ಇದು ಸಿಹಿ ಸುದ್ದಿಯಲ್ಲ! ಶೀಘ್ರವೇ ಸಕ್ಕರೆಯಾಗಲಿದೆ ದುಬಾರಿ!!
ಸಬ್ಸಿಡಿ ನಿಲುಗಡೆಯಿಂದ ಅಂಗಡಿಗಳಲ್ಲಿ ಲಭ್ಯವಾಗುವ ಸಕ್ಕರೆ ಬೆಲೆ ಏರಲಿದೆ. ಆದರೆ, ಬಿಪಿಎಲ್ ಕಾರ್ಡುಗಳಿಗೆ ಈ ಸಬ್ಸಿಡಿ ಹಿಂಪಡೆತದ ಬಿಸಿ ತಟ್ಟದು ಎನ್ನಲಾಗಿದೆ.
ನವದೆಹಲಿ, ಜನವರಿ 26: ಈ ಬಾರಿಯ ಬಜೆಟ್ ನಲ್ಲಿ ಸಕ್ಕರೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ, ಸಕ್ಕರೆ ದುಬಾರಿಯಾಗಲಿದೆ.
ಸದ್ಯಕ್ಕೆ ಪ್ರತಿ ಕೆಜಿ ಸಕ್ಕರೆಗೆ 18.50 ರು. ನಷ್ಟು ಸಬ್ಸಿಡಿಯನ್ನು ವಿವಿಧ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುತ್ತಿತ್ತು. ಈ ವರ್ಷದ ಬಜೆಟ್ ನಲ್ಲಿ ಈ ಸಬ್ಸಿಡಿ ನಿಲ್ಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ಆ ಮೂಲಕ, ವಾರ್ಷಿಕವಾಗಿ 4,500 ಕೋಟಿ ರು. ಹಣವನ್ನು ಉಳಿತಾಯ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಅಂದಹಾಗೆ, ಈ ಸಬ್ಸಿಡಿ ನಿಲುಗಡೆ ಬಿಪಿಎಲ್ ಕಾರ್ಡುದಾರರಿಕೆ ಅನ್ವಯವಾಗುವುದಿಲ್ಲ. ಬಿಪಿಎಲ್ ನಡಿ ದೇಶಾದ್ಯಂತ ಸುಮಾರು 40 ಕೋಟಿ ಜನ ಫಲಾನುಭವಿಗಳಿದ್ದು, ಅವರಿಗೆ ಸಕ್ಕರೆ ಬೆಲೆ ಏರಿಕೆ ಬಿಸಿ ತಟ್ಟಿಸದಂತೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸಬ್ಸಿಡಿ ನಿಲುಗಡೆ ಅಂಗಡಿಗಳಲ್ಲಿ ಸಿಗುವ ಸಕ್ಕರೆ ಮೇಲೆ ಮಾತ್ರ ವಿಧಿಸಲಾಗುವುದರಿಂದ ರಿಟೇಲ್ ಅಂಗಡಿಗಳಲ್ಲಿ ಸಾರ್ವಜನಿಕರು ಕೊಳ್ಳುವ ಸಕ್ಕರೆ ಬೆಲೆ ಗಣನೀಯವಾಗಿ ಏರಲಿದೆ ಎನ್ನಲಾಗಿದೆ.












Click it and Unblock the Notifications