Gold investment: 5 ಲಕ್ಷ ರೂಪಾಯಿ ಚಿನ್ನ ಇಟ್ಟುಕೊಳ್ಳೋದಾ ಅಥವಾ ಇಟಿಎಫ್ ಮಾಡೋದಾ? ಯಾವುದು ಲಾಭ?
ಭಾರತೀಯರ ಪಾಲಿಗೆ ಚಿನ್ನ ಎಂದರೆ ಕೇವಲ ಹೂಡಿಕೆಯಲ್ಲ. ಅದು ಆಭರಣ, ಕುಟುಂಬದ ಆಸ್ತಿ, ಕಷ್ಟಕಾಲದ ಭದ್ರತೆ ಮತ್ತು ಹಲವು ಸಂದರ್ಭಗಳಲ್ಲಿ ಭಾವನಾತ್ಮಕ ನೆನಪು ಕೂಡ ಹೌದು. ಮನೆಯಲ್ಲಿರುವ ಚಿನ್ನದ ಆಭರಣ ಒಂದು ಪ್ರತಿಷ್ಠೆ. ಅದರ ಮೌಲ್ಯವನ್ನು ಕೇವಲ ಚಿನ್ನದ ಬೆಲೆಯಿಂದ ಅಳೆಯಲು ಸಾಧ್ಯವಿಲ್ಲ. ಆದರೆ ಹೂಡಿಕೆಯ ದೃಷ್ಟಿಯಿಂದ ನೋಡಿದಾಗ ಒಂದು ಪ್ರಶ್ನೆ ಎದುರಾಗುತ್ತದೆ.
ರೂ. 5 ಲಕ್ಷವನ್ನು ಚಿನ್ನದಲ್ಲಿ ಇಡಬೇಕಾದರೆ ಆಭರಣ ಖರೀದಿಸುವುದೇ ಉತ್ತಮವೆ? ಅಥವಾ Gold ETF ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡುವುದೇ? ಯಾವುದು ಲಾಭ?
ಎರಡರಲ್ಲೂ ಚಿನ್ನದ ಬೆಲೆ ಏರಿದರೆ ಲಾಭವಾಗಬಹುದು. ಆದರೆ ನೀವು ಖರ್ಚು ಮಾಡುವ ರೀತಿ, ಚಿನ್ನವನ್ನು ಇಟ್ಟುಕೊಳ್ಳುವ ವಿಧಾನ, ಮಾರಾಟ ಮಾಡುವಾಗ ಸಿಗುವ ಬೆಲೆ, ಸುರಕ್ಷತೆ ಮತ್ತು ಹೂಡಿಕೆಯ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸವಿದೆ.

ನೆನಪಿಡಿ, ರೂ.5 ಲಕ್ಷದ ಚಿನ್ನ ಎಂದರೆ ಒಂದೇ ರೀತಿಯ ಹೂಡಿಕೆ ಅಲ್ಲ. ನೀವು 5 ಲಕ್ಷಕ್ಕೆ ಚಿನ್ನದ ಆಭರಣ ಖರೀದಿಸಿದರೆ, 5 ಲಕ್ಷದ ಸಂಪೂರ್ಣ ಮೊತ್ತವೇ ಚಿನ್ನವಾಗಿ ಸಿಗುವುದಿಲ್ಲ. ಆಭರಣದ ಬೆಲೆಯಲ್ಲಿ ಚಿನ್ನದ ಬೆಲೆಯ ಜೊತೆಗೆ ಮೇಕಿಂಗ್ ಚಾರ್ಜ್, ಜಿಎಸ್ಟಿ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದ ಇತರ ವೆಚ್ಚಗಳು ಇರಬಹುದು.
ಅಂದರೆ 5 ಲಕ್ಷದ ಬಜೆಟ್ನಲ್ಲಿ ಖರೀದಿಸಿದ ಆಭರಣವನ್ನು ತಕ್ಷಣವೇ ಮಾರಾಟ ಮಾಡಿದರೆ 5 ಲಕ್ಷವೇ ವಾಪಸ್ ಸಿಗುತ್ತದೆ ಎಂದುಕೊಳ್ಳುವುದು ಸರಿಯಲ್ಲ. ಅಷ್ಟು ಸಿಗಲಿಕ್ಕಿಲ್ಲ. ಬೆಲೆ ಏರಿದ ನಂತರ ಮಾರಿದರೆ ಸಿಗಲೂಬಹುದು. ಹೆಚ್ಚೂ ಸಿಗಬಹುದು.
ಇದಕ್ಕೆ ವಿರುದ್ಧವಾಗಿ, Gold ETF ಚಿನ್ನವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹೊಂದುವ ಮಾರ್ಗ. Gold ETFನ ಪ್ರತಿಯೊಂದು ಯೂನಿಟ್ ಒಂದು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಬೆಲೆ ಚಿನ್ನದ ಮಾರುಕಟ್ಟೆ ಬೆಲೆಯನ್ನು ಅನುಸರಿಸುವ ಗುರಿ ಹೊಂದಿರುತ್ತದೆ.
ರೂ.5 ಲಕ್ಷವನ್ನು ಆಭರಣದಲ್ಲಿ ಹಾಕಿದರೆ ಏನಾಗುತ್ತದೆ?
ನೀವು ರೂ.5 ಲಕ್ಷವನ್ನು ಚಿನ್ನದ ಆಭರಣ ಖರೀದಿಸಲು ಬಳಸಿದ್ದೀರಿ ಎಂದುಕೊಳ್ಳಿ. ಇಲ್ಲಿ ಮೊದಲ ಹೊಡೆತ ಮೇಕಿಂಗ್ ಚಾರ್ಜ್. 5 ಲಕ್ಷದ ಬಜೆಟ್ನಲ್ಲೂ ನೀವು ಎಷ್ಟು ಗ್ರಾಂ ಚಿನ್ನವನ್ನು ಪಡೆಯುತ್ತೀರಿ ಎಂಬುದು ಆಭರಣದ ವಿನ್ಯಾಸ, ಮೇಕಿಂಗ್ ಚಾರ್ಜ್ ಮತ್ತು ಮಾರಾಟಗಾರರ ಬೆಲೆ ನಿಗದಿಯ ಮೇಲೆ ಅವಲಂಬಿತವಾಗಿರುತ್ತದೆ.
ಇದಲ್ಲದೆ ಆಭರಣವನ್ನು ಮಾರಾಟ ಮಾಡುವಾಗ ನೀವು ಖರೀದಿಸಿದ ಸಮಯದ ಮೇಕಿಂಗ್ ಚಾರ್ಜ್ ಅನ್ನು ಮರಳಿ ಪಡೆಯುವುದಿಲ್ಲ. ಹೀಗಾಗಿ ಚಿನ್ನದ ಮಾರುಕಟ್ಟೆ ಬೆಲೆ ಏರಿದರೂ, ನಿಮ್ಮ ಆಭರಣದ ಖರೀದಿ ಬೆಲೆಯ ಸಂಪೂರ್ಣ ಮೊತ್ತದ ಮೇಲೆ ಲಾಭ ಬಂದಿದೆ ಎಂದು ಸರಳವಾಗಿ ಹೇಳಲು ಸಾಧ್ಯವಿಲ್ಲ.
ಆದರೆ ಆಭರಣಕ್ಕೆ ಒಂದು ದೊಡ್ಡ ಪ್ರಯೋಜನವಿದೆ. ಅದನ್ನು ನೀವು ಧರಿಸಬಹುದು. ಹಬ್ಬ, ಮದುವೆ, ಕುಟುಂಬದ ಕಾರ್ಯಕ್ರಮಗಳಲ್ಲಿ ಬಳಸಬಹುದು. ಹೀಗಾಗಿ ಆಭರಣವನ್ನು ಕೇವಲ ಹೂಡಿಕೆ ಎಂದು ನೋಡುವುದು ಸರಿಯಲ್ಲ. ಅದು ಬಳಕೆಯ ವಸ್ತುವೂ ಹೌದು. ಪ್ರತಿಷ್ಠೆಯೂ ಹೌದು. ಆದರೆ ರಕ್ಷಣೆಯ ಸಮಸ್ಯೆಯೂ ಇದೆ!
