₹5,000 ಮತ್ತು ಒಂದು ಮೊಬೈಲ್‌ನಿಂದ ₹50 ಕೋಟಿ ವ್ಯವಹಾರ: ನಟಿ ಪಾರುಲ್ ಗುಲಾಟಿಯ ಯಶೋಗಾಥೆ

ಒಂದು ಒಳ್ಳೆಯ ಆಲೋಚನೆ, ಕೇವಲ ₹5,000 ಬಂಡವಾಳ ಮತ್ತು ಕೈಯಲ್ಲಿದ್ದ ಒಂದು ಮೊಬೈಲ್ ಫೋನ್. ಇಷ್ಟೇ ಸಾಕಾಯಿತು ನಟಿ, ಕಂಟೆಂಟ್ ಕ್ರಿಯೇಟರ್ ಹಾಗೂ ಉದ್ಯಮಿ ಪಾರುಲ್ ಗುಲಾಟಿ ಅವರಿಗೆ. ಇಂದು ಅವರು ಕಟ್ಟಿದ ನಿಶ್ ಹೇರ್ (Nish Hair) ಸಂಸ್ಥೆಯ ಮೌಲ್ಯ ಸುಮಾರು ₹50 ಕೋಟಿ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಡೆದ ಸಂವಾದವೊಂದರಲ್ಲಿ ಪಾರುಲ್ ತಮ್ಮ ಉದ್ಯಮದ ಆರಂಭದ ದಿನಗಳು, ಭಾರತದಲ್ಲಿ ಹೇರ್ ಎಕ್ಸ್‌ಟೆನ್ಷನ್‌ಗಳನ್ನು ಪರಿಚಯಿಸುವಾಗ ಎದುರಿಸಿದ ಸವಾಲುಗಳು ಮತ್ತು ಸಾಮಾಜಿಕ ಜಾಲತಾಣಗಳ ಶಕ್ತಿಯನ್ನು ಹೇಗೆ ಬಳಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

ಸಮಸ್ಯೆಯಲ್ಲೇ ಕಂಡುಕೊಂಡ ಅವಕಾಶ

ಪಾರುಲ್ ನಟಿಯಾಗಿ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಒಂದು ಮಹಿಳೆಯನ್ನು ಭೇಟಿಯಾದರು. ಆ ಮಹಿಳೆ ಪೂರ್ಣಕಾಲಿಕ ಉದ್ಯೋಗ, ಮಾಡೆಲಿಂಗ್ ಮತ್ತು ಸ್ವಂತ ಉದ್ಯಮವನ್ನು ಒಂದೇ ಸಮಯದಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆ ಘಟನೆ ಪಾರುಲ್ ಅವರ ಮೇಲೆ ದೊಡ್ಡ ಪ್ರಭಾವ ಬೀರಿತು. "ನಾನೂ ನನ್ನದೇ ಆದ ಉದ್ಯಮ ಆರಂಭಿಸಬೇಕು" ಎಂಬ ನಿರ್ಧಾರ ಆಗಲೇ ಮೂಡಿತು.

Parul Gulati

ಕೆಲ ದಿನಗಳ ಬಳಿಕ ತಮ್ಮ ಸುತ್ತಮುತ್ತಲೇ ಒಂದು ದೊಡ್ಡ ಅವಕಾಶವಿದೆ ಎಂಬುದು ಅವರಿಗೆ ಅರಿವಾಯಿತು. ಆ ಸಮಯದಲ್ಲಿ ಭಾರತದಲ್ಲಿ ಹೇರ್ ಎಕ್ಸ್‌ಟೆನ್ಷನ್‌ಗಳು ಹೆಚ್ಚು ಜನಪ್ರಿಯವಾಗಿರಲಿಲ್ಲ. ಕೂದಲು ಉದುರುವವರು ಅಥವಾ ತೆಳ್ಳನೆಯ ಕೂದಲಿನ ಸಮಸ್ಯೆ ಇರುವವರು ಇಂತಹ ಉತ್ಪನ್ನಗಳನ್ನು ಬಳಸಲು ಹಿಂಜರಿಯುತ್ತಿದ್ದರು. ವಿಗ್ ಬಳಸುವುದು ಎಂಬ ಸಾಮಾಜಿಕ ಮುಜುಗರವೂ ಇತ್ತು.

