Gold Rate: ಒಂದೇ ವರ್ಷಕ್ಕೆ ಚಿನ್ನದ ಬೆಲೆ 42% ಹೆಚ್ಚಳ, ₹80,000 vs ₹1,14,000
ಬೆಂಗಳೂರು, ಸೆಪ್ಟಂಬರ್ 17: ಬಂಗಾರ ದರವು ಜಿಗಿಯುತ್ತಲೇ ಇದೆ. ಅಲ್ಪ ಇಳಿಕೆ ಕಂಡು ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗಿವ ಈ ಚಿನ್ನದ ಬೆಲೆಯು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇಕಡಾ 42 ರಷ್ಟು ಹೆಚ್ಚಳವಾಗಿದೆ. ಆದರೆ ಬೇಡಿಕೆ ಮಾತ್ರ ತಗ್ಗುತ್ತಿಲ್ಲ. ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಈ ಚಿನ್ನವು ಹೊಸ ದಾಖಲೆ ಸೃಷ್ಟಿ ಮಾಡಿದೆ. ಹಬ್ಬದ ಋತುವಿನ ಮೊದಲೇ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹೌದು, ಚಿನ್ನದ ದರವು ಸದ್ಯ 1,14,000 ರೂಪಾಯಿ ಆಸುಪಾಸು ಇದೆ. ಇದೇ ಚಿನ್ನವು ಕಳೆದ ವರ್ಷ 80,000 ರೂಪಾಯಿ ಇತ್ತು. ಅಲ್ಲಿಂದ ಇಲ್ಲಿಗೆ ಅತೀ ಕಡಿಮೆ ಸಮಯದಲ್ಲಿ ಶೇಕಡಾ 42 ರಷ್ಟು ಏರಿಕೆ ಆಗಿದೆ. ಈ ಮೂಲಕ ಕೊಳ್ಳುವವರಿಗೆ ದರವು ಬಿಗ್ ಶಾಕ್ ನೀಡುತ್ತಲೇ ಬಂದಿದೆ. ಬೆಲೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಒಂದು ಲಕ್ಷ ರೂಪಾಯಿ ಆಸುಪಾಸು ಇದ್ದಾಗಲೇ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದ ಗ್ರಾಹಕರು ಹಬ್ಬಗಳ ಹೊತ್ತಿಗೆ ಖರೀದಿಸುವ ಪ್ಲಾನ್ ಕೈ ಬಿಟ್ಟಿದ್ದಾರೆ.

ಜಿಎಸ್‌ಟಿ ಸಹಿತ 2024ರಲ್ಲಿ ಇದೇ ಸಮಯದಲ್ಲಿ ಬಂಗಾರದ 10 ಗ್ರಾಂಗೆ 80,000 ರೂಪಾಯಿ ಇತ್ತು. ಈ ಬೆಲೆಯಲ್ಲಿ ನಿರಂತರವಾಗಿ ಬದಲಾವಣೆ ಆಗುತ್ತಾ, ಏರುಗತಿಯಲ್ಲಿ ಸಾಗಿ ಬಂತು. ಸದ್ಯ ಶೇ. 42 ರಷ್ಟು ಏರಿಕೆಯಾಗಿದೆ. ಪರಿಣಾಮ ಆಭರಣ ವ್ಯಾಪಾರಿಗಳು ಹೆಚ್ಚಿನ ಗ್ರಾಹಕರು ಹಳೆಯ ಆಭರಣಗಳನ್ನು ಹೊಸ ವಿನ್ಯಾಸಗಳಿಗೆ ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಊಹಿಸಲಾಗಿದೆ.
ದರ ಹೆಚ್ಚಳದಿಂದಾಗಿ ಮಾರಾಟದ ಪ್ರಮಾಣವು ಶೇಕಡಾ 15 ರಷ್ಟು ಇಳಿಕೆ ಆಗಬಹುದು. ಆದರೆ ಮಾರಾಟದ ಒಟ್ಟಾರೆ ಮೌಲ್ಯವು ಶೇಕಡಾ 25 ರಿಂದ 30 ರಷ್ಟು ಹೆಚ್ಚಾಗಬಹುದು. ಹೀಗೆ ಮುಂದುವರಿದರೆ ಚಿನ್ನವನ್ನು ಭವಿಷ್ಯದಲ್ಲಿ ಖರೀದಿಸುವವರೆ ಇಲ್ಲದಂತಾದರೂ ಅಚ್ಚರಿ ಇಲ್ಲ.
ಇದರ ನಡುವೆಯು ಒಂದು ವಾರದ ಹಿಂದೆ ವಾಣಿಜ್ಯ ನಗರಿ ಮುಂಬೈನ ಜವೇರಿ ಬಜಾರ್‌ನಲ್ಲಿ ಚಿನ್ನಕ್ಕೆ ಇನ್ನಿಲ್ಲದಂತೆ ಬೇಡಿಕೆ ಸೃಷ್ಟಿಯಾಗಿದ್ದು ಕಂಡು ಬಂದಿತ್ತು. ಇನ್ನೂ ಜಾಗತಿಕ ಚಿನ್ನದ ಬೆಲೆಗಳು ಪ್ರತಿ ಟ್ರಾಯ್ ಔನ್ಸ್‌ಗೆ ದಾಖಲೆಯ $3,670 ತಲುಪಿದೆ. ಟ್ರಾಯ್ ಔನ್ಸ್ ಎಂದರೆ ಅಮೂಲ್ಯ ಲೋಹಗಳಿಗೆ ಬಳಸುವಂಥದ್ದಾಗಿದೆ. ಇದು 31.1035 ಗ್ರಾಂಗಳಿಗೆ ಸಮಾನ ಎನ್ನಲಾಗಿದೆ. ಟ್ರಾಯ್ ಔನ್ಸ್‌ಗೆ ಬೆಲೆಗಳು $4,000 ಕ್ಕೆ ಏರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಇತ್ತೀಚೆಗೆ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ತಲುಪುತ್ತಿದ್ದಂತೆ ಇದು ಮತ್ತೆ 70-80 ಸಾವಿರ ರೂ. ಇಳಿಕೆ ಆಗಬಹುದೆಂದು ಕೆಲವು ತಜ್ಞರು ಹೇಳಿದರು. ಮತ್ತೆ ಕೆಲವರು ಈಗಲೇ ಏನು ಹೇಳಲು ಆಗಲ್ಲ. ಒಂದು ಲಕ್ಷ ಅದರ ಗರಿಷ್ಠ ಬೆಲೆ ಆಗದು. ಮತ್ತೆ ಹೆಚ್ಚಾದರೂ ಆಗಬಹುದೆಂದು ತಿಳಿಸಿದ್ದರು.












Click it and Unblock the Notifications