ಜುಲೈ 10ರಂದು ಮೋದಿ ಸರ್ಕಾರದ ಪೂರ್ಣ ಬಜೆಟ್? ಈ ಬಾರಿಗೆ ಕೃಷಿಗೆ ಆದ್ಯತೆ
ನವದೆಹಲಿ, ಮೇ 29: ನೂತನವಾಗಿ ಮರು ಆಯ್ಕೆಯಾದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2019-20ನೇ ಸಾಲಿನ ಪರಿಪೂರ್ಣ ಬಜೆಟ್‌ಅನ್ನು ಜುಲೈ 10ರಂದು ಪ್ರಕಟಿಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಬಳಿಕ ಮತ್ತು ನೂತನ ಹಣಕಾಸು ಸಚಿವರು ಅಧಿಕಾರ ವಹಿಸಿಕೊಂಡ ನಂತರ ಬಜೆಟ್ ಪ್ರಕಟಣೆಯ ದಿನಾಂಕವನ್ನು ನಿರ್ಧರಿಸಲಾಗುವುದು.
'ಇನ್ನೂ ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಅದಕ್ಕೆ ಇನ್ನೂ ಸಮಯವಿದೆ. ಆದರೆ, ಅದು ಜುಲೈ 10ರ ಸುಮಾರಿಗೆ ನಡೆಯಬಹುದು' ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಪೂರ್ಣ ಬಜೆಟ್ ಪ್ರಸ್ತುತಪಡಿಸುವ ಕಾರ್ಯ ಜುಲೈ 15ರವೇಳೆಗೆ ಮುಗಿಯುತ್ತದೆ. ಈ ವರ್ಷವೂ ಅದೇ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಜೆಟ್ ಸಭೆಗಳು ಈಗಾಗಲೇ ಆರಂಭಗೊಂಡಿವೆ. ದಿನಾಂಕವು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರವು ಲೋಕಸಭೆ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿತ್ತು. ಆಗ ಮಧ್ಯಂತರ ಹಣಕಾಸು ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ನಷ್ಟಕ್ಕೊಳಗಾದ ರೈತರಿಗೆ 75 ಸಾವಿರ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು.
ಈ ಬಜೆಟ್ ಕೂಡ ಖಂಡಿತವಾಗಿಯೂ ಕೃಷಿ ಪ್ರಾಧಾನ್ಯವಾಗಿರುತ್ತದೆ. ಏಕೆಂದರೆ ಅದು ಚುನಾವಣೆಯ ವಿಷಯವಾಗಿತ್ತು. ಈಗ ಸರ್ಕಾರವು ಗ್ರಾಮೀಣ ಭಾಗದಲ್ಲಿನ ಕೃಷಿ ಹಿನ್ನಡೆಯನ್ನು ಸರಿಪಡಿಸಲು ಆದ್ಯತೆ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications