ಜಿಎಸ್ ಟಿ ಎಫೆಕ್ಟ್: ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡ ಹಿನ್ನೆಲೆಯಲ್ಲಿ ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆ. ಹೂಡಿಕೆದಾರರ ಭವಿಷ್ಯವನ್ನು ನಿರ್ಧರಿಸಲು ಕನಿಷ್ಠ ಒಂದೆರಡು ತಿಂಗಳುಗಳಾದರೂ ಬೇಕು ಎನ್ನುತ್ತಿರುವ ಮಾರುಕಟ್ಟೆ ತಜ್ಞರು. ಹಾಗಾಗಿ, ಹೂಡ
ಮುಂಬೈ, ಜುಲೈ 3: ನಿರೀಕ್ಷೆಯಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಯಾವ ವಸ್ತುಗಳು ಅಗ್ಗ, ಯಾವ ವಸ್ತುಗಳು ತುಟ್ಟಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ಸಾಗುತ್ತಲೇ ಇವೆ.
ಆದರೆ, ಮುಂಬೈನ ದಲಾಲ್ ಸ್ಟ್ರೀಟ್ ನಲ್ಲಿರುವ ಷೇರು ಮಾರುಕಟ್ಟೆಯ ಪರಿಸ್ಥಿತಿಯೇ ಬೇರೆ. ಜಿಎಸ್ ಟಿ ಜಾರಿಗೆ ಬಂದ ಜುಲೈ 1 ಶನಿವಾರ ಹಾಗೂ ಜುಲೈ 2 ಭಾನುವಾರವಾಗಿದ್ದರಿಂದ, ಆ ಎರಡೂ ದಿನಗಳು ಷೇರು ಮಾರುಕಟ್ಟೆಗೆ ರಜೆಯಿತ್ತು. ಸೋಮವಾರವಷ್ಟೇ ಷೇರು ಮಾರುಕಟ್ಟೆ ಶುರುವಾಗಿದೆ.
ಆದರೆ, ನಿರೀಕ್ಷೆಯಂತೆ, ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇದಕ್ಕೆ ಕಾರಣ ಮತ್ತದೇ ಜಿಎಸ್ ಟಿ.

ಲವಲವಿಕೆ ಕಳೆದುಕೊಂಡ ಮಾರುಕಟ್ಟೆ
ಇದನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರದಿದ್ದರೂ, ಮಾರುಕಟ್ಟೆಯು ಲವಲವಿಕೆಯನ್ನಂತೂ ಕಳೆದುಕೊಳ್ಳುತ್ತದೆ ಎಂಬುದನ್ನು ಊಹಿಸಲಾಗಿತ್ತು. ಇದೀಗ ಜಾರಿಯಾಗಿರುವ ಜಿಟಿಎಸ್ ಯು ದೇಶದ ಜಿಡಿಪಿ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಸದ್ಯದ ಮಟ್ಟಿಗಂತೂ ಹೇಳಲು ಆಗುವುದಿಲ್ಲ. ಹಾಗಾಗಿ, ಹೂಡಿಕೆದಾರರೂ ಕೊಂಚ ಸಮಯ ಕಾಯಲು ನಿರ್ಧರಿಸಿದ್ದಾರೆ. ಇದರ ಪರಿಣಾಮ, ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ವಾರದ ಆರಂಭಿಕ ದಿನಗಳಲ್ಲಿ ಕಾಣಬೇಕಿದ್ದ ಉತ್ಸಾಹ ಕಾಣುತ್ತಿಲ್ಲ.

ಆಟೋಮೊಬೈಲ್, ಬ್ಯಾಂಕಿಂಕ್ ಷೇರುಗಳು ಕೊಂಚ ಇಳಿಮುಖ
ಶುಕ್ರವಾರ ಸಂಜೆ ಷೇರು ಮಾರುಕಟ್ಟೆಯು ತನ್ನ ವ್ಯವಹಾರ ಪೂರ್ತಿಗೊಳಿಸಿದಾಗ 9,520 ಅಂಶಗಳಿಗೆ ನಿಂತಿತ್ತು. ಇನ್ನು, ಎಸ್ ಆ್ಯಂಡ್ ಪಿ ಹಾಗೂ ಬಿಎಸ್ ಇ ಸೆನ್ಸೆಕ್ಸ್ 30,921.6 ಅಂಶಗಳಿಗೆ ನಿಂತಿತ್ತು. ಆದರೆ, ಸೋಮವಾರ ಬೆಳಗಿನ ಏರಿಕೆಯು ಈ ಹಿಂದಿನ ಷೇರು ಮಾರುಕಟ್ಟೆಯ ಆರು ವ್ಯವಹಾರಿಕ ದಿನಗಳ ಆರಂಭದಲ್ಲಿ ಇದ್ದ ಏರಿಕೆಗೆ ಹೋಲಿಸಿದರೆ ಕಡಿಮೆಯಾಗಿತ್ತು. ಅದರಲ್ಲೂ ಪ್ರಮುಖವಾಗಿ, ಆಟೋ ಮೊಬೈಲ್, ಬ್ಯಾಂಕಿಂಗ್ ಷೇರುಗಳು ಕೊಂಚ ಇಳಿಮುಖವಾಗಿದ್ದವು.

ಸ್ಥಿರತೆ ಕಾಪಾಡುತ್ತಿರುವ ಮ್ಯೂಚ್ಯುವಲ್ ಫಂಡ್ ಗಳು
ಸದ್ಯದ ಮಟ್ಟಿಗೆ ಈಕ್ವಿಟಿ ಮ್ಯೂಚ್ಯುವಲ್ ಫಂಡ್ ಗಳು (MFs) ಹೂಡಿಕೆದಾರರನ್ನು ಕೊಂಚ ಆಕರ್ಷಿಸುತ್ತಿದ್ದು, ಮಾರುಕಟ್ಟೆಗೆ ಶಕ್ತಿ ತುಂಬಲು ಇವು ಸಹಕಾರಿಯಾಗಿವೆ. ಸದ್ಯದ ಮಟ್ಟಿಗೆ 36, 300 ಕೋಟಿ ರು.ಗಳಷ್ಟು ಹೂಡಿಕೆಯನ್ನು ಹೊಂದಿರುವ ಈ ಕ್ಷೇತ್ರವು ತನ್ನ ಗತಿಯನ್ನು ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ.

ಒಂದು ಅಥವಾ ಎರಡು ತಿಂಗಳುಗಳಲ್ಲಿ ಸ್ಪಷ್ಟ ಚಿತ್ರಣ
ಇದನ್ನು ಗಮನಿಸಿರುವ ಮಾರುಕಟ್ಟೆ ತಜ್ಞರು, ಈ ಮಾರುಕಟ್ಟೆಯ ಸೂಚ್ಯಂಕದ ಇಳಿತ ಕೇವಲ ಒಂದರೆಡು ದಿನಗಳಿಗಷ್ಟೇ ಅಲ್ಲ, ಜುಲೈ ತಿಂಗಳು ಮುಗಿಯುವ ತನಕ ಅಥವಾ ಇನ್ನೂ ಮುಂದುವರಿದರೆ ಆಗಸ್ಟ್ ತಿಂಗಳಿನವರೆಗೆ ಹಾಗೆಯೇ ಇರುತ್ತದೆ ಎಂದು ಹೇಳಿದ್ದಾರೆ.
ಹಾಗೊಂದು ವೇಳೆ, ಷೇರು ಮಾರುಕಟ್ಟೆಯ ದರಗಳು ಕೊಂಚ ಏರಿಕೆ ಕಂಡರೂ, ಬಂಡವಾಳ ಹೂಡಿಕೆ ಮಾಡುವ ಕಂಪನಿಗಳ ಭವಿಷ್ಯವನ್ನು ನಿಖರವಾಗಿ ಲೆಕ್ಕ ಹಾಕಲು ಕನಿಷ್ಠ ಮೂರು ತಿಂಗಳುಗಳ ಕಾಲಾವಕಾಶ ಬೇಕೆಂದು ಹೇಳುತ್ತಿದ್ದಾರೆ ಮಾರುಕಟ್ಟೆ ತಜ್ಞರು.

ಮಾಹಿತಿ ತಂತ್ರಜ್ಞಾನ ಷೇರುಗಳನ್ನು ನಿರ್ಧರಿಸುವ ಈ ಮೂರು ಕ್ಷೇತ್ರಗಳು
ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳ (ವಾರ್ಷಿಕವಾಗಿ ಬಿಲಿಯನ್ ಗಟ್ಟಲೆ ಷೇರು ಮಾರಾಟ ಮಾಡುವ ಕಂಪನಿಗಳು) ಷೇರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆಟೊಮೊಬೈಲ್ ಕ್ಷೇತ್ರ, ಗೃಹಬಳಕೆ ವಸ್ತುಗಳು ಹಾಗೂ ಸಿಮೆಂಟ್ ಕ್ಷೇತ್ರದ ಕಂಪನಿಗಳು. ಆಟೋಮೊಬೈಲ್ ಕ್ಷೇತ್ರದ ಮೇಲೆ ಈ ಹಿಂದೆ, ಶೇ. 24.3ರಿಂದ ಶೇ. 35.9ರಷ್ಟು ತೆರಿಗೆ ಇತ್ತು. ಈಗ ಜಿಎಸ್ ಟಿಯಡಿ ಶೇ. 28ರಿಂದ ಶೇ. 43ರಷ್ಟು ತೆರಿಗೆ ಹೆಚ್ಚಾಗಿದೆ.

ದೊಡ್ಡ ಕಂಪನಿಗಳಿಗೆ ಇದೂ ಹೊರೆ?
ಇನ್ನು ಗೃಹಬಳಕೆ ಪರಿಕರ ತಯಾರಿಕಾ ಕಂಪನಿಗಳ ಮೇಲೆ ಈ ಹಿಂದೆ ತೆರಿಗೆಯ ಪ್ರಮಾಣ ಶೇ. 16ರಿಂದ ಶೇ. 28ರಷ್ಟಿತ್ತು. ಜಿಎಸ್ ಟಿ ಅನ್ವಯ ಶೇ. 28ರ ತೆರಿಗೆ ಬಿದ್ದಿದೆ. ಇನ್ನು, ಸಿಮೆಂಟ್ ಕ್ಷೇತ್ರದ ಕಂಪನಿಗಳ ಮೇಲೆ ಹಳೆಯ ಶೇ. 23ರಿಂದ 26ರವರೆಗಿನ ತೆರಿಗೆಯ ಬದಲಾಗಿ ಶೇ. 28ರಷ್ಟು ತೆರಿಗೆ ವಿಧಿಸಲಾಗಿದೆ. ಹೀಗಾಗಿ, ಇದು ವಾರ್ಷಿಕ ಬಿಲಿಯನ್ ಗಟ್ಟಲೆ ವಹಿವಾಟು ನಡೆಸುವ ಕಂಪನಿಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ.












Click it and Unblock the Notifications