Gold ETFನಲ್ಲಿ ರೂ. 5 ಲಕ್ಷ ಹಾಕಿದರೆ?
ಗೋಲ್ಡ್ ಇಟಿಎಫ್ನಲ್ಲಿ ನೀವು ಭೌತಿಕ ಆಭರಣವನ್ನು ಮನೆಗೆ ತರುವುದಿಲ್ಲ. ಡಿಮ್ಯಾಟ್ ಖಾತೆಯಲ್ಲಿ ಯೂನಿಟ್ಗಳ ರೂಪದಲ್ಲಿ ಚಿನ್ನದ ಹೂಡಿಕೆ ಇರುತ್ತದೆ. ಎಎಂಎಫ್ಐ ಪ್ರಕಾರ Gold ETFಗಳು ಚಿನ್ನವನ್ನು ಆಧಾರವಾಗಿಟ್ಟುಕೊಂಡ ಇಟಿಎಫ್ಗಳಾಗಿದ್ದು, ಅವುಗಳ ಬೆಲೆ ಚಿನ್ನದ ಬೆಲೆಯನ್ನು ಅನುಸರಿಸುತ್ತದೆ. ಇಟಿಎಫ್ ಯೂನಿಟ್ಗಳನ್ನು ಷೇರುಗಳಂತೆ ಎಕ್ಸ್ಚೇಂಜ್ನಲ್ಲಿ ಖರೀದಿಸಿ ಮಾರಾಟ ಮಾಡಬಹುದು. ಇದರಿಂದ ಚಿನ್ನವನ್ನು ಲಾಕರ್ನಲ್ಲಿ ಇಡುವ ಅಗತ್ಯವಿಲ್ಲ. ಕಳ್ಳತನದ ಭಯವೂ ಇಲ್ಲ.
ಆದರೆ Gold ETF ಕೂಡ ಸಂಪೂರ್ಣ ಉಚಿತವಲ್ಲ. ಫಂಡ್ನ ವೆಚ್ಚಗಳು ಇರುತ್ತವೆ. ಜೊತೆಗೆ ಚಿನ್ನದ ನೇರ ಬೆಲೆ ಮತ್ತು ETFನ ರಿಟರ್ನ್ ನಡುವೆ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು. ಇದನ್ನು ಟ್ರ್ಯಾಕಿಂಗ್ ಡಿಫರೆನ್ಸ್ ಅಥವಾ ಟ್ರ್ಯಾಕಿಂಗ್ ಎರರ್ಗೆ ಸಂಬಂಧಿಸಿದ ವ್ಯತ್ಯಾಸ ಎಂದು ಕರೆಯಲಾಗುತ್ತದೆ. ಫಂಡ್ನ ವೆಚ್ಚಗಳು ಮತ್ತು ಇತರ ಕಾರಣಗಳಿಂದ ಇಟಿಎಫ್ನ ರಿಟರ್ನ್ ನೇರ ಚಿನ್ನದ ಬೆಲೆಯಿಂದ ಸ್ವಲ್ಪ ದೂರ ಇರಬಹುದು.
ಎಎಂಎಫ್ಐಯ Gold ETF ಮಾಹಿತಿಯಲ್ಲೂ ಭೌತಿಕ ಚಿನ್ನಕ್ಕೆ ಹೋಲಿಸಿದರೆ ಇಟಿಎಫ್ನಲ್ಲಿ ಮೇಕಿಂಗ್ ಚಾರ್ಜ್ ಇಲ್ಲ, ಸಂಗ್ರಹಣೆಯ ಸಮಸ್ಯೆ ಇಲ್ಲ ಮತ್ತು ಖರೀದಿ-ಮಾರಾಟ ಸುಲಭ ಎಂಬ ಅಂಶಗಳನ್ನು ವಿವರಿಸಲಾಗಿದೆ.
