ಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆಗೆ ಲಾಭ
ಬೆಂಗಳೂರು, ಫೆಬ್ರವರಿ 4: ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆಗೆ ಲಾಭ ಬಂದಿದೆ. ಭಾರತದಲ್ಲಿ ತಯಾರಾದ ಮದ್ಯ(IML) ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದರೂ ಅಬಕಾರಿ ಇಲಾಖೆ ಆದಾಯ ಗಳಿಕೆ, ಲಾಭದಲ್ಲಿ ಹಿಂದೆ ಬಿದ್ದಿಲ್ಲ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 3.38ರಷ್ಟು ನಿವ್ವಳ ಲಾಭ ಬಂದಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಏಪ್ರಿಲ್ ಹಾಗೂ ಜನವರಿ 31 ರ ಅವಧಿಯಲ್ಲಿ 18,689 ಕೋಟಿ ರು ಆದಾಯ ದಾಖಲಾಗಿದೆ. ಈ ವರ್ಷ 18,078 ಕೋಟಿ ರು ಬಂದಿದ್ದು, 610 ಕೋಟಿ ರು ಮಾತ್ರ ತಗ್ಗಿದೆ.
2019ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಯು 14,390.39 ಕೋಟಿ ರೂ ಆದಾಯ ಪಡೆದಿದ್ದರೆ, ಈ ವರ್ಷ 13,778.30 ಕೋಟಿ ರೂ ಆದಾಯ ಗಳಿಸಿದೆ. ಅಂದರೆ ಎರಡು ತಿಂಗಳ ಲಾಕ್‌ಡೌನ್ ಮತ್ತು ಜನರ ಕೋವಿಡ್ ಭಯದ ನಡುವೆಯೂ ಅಬಕಾರಿ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 612.09 ಕೋಟಿ ರೂ ಕಡಿಮೆ ಆದಾಯ ಗಳಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಇಲ್ಲದ ಪರದಾಟ
ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದ ಮದ್ಯಪ್ರಿಯರು, ಸೀಮಿತ ಅವಧಿಯಲ್ಲಿ ಮದ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಮಾರ್ಚ್ 25ರಂದು ಸಂಪೂರ್ಣ ಲಾಕ್‌ಡೌನ್ ಆರಂಭವಾದ ಬಳಿಕ ಮೇ ತಿಂಗಳಲ್ಲಿ ಸೀಮಿತ ಅವಧಿಗೆ ಮದ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಇದಾಗಿ ಐದು ತಿಂಗಳ ನಂತರ ಸೆ. 1ರಂದು ಮಾತ್ರವೇ ಸಂಪೂರ್ಣ ಮದ್ಯ ಮಾರಾಟಕ್ಕೆ ಅವಕಾಶ ದೊರಕಿತ್ತು.

ಕಳೆದ ಆರ್ಥಿಕ ವರ್ಷದಲ್ಲಿ ನಿವ್ವಳ ಲಾಭ
ನಿವ್ವಳ ಲಾಭ: ಕಳೆದ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ ಶೇ 3.38ರಷ್ಟು ನಿವ್ವಳ ಲಾಭ ಬಂದಿದೆ. ಮುಂದಿನ ಆರ್ಥಿಕ ವರ್ಷಕ್ಕೆ 22,700 ಕೋಟಿ ರು ಆದಾಯ ಗಳಿಕೆ ಗುರಿ ನೀಡಲಾಗಿದೆ. ಕಳೆದ ವರ್ಷ 20,950 ಕೋಟಿ ರು ಗಳಿಕೆಯಾಗಿತ್ತು. 2019-20ರಲ್ಲಿ 509.19 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2020-21ರಲ್ಲಿ 472.69 ಲಕ್ಷ ಕೇಸ್ ಮಾತ್ರ ಮಾರಾಟವಾಗಿದೆ.

ಅಬಕಾರಿ ಸುಂಕ ಹೆಚ್ಚಳ
ಭಾರತದಲ್ಲಿ ತಯಾರದ ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಳವಾಗಿದ್ದರಿಂದ ಈ ಬಾರಿ ಆದಾಯ ಹೆಚ್ಚಳವಾಗ್ದೆ. ಮಾರ್ಚ್ 25 ರಿಂದ ಮೇ 7 ರ ಅವಧಿಯಲ್ಲಿ ಎಲ್ಲಾ ವೈನ್ ಮಳಿಗೆ ಬಂದ್ ಆಗಿದ್ದರಿಂದ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ವರ್ಷದ ಕೊನೆ ತ್ರೈಮಾಸಿಕದಲ್ಲಿ 16,405 ಕೋಟಿ ರು ಆದಾಯ ಗಳಿಸಿದ್ದರಿಂದ ಪರಿಸ್ಥಿತಿ ಸುಧಾರಿಸಿತು ಎಂದು ಇಲಾಖೆ ಹೇಳಿದೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಮದ್ಯ ಉತ್ಪನ್ನಗಳ ಮೇಲೆ ಶೇ.100 ಸೆಸ್ ವಿಧಿಸಲಾಗಿದೆ. ಕರ್ನಾಟಕದಲ್ಲಿ ಐಎಂಎಲ್ ಮೇಲಿನ ತೆರಿಗೆಯನ್ನು ಶೇ. 17ರಿಂದ ಶೇ 25ರವರೆಗೆ ಇದೆ.

ಆನ್ ಲೈನ್ ಮದ್ಯ ಪೂರೈಕೆ ಬೇಡ
ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ, ಕೊವಿಡ್ 19 ರ ಸಮಸ್ಯೆ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಈ ಪ್ರಸ್ತಾವದ ಅಗತ್ಯ ಖಂಡಿತವಾಗಿಯೂ ಇರುವುದಿಲ್ಲ ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಕ್ರಿಯಿಸಿದ್ದರು.












Click it and Unblock the Notifications