ಅಜಿತ್ ಡೋವಲ್ ಪುತ್ರನಿಂದ ವಿದೇಶದಲ್ಲಿ ಹೂಡಿಕೆ, ತನಿಖೆಗೆ ಆಗ್ರಹ
ನವದೆಹಲಿ, ಜನವರಿ 18: ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ಡೋವಲ್ ಅವರ ಪುತ್ರ ವಿವೇಕ್ ಡೋವಲ್ ಅವರು ಕೇಮನ್ ದ್ವೀಪದಲ್ಲಿ ಹೂಡಿಕೆ ಮಾಡಿರುವುದರ ಬಗ್ಗೆ ಆರ್ ಬಿಐನಿಂದ ತನಿಖೆಯಾಗಬೇಕು ಎಂದು ಹಿರಿಯ ಕಾಂಗ್ರೆಸ್ಸಿನ ಜೈರಾಮ್ ರಮೇಶ್ ಅವರು ಆಗ್ರಹಿಸಿದ್ದಾರೆ.
'ಪ್ರಧಾನಿ ಮೋದಿ ಅವರು ಅಪನಗದೀಕರಣ ಘೋಷಿಸಿದ 13 ದಿನದೊಳಗೆ ವಿವೇಕ್ ಅವರು ಕೇಮನ್ ದ್ವೀಪದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ವಿದೇಶದಲ್ಲಿ ಭಾರಿ ಮೊತ್ತ ಹೂಡಿಕೆ ಮಾಡಿ, ತೆರಿಗೆ ವಂಚಿಸುವವರಿಗೆ ಕೇಮನ್ ದ್ವೀಪ ಸ್ವರ್ಗ ಎನಿಸಿಕೊಂಡಿದೆ. ಕೇಮನ್ ದ್ವೀಪದಲ್ಲಿ ಖಾತೆ ಆರಂಭಿಸುವುದು ಅಕ್ರಮವಲ್ಲ.
ಆದರೆ, ಆರ್ ಬಿಐ ನೀಡಿರುವ 2000 ರಿಂದ 2017ರ ಅಂಕಿ ಅಂಶದ ಪ್ರಕಾರ, ಭಾರತಕ್ಕೆ 8,300 ಕೋಟಿ ರು ವಿದೇಶಿ ಬಂಡವಾಳ ಹೂಡಿಕೆ(ಎಫ್ ಡಿಐ) ಕೇಮನ್ ನಿಂದ ಬಂದಿದೆ. ಆದರೆ, ಭಾರತದಲ್ಲಿ ನೋಟ್ ಬ್ಯಾನ್ ಅದಮೇಲೆ ಕೂಡಾ ಇಷ್ಟೇ ಮೊತ್ತ ಒಂದು ವರ್ಷದಲ್ಲೇ ಬಂದಿದೆ' ಎಂದು ರಮೇಶ್ ಹೇಳಿದರು.

ಭಾರತದ ಕಪ್ಪುಹಣ ವಿದೇಶದಲ್ಲಿ ಠೇವಣಿ ಎಂಬ ವಿಷಯವಾಗಿ ಬಿಜೆಪಿ ರಚಿಸಿದ್ದ ಸಮಿತಿಯಲ್ಲಿ ಆರ್ ಬಿಐ ನಿರ್ದೇಶಕ ಎಸ್ ಗುರುಮೂರ್ತಿ, ಡೋವಲ್, ಐಐಎಂ ಬೆಂಗಳೂರು ಪ್ರೊಫೆಸರ್ ಆರ್ ವೈದ್ಯನಾಥನ್ ಹಾಗೂ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಇದ್ದರು. ಈ ಸಮಿತಿಯ ವರದಿಯಂತೆ, ಎಫ್ ಡಿಐ ಮೂಲಗಳನ್ನು ಕೂಡಾ ಬಹಿರಂಗಗೊಳಿಸಬೇಕಾಗುತ್ತದೆ.
ಪನಾಮಾ ಹಾಗೂ ಪ್ಯಾರಡೈಸ್ ಪೇಪರ್ಸ್ ನಲ್ಲಿ ಹೆಸರುಳ್ಳ ಡಾನ್ ಡಬ್ಲ್ಯೂ ಇಬ್ಯಾಂಕ್ ಎಂಬಾತ ಡೋವಲ್ ಕಂಪನಿಯ ನಿರ್ದೇಶಕನಾಗಿದ್ದಾನೆ. ಡೋವಲ್ ಅವರ ಮತ್ತೊಬ್ಬ ಪುತ್ರ ಶೌರ್ಯ ಅವರ ಕಂಪನಿ ಜ್ಯೂಸ್ ಸ್ಟ್ರಾಟಜಿಕ್ ಮ್ಯಾನೇಜ್ಮೆಂಟ್ ಅಡ್ವೈಸರ್ ಪ್ರೈ ಲಿಮಿಟೆಡ್ ಹಾಗೂ ಜಿಎನ್ ವೈ ಏಷ್ಯಾ ಕೂಡಾ ಪ್ರಶ್ನಾರ್ಹ ಎಂದಿದ್ದಾರೆ.












Click it and Unblock the Notifications