55 ಕುಶಲಕರ್ಮಿಗಳ ಕೈಚಳಕದಲ್ಲಿ ಅರಳಿದ 16.5 ಕೆಜಿ ಚಿನ್ನದ ಜುಮುಕಿಗೆ ಒಲಿಯಿತು 2 ಗಿನ್ನೆಸ್ ದಾಖಲೆಯ ಗರಿ

ಚಿನ್ನದ ನಾಡು ಎಂದೇ ಖ್ಯಾತಿ ಪಡೆದಿರುವ ದುಬೈನಲ್ಲಿ ಇದೀಗ ಮತ್ತೊಂದು ಅದ್ಭುತ ಸೃಷ್ಟಿಯಾಗಿದೆ ನೋಡಿ. ಮಹಿಳೆಯರ ಅಚ್ಚುಮೆಚ್ಚಿನ ಆಭರಣವಾದ ಕಿವಿಗೆ ಹಾಕುವ ಜುಮುಕಿ ಇದೀಗ ಬೃಹತ್ ಗಾತ್ರದಲ್ಲಿ ನಿರ್ಮಾಣಗೊಂಡು ವಿಶ್ವದ ಗಮನ ಸೆಳೆದಿದೆ.

ಹೌದು, ದುಬೈನ ಪ್ರಸಿದ್ಧ ಜಾಯ್‌ಆಲುಕ್ಕಾಸ್ ಜ್ಯುವೆಲ್ಲರಿ ಬರೋಬ್ಬರಿ 16.5 ಕೆಜಿ ತೂಕದ ಬೃಹತ್ ಚಿನ್ನದ ಜುಮುಕಿಯನ್ನ ತಯಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಕೇವಲ ಗಾತ್ರ ಮತ್ತು ತೂಕದಿಂದ ಮಾತ್ರವಲ್ಲ, ಈ ವಿಶಿಷ್ಟ ಕಲಾಕೃತಿಯು ಅತ್ಯಂತ ಭಾರವಾದ ಹಾಗೂ ವಿಶ್ವದ ಅತಿದೊಡ್ಡ ಚಿನ್ನದ ಕಿವಿಯೋಲೆ ಎಂಬ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿದೆ.

Dubai Jeweller Creates 16 5 Kg Gold Jhumkas named Mayura Sahasra Breaks Two Guinness World Records

ಅಕ್ಟೋಬರ್ 24ರಂದು ದುಬೈ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿರುವ ಜ್ಯುವೆಲ್ ಆಫ್ ಜಾಯ್ ಶೋರೂಮ್‌ನಲ್ಲಿ ಯುಎಇ ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಖ್ ಅಲ್ ಮರ್ರಿ ಅವರು ಈ ಬೃಹತ್ ಜುಮುಕಿಯನ್ನ ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ.

55 ಕುಶಲಕರ್ಮಿಗಳ ಕಠಿಣ ಶ್ರಮ ಮತ್ತು ಮಯೂರ ಸಹಸ್ರ ಜುಮುಕಿ

ಈ 16.5 ಕೆಜಿ ಚಿನ್ನದ ಜುಮುಕಿ ತಯಾರಿಕೆಯ ಹಿಂದೆ ನೂರಾರು ಕೈಗಳ ಕಠಿಣ ಶ್ರಮ ಅಡಗಿದೆ. ಈ ಕಲಾಕೃತಿಗೆ "ಮಯೂರ ಸಹಸ್ರ" ಎಂದು ಹೆಸರಿಡಲಾಗಿದ್ದು, ಇದರ ಅರ್ಥ 'ಸಾವಿರ ನವಿಲುಗಳು' ಎಂದಾಗಿದೆ. ಸಂಪೂರ್ಣವಾಗಿ 22 ಕ್ಯಾರೆಟ್ ಚಿನ್ನದಲ್ಲಿ ಮಾಡಲಾದ ಈ 'ಮಯೂರ ಸಹಸ್ರ ಜುಮುಕಿ'ಯ ಒಟ್ಟು ತೂಕ 16.514 ಕೆಜಿಯಷ್ಟಿದೆ.

ಇದರ ತಯಾರಿಕೆಗಾಗಿ 55 ನುರಿತ ಕುಶಲಕರ್ಮಿಗಳು ಹಗಲಿರುಳು ಶ್ರಮಿಸಿದ್ದು, ಬರೋಬ್ಬರಿ 5,840 ಗಂಟೆಗಳ ಕಾಲ ಸತತ ಕೆಲಸ ಮಾಡಿ ಈ ಕಲಾಕೃತಿಯನ್ನ ಸೃಷ್ಟಿಸಿದ್ದಾರೆ.