ಒಂದು ಉದಾಹರಣೆ ನೋಡಿ. ಒಬ್ಬ ವ್ಯಕ್ತಿ 5 ಲಕ್ಷವನ್ನು ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಎಂದುಕೊಳ್ಳಿ. ಅವರು ಆಭರಣ ಖರೀದಿಸಿದರೆ 5 ಲಕ್ಷದ ಸಂಪೂರ್ಣ ಮೊತ್ತ ಚಿನ್ನದ ತೂಕಕ್ಕೆ ಹೋಗುವುದಿಲ್ಲ. ಮೇಕಿಂಗ್ ಚಾರ್ಜ್ ಮತ್ತು ಇತರ ಖರೀದಿ ವೆಚ್ಚಗಳಿಂದ ನಿಜವಾಗಿ ಚಿನ್ನದಲ್ಲಿ ಹೂಡಿಕೆಯಾದ ಮೊತ್ತ ಕಡಿಮೆಯಾಗಬಹುದು. ಅದೇ 5 ಲಕ್ಷವನ್ನು Gold ETFನಲ್ಲಿ ಹೂಡಿಕೆ ಮಾಡಿದರೆ ಆಭರಣದ ಮೇಕಿಂಗ್ ಚಾರ್ಜ್ ಇರುವುದಿಲ್ಲ. ಆದರೆ ETFನ ನಿರ್ವಹಣಾ ವೆಚ್ಚ ಮತ್ತು ಖರೀದಿ-ಮಾರಾಟಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಗಮನಿಸಬೇಕು.
ಚಿನ್ನದ ಬೆಲೆ ಎರಡೂ ಸಂದರ್ಭದಲ್ಲೂ ಏರಿದರೆ ಎರಡೂ ಹೂಡಿಕೆಗಳ ಮೌಲ್ಯವೂ ಏರಬಹುದು. ಆದರೆ ನಿಮ್ಮ ಆರಂಭಿಕ ವೆಚ್ಚ ಮತ್ತು ಮಾರಾಟದ ವಿಧಾನದಿಂದ ಅಂತಿಮ ಲಾಭದಲ್ಲಿ ವ್ಯತ್ಯಾಸ ಬರಬಹುದು.
ಮನೆಯಲ್ಲಿರುವ ಚಿನ್ನವನ್ನು ಏನು ಮಾಡಬೇಕು?
ನಿಮ್ಮ ಮನೆಯಲ್ಲಿ ಈಗಾಗಲೇ 5 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣವಿದ್ದರೆ, ಅದನ್ನು ಮಾರಾಟ ಮಾಡಿ Gold ETFಗೆ ಬದಲಾಯಿಸಬೇಕೇ? ಇದಕ್ಕೆ ಎಲ್ಲರಿಗೂ ಒಂದೇ ಉತ್ತರ ನೀಡಲು ಆಗದು. ಆಭರಣವನ್ನು ನೀವು ಬಳಸುತ್ತಿದ್ದರೆ ಅಥವಾ ಅದು ಕುಟುಂಬದ ಆಸ್ತಿಯಾಗಿದ್ದರೆ ಅದರ ಉಪಯೋಗವನ್ನು ಕೇವಲ ಹೂಡಿಕೆಯ ಲಾಭದೊಂದಿಗೆ ಹೋಲಿಸಲು ಸಾಧ್ಯವಿಲ್ಲ.
ಆದರೆ ಹೊಸದಾಗಿ 5 ಲಕ್ಷವನ್ನು ಕೇವಲ ಚಿನ್ನದ ಹೂಡಿಕೆಗಾಗಿ ಹಾಕಬೇಕು ಎನ್ನುವ ಉದ್ದೇಶವಿದ್ದರೆ, ಆಭರಣ ಮತ್ತು Gold ETF ಎರಡರ ವೆಚ್ಚ ಹಾಗೂ ಅನುಕೂಲಗಳನ್ನು ಹೋಲಿಸುವುದು ಮುಖ್ಯ.
