ್ ಮಾಡಿಟ್ಟು ಮಾರಾಟ ಮಾಡುತ್ತಾರೆ ಅಂಥ ವ್ಯವಸ್ಥೆ ಮತ್ತು ಸೌಲಭ್ಯಗಳು ಇಲ್ಲಿವೆಯೇ,'' ಎಂದು ಮೀನುಗಾರರೊಬ್ಬರು ಪ್ರಶ್ನಿಸಿದ್ದಾರೆ.

ಕರ್ನಾಟಕದಿಂದ 2 ಗುಂಪು ಭಾಗಿ
ಡಬ್ಲುಟಿಓ ಮೀನುಗಾರರಿಗೆ ಸಹಾಯಧನ ನಿಲ್ಲಿಸುವ ವಿಚಾರ ಕೈಗೆತ್ತಿಕೊಳ್ಳುತ್ತಿದ್ದಂತೆ ವಿಶ್ವಕಚೇರಿ ಕಚೇರಿ ಮುಂದೆ ದೇಶದ ಸುಮಾರು 34 ಮೀನುಗಾರರ ಗುಂಪುಗಳು ಪ್ರಮುಖ ಸದಸ್ಯರು ಜಮಾಯಿಸಿದ್ದಾರೆ. ಕರ್ನಾಟಕ ದಿಂದ 2, ಗುಜರಾತ್ ನ 5, ಮಹಾರಾಷ್ಟ್ರದ 6, ಗೋವಾ 1, ಕೇರಳ 6, ತಮಿಳುನಾಡು 5, ಆಂಧ್ರಪ್ರದೇಶ 4 ಮತ್ತು ಪಶ್ಚಿಮ ಬಂಗಾಳದ 5 ಗುಂಪುಗಳ ಮುಖಂಡರು ಮೀನುಗಾರರ ಪರವಾಗಿ ಧ್ವನಿ ಎತ್ತಿ ನ್ಯಾಯ ಕೇಳಿದ್ದಾರೆ.

ಶೇ. 67.3ರಷ್ಟು ಮಂದಿ ಬಿಪಿಎಲ್ ವ್ಯಾಪ್ತಿಗೆ
ಭಾರತವು ಒಟ್ಟು 8,188 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿದೆ. ಇಷ್ಟು ಪ್ರದೇಶವನ್ನು ಆರ್ಥಿಕ ವಲಯವೆಂದೂ ಕರೆಯುತ್ತಾರೆ. ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್ಆರ್ ಐ) ಪ್ರಕಾರ, 2016ರಲ್ಲಿ 0.90 ಮಿಲಿಯನ್ ನಷ್ಟಿದ್ದ ಸಮುದ್ರ ಮೀನುಗಾರರು ಇದೀಗ 3.77ಮಿಲಿಯನ್‌ಗೆ ಹೆಚ್ಚಾಗಿದ್ದಾರೆ. ಈ ಪೈಕಿ 3202 ಕುಟುಂಬಗಳು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಒಟ್ಟು ಮೀನುಗಾರ ಪೈಕಿ ಸರಿಸುಮಾರು ಶೇ. 67.3ರಷ್ಟು ಮಂದಿ ಬಿಪಿಎಲ್ ವ್ಯಾಪ್ತಿಗೆ ಬರುತ್ತಾರೆ. ಒಂದು ಸಾವಿರ ಮಂದಿ ಪುರುಷರಿಗೆ 928 (ಲಿಂಗಾನುಪಾತ) ಮಹಿಳೆಯರಿದ್ದಾರೆ.
ಅಲ್ಲದೇ ಮೀನುಗಾರಿಕೆ ನೆಚ್ಚಿಕೊಂಡು ಮಹಿಳೆಯರು ಜೀವಿಸುತ್ತಿದ್ದಾರೆ. ಮೀನುಗಾರರ ಸಹಾಯಧನ ನಿಲ್ಲಿಸಿದರೆ ಇಷ್ಟು ಜನರ ಬದುಕು ದುಸ್ತರವಾಗುತ್ತದೆ. ಕೋವಿಡ್ ನಂತರ ಪುನಃ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಬೇಕಾಗುತ್ತದೆ ಎಂದು ಮಹಾರಾಷ್ಟ್ರದ ಮೀನುಗಾರ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಸಣ್ಣ ಮೀನುಗಾರಿಕೆ ಅಧಿಕ ಪ್ರಮಾಣ
ದೇಶದಲ್ಲಿ ಮೀನು ಕೈಗಾರಿಕೆಗಿಂತ ಸಣ್ಣ ಮೀನುಗಾರಿಕೆ ಅಧಿಕ ಪ್ರಮಾಣದಲ್ಲಿದೆ. ನಾವೆಲ್ಲ ದೋಣಿಗಳ ಮೂಲಕ ಪರಿಸರ, ಸಮುದ್ರಕ್ಕೆ ಹಾನಿಯಾಗದಂತೆ ಮೀನುಗಾರಿಕೆ ಮಾಡುತ್ತಿದ್ದೇವೆ. ಸಾವಿರಾರು ವರ್ಷಗಳಿಂದ ಸುಸ್ಥಿರ ಮೀನುಗಾರಿಕೆ ಮಾಡಿಕೊಂಡು ಬಂದಿದ್ದೇವೆ. ಸರ್ಕಾರ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ಈ ವಲಯವನ್ನು ಅಭಿವೃದ್ಧಿ ಪಡಿಸಬೇಕಿದೆ. ಚೀನಾ, ಯುರೋಪ್ ಖಂಡಗಳ ದೇಶಗಳು ನೀಡುವ ಸೌಲಭ್ಯ, ಸಹಾಯಧನ ಇಲ್ಲಿಯೂ ಒದಗಿಸಬೇಕು. ಇದರ ಹೊರತಾಗಿ ಸಬ್ಸಿಡಿ ಯೋಜನೆಗಳಿಗೆ ನಿರ್ಬಂಧ ವಿಧಿಸಿದರೆ ಈ ವರ್ಗದ ಕೋಟ್ಯಂತರ ಜನರು ಬೀದಿಗೆ ಬೀಳುತ್ತಾರೆ ಎಂದು ಮೀನುಗಾರರು ಸಮಸ್ಯೆಗಳನ್ನು ಹೇಳಿಕೊಂಡರು.












Click it and Unblock the Notifications