ಈ ಮನೋಭಾವವನ್ನೇ ಬದಲಿಸಬೇಕೆಂದು ಪಾರುಲ್ ನಿರ್ಧರಿಸಿದರು. ಅವರ ಉದ್ದೇಶ ಸರಳವಾಗಿತ್ತು. ಉತ್ತಮ ಗುಣಮಟ್ಟದ ಕೂದಲು ಪರಿಹಾರಗಳನ್ನು ಕಡಿಮೆ ಬೆಲೆಯಲ್ಲಿ, ಆನ್‌ಲೈನ್‌ನಲ್ಲಿ ಎಲ್ಲರಿಗೂ ತಲುಪಿಸುವುದು ಮತ್ತು ಈ ವಿಷಯದ ಬಗ್ಗೆ ಇರುವ ಹಿಂಜರಿಕೆಯನ್ನು ದೂರ ಮಾಡುವುದು. "ಬಹಳಷ್ಟು ಉತ್ಸಾಹ ಮತ್ತು ಹೊಸ ಆಲೋಚನೆಗಳೊಂದಿಗೆ ಈ ಪ್ರಯಾಣ ಆರಂಭವಾಯಿತು. ಇಂದು ಇಲ್ಲಿಯವರೆಗೆ ಹೇಗೆ ಬಂದೆ ಎನ್ನುವುದಕ್ಕೆ ದೇವರೇ ಸಾಕ್ಷಿ," ಎಂದು ಅವರು ನೆನಪಿಸಿಕೊಂಡರು.

ಸೆಲೆಬ್ರಿಟಿ ಜಾಹೀರಾತಿಗೆ ಹಣ ಇರಲಿಲ್ಲ

2017ರಲ್ಲಿ ನಿಶ್ ಹೇರ್ ಆರಂಭವಾದಾಗ ಇಂದಿನಂತೆ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಬೆಳೆಯಿರಲಿಲ್ಲ. ದೊಡ್ಡ ನಟ-ನಟಿಯರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳುವಷ್ಟು ಹಣವೂ ಪಾರುಲ್ ಬಳಿ ಇರಲಿಲ್ಲ. ಹೀಗಾಗಿ ಅವರು ತಾವೇ ತಮ್ಮ ಕಂಪನಿಯ ಮುಖವಾಗಲು ನಿರ್ಧರಿಸಿದರು.

ಮೊಬೈಲ್‌ನಲ್ಲಿ ವಿಡಿಯೊಗಳನ್ನು ಚಿತ್ರೀಕರಿಸಿ, ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡತೊಡಗಿದರು. ಮೊದಲಿಗೆ ಇದು ತಾತ್ಕಾಲಿಕ ಕ್ರಮವೆಂದುಕೊಂಡಿದ್ದರೂ, ನಂತರ ಇದೇ ನಿಶ್ ಹೇರ್ ಯಶಸ್ಸಿನ ಪ್ರಮುಖ ಕಾರಣವಾಯಿತು. "ಬೆಳಿಗ್ಗೆಯಿಂದ ರಾತ್ರಿ ತನಕ ನಾನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದೆ," ಎಂದು ಅವರು ಹೇಳುತ್ತಾರೆ.

ಅವರ ಪ್ರಕಾರ, ಜನರು ಜಾಹೀರಾತಿಗಿಂತ ಉತ್ಪನ್ನದ ಹಿಂದಿರುವ ವ್ಯಕ್ತಿಯೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಸಂಪರ್ಕ ಹೊಂದುತ್ತಾರೆ. ಇಂದಿಗೂ ನಿಶ್ ಹೇರ್‌ನ "ಮಾರ್ಕೆಟಿಂಗ್ ವಿಭಾಗ" ತಾನೇ ಎಂದು ಪಾರುಲ್ ನಗುತ್ತಾ ಹೇಳುತ್ತಾರೆ. "ನನಗೆ ಪ್ರತ್ಯೇಕ ಮಾರ್ಕೆಟಿಂಗ್ ಬಜೆಟ್ ಬೇಕಾಗಿಲ್ಲ. ನಾನು ರೀಲ್ಸ್ ಮಾಡುತ್ತೇನೆ, ಅದೇ ನನ್ನ ಮಾರ್ಕೆಟಿಂಗ್," ಎಂದು ಅವರು ಹೇಳುತ್ತಾರೆ.

