Creator inheritance: ಕಂಟೆಂಟ್ ಕ್ರಿಯೇಟರ್ ಮೃತಪಟ್ಟರೆ ಇನ್‌ಸ್ಟಾಗ್ರಾಂ, ಯುಟ್ಯೂಬ್ ಖಾತೆ ಕತೆ ಏನು? ಹಣ ಏನಾಗುತ್ತದೆ?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬನೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅಥವಾ ಇನ್‌ಫ್ಲುಯೆನ್ಸರ್ ಆಗುತ್ತಿದ್ದಾರೆ. ಎಲ್ಲರೂ ಕಂಟೆಂಟ್ ಮಾಡುತ್ತಿದ್ದಾರೆ. ಲಕ್ಷಾಂತರ ಕ್ರಿಯೇಟರ್‌ಗಳು Instagram, YouTube ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದಾರೆ. ಅನುಯಾಯಿಗಳ ಸಂಖ್ಯೆ ಮತ್ತು ವೀಕ್ಷಣೆ ಹೆಚ್ಚಿದಂತೆ ಜಾಹೀರಾತು, ಬ್ರ್ಯಾಂಡ್ ಒಪ್ಪಂದಗಳು, ಚಂದಾದಾರಿಕೆ ಮತ್ತು ಇತರ ಮಾರ್ಗಗಳ ಮೂಲಕ ನಿಯಮಿತ ಆದಾಯವನ್ನೂ ಗಳಿಸುತ್ತಿದ್ದಾರೆ.
ಆದರೆ ಒಬ್ಬ ಕಂಟೆಂಟ್ ಕ್ರಿಯೇಟರ್ ಅಕಾಲಿಕವಾಗಿ ಮೃತಪಟ್ಟರೆ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಏನಾಗುತ್ತದೆ? ಅವರ ವೀಡಿಯೊಗಳು, ಫೋಟೋಗಳು, ಖಾಸಗಿ ಸಂದೇಶಗಳು ಮತ್ತು ಮುಖ್ಯವಾಗಿ ಅವರು ಗಳಿಸುತ್ತಿದ್ದ ಹಣವನ್ನು ಕುಟುಂಬದವರು ಪಡೆಯಬಹುದೇ?

ನಿಮಗೆ ಗೊತ್ತಿರಲಿ. ಇದು ಅಷ್ಟು ಸರಳವಾದ ವಿಷಯವಲ್ಲ. Instagram ಮತ್ತು YouTube ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳು ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿವೆ. ಹೀಗಾಗಿ ಒಬ್ಬ ವ್ಯಕ್ತಿಯ ಮರಣದ ನಂತರ ಅವರ ಕುಟುಂಬದವರಿಗೆ ಸ್ವಯಂಚಾಲಿತವಾಗಿ ಖಾತೆಯ ಪ್ರವೇಶ ಸಿಗುವುದಿಲ್ಲ.
ಕೆಲವು ತಜ್ಞರು ಈ ಕುರಿತು ವಿವರಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್ ಮೃತಪಟ್ಟ ಬಳಿಕ ಅವರ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಆದಾಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳನ್ನು ವಿವರಿಸಿದ್ದಾರೆ.
ಕುಟುಂಬದವರು ಏನು ಮಾಡಬಹುದು?
ಕ್ರಿಯೇಟರ್ ಮೃತಪಟ್ಟ ಬಳಿಕ ಅವರ ಕುಟುಂಬದವರು ಅಥವಾ ಕಾನೂನುಬದ್ಧ ಪ್ರತಿನಿಧಿಗಳು, ಮೃತ ವ್ಯಕ್ತಿಯ ಗೂಗಲ್ (google) ಖಾತೆಗೆ ಸಂಬಂಧಿಸಿದಂತೆ ಗೂಗಲ್‌ಗೆ ಮನವಿ ಸಲ್ಲಿಸಬಹುದು. ಮನವಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅವುಗಳನ್ನು ಪರಿಶೀಲಿಸಿದ ಬಳಿಕ ಗೂಗಲ್ ತನ್ನ ನೀತಿಗಳ ಪ್ರಕಾರ ಖಾತೆಯಲ್ಲಿರುವ ಕೆಲವು ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.
ಕುಟುಂಬದವರು ಗೂಗಲ್ ಖಾತೆಯನ್ನು ಮುಚ್ಚುವಂತೆಯೂ ಮನವಿ ಮಾಡಬಹುದು. ಆದರೆ ಖಾತೆಯ ಪಾಸ್‌ವರ್ಡ್ ಅನ್ನು ಕುಟುಂಬದವರಿಗೆ ಹಸ್ತಾಂತರಿಸುವುದಿಲ್ಲ. ಅಲ್ಲದೆ ಖಾತೆಯಲ್ಲಿರುವ ಎಲ್ಲ ಮಾಹಿತಿಗೂ ಪ್ರವೇಶ ಸಿಗುತ್ತದೆ ಎಂಬ ಖಾತರಿಯೂ ಇರುವುದಿಲ್ಲ.
Instagram ಖಾತೆಗೆ ಏನಾಗುತ್ತದೆ?
Instagramನಲ್ಲಿ ಮೃತಪಟ್ಟ ಬಳಕೆದಾರರ ಖಾತೆಗೆ ಮುಖ್ಯವಾಗಿ ಎರಡು ಆಯ್ಕೆಗಳಿವೆ. ಒಂದು ಮೆಮೋರಿಯಲೈಸ್ ಮಾಡುವುದು, ಮತ್ತೊಂದು ಶಾಶ್ವತವಾಗಿ ಅಳಿಸುವುದು.
ಕುಟುಂಬದವರು ಅಥವಾ ಅರ್ಹ ವ್ಯಕ್ತಿಗಳು ಅಗತ್ಯ ಪ್ರಕ್ರಿಯೆಯ ಮೂಲಕ ಖಾತೆಯನ್ನು ಮೆಮೋರಿಯಲ್ ಖಾತೆಯಾಗಿ ಪರಿವರ್ತಿಸಲು ಮನವಿ ಮಾಡಬಹುದು. ಖಾತೆಯನ್ನು ಮೆಮೋರಿಯಲೈಸ್ ಮಾಡಿದರೆ ಈಗಾಗಲೇ ಪ್ರಕಟಿಸಿರುವ ಪೋಸ್ಟ್‌ಗಳು ಮುಂದುವರಿಯಬಹುದು. ಆದರೆ ಆ ಖಾತೆಯಿಂದ ಹೊಸ ಪೋಸ್ಟ್‌ಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.
ಅಂದರೆ, ಖಾತೆ ಒಂದು ರೀತಿಯಲ್ಲಿ ನೆನಪಿನ ಪುಟವಾಗಿ ಉಳಿಯುತ್ತದೆ. ಮೃತ ವ್ಯಕ್ತಿಯ ಹಳೆಯ ಫೋಟೋಗಳು ಮತ್ತು ಇತರ ಸಾರ್ವಜನಿಕ ವಿಷಯಗಳು ಮುಂದುವರಿಯಬಹುದು. ಆದರೆ ಕುಟುಂಬದವರಿಗೆ ಮೃತ ವ್ಯಕ್ತಿಯ ಖಾಸಗಿ ಮಾಹಿತಿಯ ಸಂಪೂರ್ಣ ಆರ್ಕೈವ್ ಸಿಗುವುದಿಲ್ಲ. ಉದಾಹರಣೆಗೆ ಖಾಸಗಿ ಸಂದೇಶಗಳು, ಡ್ರಾಫ್ಟ್‌ಗಳು ಸೇರಿದಂತೆ ಸೂಕ್ಷ್ಮ ಮಾಹಿತಿಗೆ ಪ್ರವೇಶ ನೀಡಲಾಗುವುದಿಲ್ಲ. ಕುಟುಂಬದವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಖಾತೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ಗೋಚರಿಸುತ್ತಲೇ ಇರಬಹುದು.
YouTube ಖಾತೆಯಲ್ಲಿರುವ ಆದಾಯಕ್ಕೆ ಏನಾಗುತ್ತದೆ?
YouTube ಮೂಲಕ ಆದಾಯ ಗಳಿಸುತ್ತಿದ್ದ ಕ್ರಿಯೇಟರ್ ಮೃತಪಟ್ಟರೆ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿರಬಹುದು. ಚಾನೆಲ್ ಸಕ್ರಿಯವಾಗಿದ್ದರೆ ಮತ್ತು ಅದರಿಂದ ಆದಾಯ ಬರುತ್ತಿದ್ದರೆ, ಆ ಆದಾಯ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ಜಮೆಯಾಗುವುದನ್ನು ಮುಂದುವರಿಸಬಹುದು. ಆದರೆ ಆ ಹಣವನ್ನು ಕಾನೂನುಬದ್ಧವಾಗಿ ಯಾರು ಪಡೆಯಬೇಕು ಎಂಬುದು ಪ್ರತ್ಯೇಕ ವಿಷಯ.
ಬ್ಯಾಂಕ್ ಖಾತೆ (bank account) ತೆರೆಯುವಾಗ ಸಾಮಾನ್ಯವಾಗಿ ನಾಮಿನಿಯನ್ನು ಸೂಚಿಸುವ ಅವಕಾಶ ಇರುತ್ತದೆ. ಖಾತೆದಾರ ಮೃತಪಟ್ಟ ಸಂದರ್ಭದಲ್ಲಿ ಹಣ ಅಥವಾ ಆಸ್ತಿಯನ್ನು ಸಂಬಂಧಪಟ್ಟ ವ್ಯಕ್ತಿಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ನಾಮಿನಿಯ ಪಾತ್ರ ಇರುತ್ತದೆ.
ಆದರೆ ನಾಮಿನಿ ಎಂದರೆ ಯಾವಾಗಲೂ ಅಂತಿಮ ಆಸ್ತಿಯ ಮಾಲೀಕ ಎಂದರ್ಥವಲ್ಲ. ಕಾನೂನುಬದ್ಧ ವಾರಸುದಾರರ ಹಕ್ಕುಗಳು ಪ್ರತ್ಯೇಕವಾಗಿ ಅನ್ವಯಿಸಬಹುದು.
ಹೀಗಾಗಿ ಮೃತ ಕ್ರಿಯೇಟರ್‌ಗೆ ಬರಬೇಕಿರುವ ಬಾಕಿ ಆದಾಯವನ್ನು ಪಡೆಯಲು ಕಾನೂನುಬದ್ಧ ವಾರಸುದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಪಡೆಯಲು ಅಥವಾ ಸೂಕ್ತ ಖಾತೆಗೆ ವರ್ಗಾಯಿಸಲು ಮನವಿ ಮಾಡಬಹುದು.
ವಿಲ್‌ನಲ್ಲಿ ಡಿಜಿಟಲ್ ಆಸ್ತಿಯನ್ನೂ ನಮೂದಿಸಬಹುದೇ?
ಹೌದು. ಕ್ರಿಯೇಟರ್‌ಗಳು ತಮ್ಮ ಡಿಜಿಟಲ್ ಆಸ್ತಿಗಳ ಬಗ್ಗೆ ಮುಂಚಿತವಾಗಿಯೇ ಯೋಜನೆ ಮಾಡಿಕೊಳ್ಳಬಹುದು. ವಿಲ್‌ನಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳು, ಡಿಜಿಟಲ್ ಆಸ್ತಿಗಳು, ಆನ್‌ಲೈನ್ ಆದಾಯ ಮತ್ತು ಇತರ ಬೌದ್ಧಿಕ ಆಸ್ತಿಗಳ ಬಗ್ಗೆ ಸೂಚನೆಗಳನ್ನು ನೀಡಬಹುದು.
ಇದರಿಂದ ತಮ್ಮ ಮರಣದ ನಂತರ ಡಿಜಿಟಲ್ ಆಸ್ತಿಗಳು ಮತ್ತು ಅದರಿಂದ ಬರುವ ಆದಾಯ ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಸಿಗಬಹುದು. ವಿಶೇಷವಾಗಿ YouTube ಮೂಲಕ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸುವ ಕ್ರಿಯೇಟರ್‌ಗಳಿಗೆ ಇಂತಹ ಡಿಜಿಟಲ್ ಆಸ್ತಿ ಯೋಜನೆ ಹೆಚ್ಚು ಮಹತ್ವ ಪಡೆಯುತ್ತದೆ.
Creator inheritance: ಆರು ತಿಂಗಳು ವಿಡಿಯೋ ಹಾಕದಿದ್ದರೆ....
YouTube ತನ್ನ ನೀತಿಗಳ ಪ್ರಕಾರ ದೀರ್ಘಕಾಲ ಯಾವುದೇ ಚಟುವಟಿಕೆ ಇಲ್ಲದ ಚಾನೆಲ್‌ಗಳ ಹಣಗಳಿಕೆ ವ್ಯವಸ್ಥೆಯನ್ನು ನಿಲ್ಲಿಸುವ ಹಕ್ಕನ್ನು ಹೊಂದಿದೆ. ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವೀಡಿಯೊ ಅಪ್‌ಲೋಡ್ ಮಾಡದ ಅಥವಾ ಪೋಸ್ಟ್ ಮಾಡದ ಚಾನೆಲ್‌ಗಳ ಹಣಗಳಿಕೆಯನ್ನು YouTube ನಿಲ್ಲಿಸಬಹುದು.
ಹೀಗಾಗಿ ಕ್ರಿಯೇಟರ್ ಮೃತಪಟ್ಟ ನಂತರವೂ ಚಾನೆಲ್‌ನಿಂದ ಹಣ ಬರುತ್ತದೆ ಎಂಬುದು ಶಾಶ್ವತ ಖಾತರಿ ಅಲ್ಲ. ವೇದಿಕೆಯ ನಿಯಮಗಳು ಮತ್ತು ಖಾತೆಯ ಸ್ಥಿತಿ ಅದರ ಮೇಲೆ ಪರಿಣಾಮ ಬೀರುತ್ತವೆ.
Instagramನಲ್ಲಿ ಹಣಗಳಿಕೆ
Instagram ಖಾತೆಯನ್ನು ಮೆಮೋರಿಯಲ್ ಮಾಡಿದ ಬಳಿಕ ಅದರ ಬಳಕೆಗೆ ಹಲವು ಮಿತಿಗಳು ಬರುತ್ತವೆ. ಹೀಗಾಗಿ ಕ್ರಿಯೇಟರ್‌ನ ಸಾಮಾನ್ಯ ಚಟುವಟಿಕೆ ಮತ್ತು ಹಣಗಳಿಕೆಯ ಮೇಲೂ ಪರಿಣಾಮ ಬೀರಬಹುದು.
ಇನ್ನು Instagram ಹೊರತಾಗಿ ಕ್ರಿಯೇಟರ್‌ಗಳು ಬ್ರ್ಯಾಂಡ್‌ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಪ್ರತ್ಯೇಕ ವಿಷಯ. ಕ್ರಿಯೇಟರ್ ಮೃತಪಟ್ಟರೆ ಬ್ರ್ಯಾಂಡ್ ಒಪ್ಪಂದವನ್ನು ಮುಂದುವರಿಸಬೇಕೇ ಅಥವಾ ಅಂತ್ಯಗೊಳಿಸಬೇಕೇ ಎಂಬುದು ಆ ಒಪ್ಪಂದದಲ್ಲಿರುವ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತದೆ.