ತೆರಿಗೆ ವಿಚಾರದಲ್ಲೂ ವ್ಯತ್ಯಾಸ ಗಮನಿಸಬೇಕು
ಗೋಲ್ಡ್ ಇಟಿಎಫ್ಗಳು ತೆರಿಗೆ ಉದ್ದೇಶಕ್ಕಾಗಿ ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್ಗಳಂತೆ ಪರಿಗಣಿಸಲ್ಪಡುವುದಿಲ್ಲ. ಎಎಂಎಫ್ಐ ಅವುಗಳನ್ನು ನಾನ್ ಈಕ್ವಿಟಿ ಮ್ಯೂಚುಯಲ್ ಫಂಡ್ ವರ್ಗಕ್ಕೆ ಸೇರಿಸುತತದೆ. ಚಿನ್ನದ ಹೂಡಿಕೆಯಿಂದ ಲಾಭ ಬಂದಾಗ ತೆರಿಗೆ ಅನ್ವಯಿಸುವ ನಿಯಮಗಳು ಹಿಡುವಳಿ ಅವಧಿ ಮತ್ತು ಆ ಹೂಡಿಕೆಯ ಸ್ವರೂಪವನ್ನು ಅವಲಂಬಿಸುತ್ತವೆ.
ಪ್ರಸ್ತುತ ತೆರಿಗೆ ನಿಯಮಗಳಲ್ಲಿ ನ್ಯಾನ್ ಈಕ್ವಿಟಿ ರೀತಿಯ ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ಗೆ 12.5% ದರ ಅನ್ವಯಿಸುವ ವರ್ಗಗಳಿವೆ. ನಿಮ್ಮ ನಿರ್ದಿಷ್ಟ ಹೂಡಿಕೆ ಮತ್ತು ಮಾರಾಟದ ದಿನಾಂಕದ ಆಧಾರದ ಮೇಲೆ ತೆರಿಗೆ ಲೆಕ್ಕ ಬದಲಾಗಬಹುದು. ಆದ್ದರಿಂದ Gold ETFಗೆ ತೆರಿಗೆ ಇಲ್ಲ ಎಂದು ಹೇಳಲಾಗಿದೆ ತಪ್ಪು ಕಲ್ಪನೆ.
ಒಟ್ಟಾರೆಯಾಗಿ, ನಿಮ್ಮ ಉದ್ದೇಶವನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಿ. ಚಿನ್ನ ಧರಿಸಲು ಬೇಕು ಎಂದರೆ, ಮನೆಯಲ್ಲೇ ಭೌತಿಕ ಆಸ್ತಿ ಇರಬೇಕು ಎಂಬ ಉದ್ದೇಶವಿದ್ದರೆ ಆಭರಣ. ಚಿನ್ನವನ್ನು ಹೂಡಿಕೆಯಾಗಿ ಮಾತ್ರ ಹೊಂದಿರಬೇಕು ಎಂದರೆ, ಸಂಗ್ರಹಣೆ, ಕಳ್ಳತನ ಮತ್ತು ಶುದ್ಧತೆಯ ಸಮಸ್ಯೆಯನ್ನು ತಪ್ಪಿಸಬೇಕು ಎಂದರೆ Gold ETF ಪರಿಗಣಿಸಬಹುದು. ಚಿನ್ನವನ್ನು ಹೂಡಿಕೆಯಾಗಿ ನೋಡುವವರು ಖರೀದಿ ವೆಚ್ಚ, ಮಾರಾಟದ ಬೆಲೆ, ತೆರಿಗೆ, ಫಂಡ್ ವೆಚ್ಚ ಮತ್ತು ತಮ್ಮ ಹೂಡಿಕೆಯ ಅವಧಿ ಎಲ್ಲವನ್ನೂ ಒಟ್ಟಿಗೆ ನೋಡಬೇಕು.


Click it and Unblock the Notifications