ಮೊದಲ ಉತ್ಪನ್ನ, ಮೊದಲ ಗ್ರಾಹಕಿ

ಆರಂಭದಲ್ಲಿ ಪಾರುಲ್ ಸ್ವತಃ ಹೇರ್ ಎಕ್ಸ್‌ಟೆನ್ಷನ್‌ಗಳನ್ನು ತಯಾರಿಸುತ್ತಿದ್ದರು. ತೆಳ್ಳನೆಯ ಕೂದಲಿಗೆ ದಪ್ಪತನ ನೀಡುವ ಮೊದಲ ಉತ್ಪನ್ನವನ್ನು ಸರಳ ಯಂತ್ರದ ಸಹಾಯದಿಂದ ಹೊಲಿದು ತಯಾರಿಸಿದ್ದರು. ಆದರೆ ಗ್ರಾಹಕರನ್ನು ಹುಡುಕುವುದು ಸುಲಭವಾಗಿರಲಿಲ್ಲ.

ಜಾಹೀರಾತುಗಳ ಆಡಿಷನ್‌ಗೆ ಹೋದಾಗ ಕಾಯುವ ಕೋಣೆಯಲ್ಲಿ ಇತರ ಮಾಡೆಲ್‌ಗಳ ಮುಂದೆ ಉದ್ದೇಶಪೂರ್ವಕವಾಗಿ ತಮ್ಮ ಹೇರ್ ಎಕ್ಸ್‌ಟೆನ್ಷನ್ ತೆಗೆದು ತೋರಿಸುತ್ತಿದ್ದರು. ಇದರಿಂದ ಕುತೂಹಲ ಮೂಡುತ್ತಿತ್ತು. "ಇದು ಎಲ್ಲಿಂದ ತಂದಿದ್ದು? ನಮಗೂ ಸಿಗುತ್ತದೆಯೇ?" ಎಂದು ಹಲವರು ಕೇಳತೊಡಗಿದರು.

ಮೊದಲ ಹಣ ಕೊಟ್ಟು ಖರೀದಿಸಿದ ಗ್ರಾಹಕಿ

ಆ ಸಮಯದಲ್ಲಿ ಆ ರೀತಿಯ ಉತ್ಪನ್ನದ ಬೆಲೆ ₹10,000 ರಿಂದ ₹12,000 ಇರಬಹುದಾಗಿದ್ದರೂ, ಪಾರುಲ್ ಅದನ್ನು ₹5,000ಕ್ಕೆ ಮಾರಲು ಒಪ್ಪಿಕೊಂಡರು. ಏಕೆಂದರೆ ಅಷ್ಟು ಹಣ ಬಂದರೆ ತಮ್ಮ ಆರಂಭಿಕ ಹೂಡಿಕೆಯಾದ ₹5,000 ವಾಪಸ್ ಬರುತ್ತಿತ್ತು. ಆದರೆ ಮೊದಲ ಪ್ರಯತ್ನವೇ ಯಶಸ್ವಿಯಾಗಲಿಲ್ಲ.

ಮೊದಲ ಮಾದರಿಯನ್ನು ಗ್ರಾಹಕಿ ತಿರಸ್ಕರಿಸಿದರು. ಮತ್ತೆ ವಿನ್ಯಾಸ ಬದಲಿಸಿ, ಸುಧಾರಿಸಿ ಕೊನೆಗೆ ಮಾರಾಟ ಮಾಡಬೇಕಾಯಿತು. "ನನ್ನ ಮೊದಲ ಮಾರಾಟ ಆಗಲು ಒಂದು ತಿಂಗಳು ಹಿಡಿಯಿತು," ಎಂದು ಅವರು ಹೇಳುತ್ತಾರೆ. ಈ ಅನುಭವದಿಂದ ಅವರು ಕಲಿತ ಪಾಠ ಒಂದೇ. "ಒಂದು ಆಲೋಚನೆ ಕಾರ್ಯರೂಪಕ್ಕೆ ಬಂದಾಗ ಮಾತ್ರ ಅದು ಮೌಲ್ಯ ಹೊಂದುತ್ತದೆ. ಇಲ್ಲವಾದರೆ ಅದು ಕೇವಲ ಮನಸ್ಸಿನಲ್ಲಿರುವ ವ್ಯರ್ಥ ಯೋಚನೆ."