ಯಾವುದಾದರೂ ವೀಡಿಯೊ, ಜಾಹೀರಾತು ಅಥವಾ ಬ್ರ್ಯಾಂಡ್ ಒಪ್ಪಂದಕ್ಕೆ ಸಂಬಂಧಿಸಿದ ಹಣ ಪಾವತಿ ಬಾಕಿ ಇದ್ದರೆ, ಆ ಹಣವನ್ನು ಯಾರು ಪಡೆಯಬೇಕು ಎಂಬುದೂ ಒಪ್ಪಂದ ಮತ್ತು ಅನ್ವಯವಾಗುವ ಕಾನೂನಿನ ಮೇಲೆ ಅವಲಂಬಿತವಾಗಿರುತ್ತದೆ.
ವಿಡಿಯೋ, ಫೋಟೋಗಳ ಮಾಲೀಕತ್ವ
ಸಾಮಾನ್ಯವಾಗಿ ಕ್ರಿಯೇಟರ್ ಸ್ವತಃ ಸೃಷ್ಟಿಸಿದ ಮೂಲ ವಿಷಯಗಳಾದ ವೀಡಿಯೊ, ಫೋಟೋ, ಲೇಖನ, ಸಾಫ್ಟ್‌ವೇರ್ ಮುಂತಾದ ಬೌದ್ಧಿಕ ಆಸ್ತಿಗಳ ಮೇಲಿನ ಹಕ್ಕುಗಳನ್ನು ಹೊಂದಿರುತ್ತಾರೆ. ಆದರೆ Instagram ಅಥವಾ YouTube ಬಳಸುತ್ತಿರುವ ವೇದಿಕೆಯ ತಂತ್ರಜ್ಞಾನ, ಸಾಫ್ಟ್‌ವೇರ್, ಟ್ರೇಡ್‌ಮಾರ್ಕ್ ಮತ್ತು ಮೂಲಸೌಕರ್ಯದ ಮಾಲೀಕತ್ವ ವೇದಿಕೆಯದ್ದೇ ಆಗಿರುತ್ತದೆ.
ಕ್ರಿಯೇಟರ್ ಸೃಷ್ಟಿಸಿದ ವಿಷಯವನ್ನು ಮರಣದ ನಂತರ ಯಾರು ಬಳಸಬಹುದು, ನಿರ್ವಹಿಸಬಹುದು ಅಥವಾ ಅದರಿಂದ ಆದಾಯ ಪಡೆಯಬಹುದು ಎಂಬುದನ್ನು ಆಯಾ ವೇದಿಕೆಯ ನಿಯಮಗಳು, ಒಪ್ಪಂದಗಳು ಮತ್ತು ಅನ್ವಯವಾಗುವ ಕಾನೂನು ನಿರ್ಧರಿಸುತ್ತವೆ.
ಹಾಗಾದರೆ ಕ್ರಿಯೇಟರ್‌ಗಳು ಮುಂಚಿತವಾಗಿ ಏನು ಮಾಡಬೇಕು?
ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸುವವರು ತಮ್ಮ ಡಿಜಿಟಲ್ ಆಸ್ತಿಗಳ ಬಗ್ಗೆ ಮುಂಚಿತವಾಗಿ ಯೋಜನೆ ಮಾಡಿಕೊಳ್ಳುವುದು ಉಪಯುಕ್ತ. ವಿಲ್ ಬರೆಯುವುದು, ವಿಲ್‌ನಲ್ಲಿ ಡಿಜಿಟಲ್ ಆಸ್ತಿಗಳು ಮತ್ತು ಆನ್‌ಲೈನ್ ಆದಾಯದ ಬಗ್ಗೆ ಸ್ಪಷ್ಟ ಸೂಚನೆ ನೀಡುವುದು, ಅಗತ್ಯವಿರುವ ಕಾನೂನು ದಾಖಲೆಗಳನ್ನು ಸಿದ್ಧಪಡಿಸುವುದು ಮತ್ತು ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸರಿಯಾಗಿ ತಿಳಿಸುವುದು ಮುಂದಿನ ಗೊಂದಲವನ್ನು ಕಡಿಮೆ ಮಾಡಬಹುದು.


Click it and Unblock the Notifications