ಗಾತ್ರದಲ್ಲಿಯೂ ದೈತ್ಯವಾಗಿರುವ ಇದು 1.215 ಮೀಟರ್ ಉದ್ದ ಹಾಗೂ 0.682 ಮೀಟರ್ ಸುತ್ತಳತೆಯನ್ನ ಹೊಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ಸೌಂದರ್ಯದ ಸಂಕೇತವಾಗಿರುವ ನವಿಲು ಹಾಗೂ ದಕ್ಷಿಣ ಏಷ್ಯಾ ವಿವಾಹಗಳಲ್ಲಿ ಹೆಚ್ಚಾಗಿ ಬಳಸುವ ಸಾಂಪ್ರದಾಯಿಕ ಗಂಟೆ ಆಕಾರದ ವಿನ್ಯಾಸವನ್ನ ಈ ಜುಮುಕಿಗೆ ಅತ್ಯಂತ ನಾಜೂಕಾಗಿ ನೀಡಲಾಗಿದೆ.

ದುಬೈ ಜಾಯ್‌ಆಲುಕ್ಕಾಸ್ ಸಂಸ್ಥೆಯ ಸಾಧನೆ

ಈ ಸೃಷ್ಟಿಯ ಕುರಿತು ಜಾಯ್‌ಆಲುಕ್ಕಾಸ್ ಸಿಇಒ ಜಾನ್ ಪಾಲ್ ಆಲುಕ್ಕಾಸ್ ಸಂತಸ ಹಂಚಿಕೊಂಡಿದ್ದಾರೆ. "ದುಬೈ ನಗರವನ್ನ ಯಾವಾಗಲೂ 'ಸಿಟಿ ಆಫ್ ಗೋಲ್ಡ್' ಎಂದು ಕರೆಯಲಾಗುತ್ತದೆ. ನಮ್ಮ ಈ ಹೊಸ ಪ್ರಯತ್ನ ಆ ಹೆಸರಿಗೆ ಮತ್ತಷ್ಟು ಮೆರುಗು ನೀಡಲಿದೆ," ಎಂದಿದ್ದಾರೆ.

ದುಬೈ ಜಾಯ್‌ಆಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷರಾದ ಡಾ. ಜಾಯ್ ಆಲುಕ್ಕಾಸ್ ಪ್ರತಿಕ್ರಿಯಿಸಿ, "ಕಳೆದ ನಾಲ್ಕು ದಶಕಗಳಿಂದ ನಮ್ಮ ಸಂಸ್ಥೆ ದುಬೈ ನಗರದೊಂದಿಗೆ ಬೆಳೆದುಬಂದಿದೆ. ಅಸಾಧ್ಯವಾದ ಕಲ್ಪನೆಯನ್ನ ಚಿನ್ನದಲ್ಲಿ ಅರಳಿಸಿದ ನಮ್ಮ ಕುಶಲಕರ್ಮಿಗಳಿಗೆ ಹಾಗೂ ಈ ನಗರಕ್ಕೆ ನಾವು ನೀಡುತ್ತಿರುವ ಗೌರವವಿದು. ಒಂದೇ ಕಲಾಕೃತಿಗೆ ಎರಡು ಗಿನ್ನೆಸ್ ದಾಖಲೆಗಳು ಒಲಿದಿರುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ," ಎಂದು ತಿಳಿಸಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಅಕ್ಟೋಬರ್ 12ರಂದೇ ಜಾಯ್‌ಆಲುಕ್ಕಾಸ್ ಸಂಸ್ಥೆಯು ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನ ಮುಡಿಗೇರಿಸಿಕೊಂಡಿತ್ತು. ಆದರೆ ಅಕ್ಟೋಬರ್ 24ರಂದು ಇದನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಈ ಬೃಹತ್ ಚಿನ್ನದ ಜುಮುಕಿಯನ್ನು ಕಣ್ತುಂಬಿಕೊಳ್ಳಲು ಬಯಸುವವರು ದುಬೈ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿರುವ ಜಾಯ್‌ಆಲುಕ್ಕಾಸ್ ಸಂಸ್ಥೆಯ 'ಜ್ಯುವೆಲ್ ಆಫ್ ಜಾಯ್' ಶೋರೂಮ್‌ಗೆ ಭೇಟಿ ನೀಡಬಹುದು. ಸಾರ್ವಜನಿಕರ ವೀಕ್ಷಣೆಗಾಗಿ ಕಾಯಂ ಆಗಿ ಅಲ್ಲಿಯೇ ಪ್ರದರ್ಶನಕ್ಕೆ ಇಡಲಾಗಿದ್ದು, ಇದು ಮನುಷ್ಯನ ಕಲಾತ್ಮಕತೆ ಮತ್ತು ಕೌಶಲಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+