ವಾರಾಂತ್ಯದ ಮಾರುಕಟ್ಟೆಗಳೇ ಮೊದಲ ವೇದಿಕೆ

ಸಾಮಾಜಿಕ ಜಾಲತಾಣಗಳು ಜನಪ್ರಿಯವಾಗುವ ಮೊದಲು ಪಾರುಲ್ ವಾರಾಂತ್ಯದ ಫ್ಲೀ ಮಾರ್ಕೆಟ್‌ಗಳಲ್ಲಿ ಸ್ಟಾಲ್ ಹಾಕುತ್ತಿದ್ದರು. ಅಲ್ಲಿ ಬಂದ ಪ್ರತಿಯೊಬ್ಬರನ್ನೂ ಸ್ವತಃ ಮಾತನಾಡಿಸಿ ಉತ್ಪನ್ನವನ್ನು ಪ್ರಯತ್ನಿಸಲು ಪ್ರೋತ್ಸಾಹಿಸುತ್ತಿದ್ದರು. ಒಂದು ಸರಳ ಉಪಾಯ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.

ಗ್ರಾಹಕರು ಹೇರ್ ಎಕ್ಸ್‌ಟೆನ್ಷನ್ ಧರಿಸಿದ ನಂತರ ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಮನೆಗೆ ಹೋದ ನಂತರ ಆ ಫೋಟೋಗಳನ್ನು ನೋಡಿದ ಹಲವರು ಮತ್ತೆ ಬಂದು ಅದೇ ಉತ್ಪನ್ನವನ್ನು ಖರೀದಿಸುತ್ತಿದ್ದರು. ಹೀಗೆ ನಿಧಾನವಾಗಿ ಗ್ರಾಹಕರ ವಿಶ್ವಾಸವೂ, ಬ್ರ್ಯಾಂಡ್ ಪರಿಚಿತತೆಯೂ ಹೆಚ್ಚಿತು. ಸುಮಾರು 12 ಫ್ಲೀ ಮಾರ್ಕೆಟ್‌ಗಳಲ್ಲಿ ಭಾಗವಹಿಸಿದ ನಂತರ ಈ ಉದ್ಯಮ ದೊಡ್ಡ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ ಎಂಬುದು ಅವರಿಗೆ ಸ್ಪಷ್ಟವಾಯಿತು.

ಅಹಮದಾಬಾದ್‌ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಒಂದೇ ದಿನ ₹1 ಲಕ್ಷ ಮಾರಾಟವಾದ ಕ್ಷಣವನ್ನು ಅವರು ತಮ್ಮ ಜೀವನದ ಮಹತ್ವದ ತಿರುವು ಎಂದು ನೆನಪಿಸಿಕೊಳ್ಳುತ್ತಾರೆ. ಗ್ರಾಹಕರ ಸಲಹೆಗಳ ಆಧಾರದ ಮೇಲೆ ನಂತರ ಕ್ಲಿಪ್-ಇನ್ ಎಕ್ಸ್‌ಟೆನ್ಷನ್‌ಗಳ ಜೊತೆಗೆ ಹೇರ್ ಟಾಪರ್‌ಗಳಂತಹ ಹೊಸ ಉತ್ಪನ್ನಗಳನ್ನೂ ಅಭಿವೃದ್ಧಿಪಡಿಸಿದರು.

ಕಾನ್ಸ್ ಚಿತ್ರೋತ್ಸವದಲ್ಲಿ ಹೇರ್ ಡ್ರೆಸ್

ನಿಶ್ ಹೇರ್ ಬಗ್ಗೆ ಜಗತ್ತಿನ ಗಮನ ಸೆಳೆಯಲು ಪಾರುಲ್ ವಿಭಿನ್ನ ಮಾರ್ಗವನ್ನೂ ಆಯ್ಕೆ ಮಾಡಿಕೊಂಡರು. ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಅವರು ತಮ್ಮದೇ ಕಂಪನಿಯ ನೈಜ ಮಾನವ ಕೂದಲಿನಿಂದ ತಯಾರಿಸಿದ ವಿಶೇಷ ಉಡುಪನ್ನು ಧರಿಸಿ ಹೋದರು. ಮೊದಲಿಗೆ ಭಾರೀ ವಿನ್ಯಾಸದ ಉಡುಪು ಮಾಡಲು ಯೋಜನೆ ಇತ್ತಾದರೂ, ಸಮಯದ ಕೊರತೆಯಿಂದ ಅದನ್ನು ಸರಳಗೊಳಿಸಬೇಕಾಯಿತು. ಆದರೂ ಆ ಉಡುಪು ವಿಶ್ವದ ಗಮನ ಸೆಳೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+