ಅಡುಗೆ ಎಣ್ಣೆ ದರ ಲೀಟರ್‌ಗೆ 30 ರುಪಾಯಿವರೆಗೆ ಕಡಿಮೆ ಮಾಡಿದ ಅದಾನಿ ವಿಲ್ಮಾರ್
ಖಾದ್ಯ ತೈಲ ಸಂಸ್ಥೆ ಅದಾನಿ ವಿಲ್ಮಾರ್ ತಾನು ಉತ್ಪಾದಿಸುವ ತೈಲ ಬೆಲೆಯನ್ನು ಪ್ರತಿ ಲೀಟರ್ ಗೆ 30 ರುಪಾಯಿ ವರೆಗೆ ಕಡಿಮೆ ಮಾಡುವುದಾಗಿ ಸೋಮವಾರ ಘೋಷಣೆ ಮಾಡಿದೆ. ಅದಾನಿ ವಿಲ್ಮಾರ್ ತನ್ನ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಭಾರತದಲ್ಲಿ ಪ್ರಮುಖವಾಗಿ ಬಳಸುವ ಖಾದ್ಯ ತೈಲದ ಬ್ರಾಂಡ್‌ಗಳಲ್ಲಿ ಫಾರ್ಚೂನ್ ಕೂಡ ಒಂದು.
ಸೋಯಾಬೀನ್ ಎಣ್ಣೆಯ ದರದಲ್ಲಿ ಗರಿಷ್ಠ ಕಡಿತ ಮಾಡಲಾಗಿದೆ. ಅತಿ ಶೀಘ್ರದಲ್ಲೇ ಹೊಸ ಬೆಲೆಯೊಂದಿಗೆ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ ಎಂದು ಅದಾನಿ ವಿಲ್ಮಾರ್ ಹೇಳಿದೆ.
ಧಾರಾ ಬ್ರ್ಯಾಂಡ್ ಅಡಿಯಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುವ ಮದರ್ ಡೈರಿ, ಸೋಯಾಬೀನ್ ಮತ್ತು ಅಕ್ಕಿ ಹೊಟ್ಟು ತೈಲಗಳ ಬೆಲೆಯನ್ನು ಲೀಟರ್‌ಗೆ 14 ರುಪಾಯಿ ಕಡಿಮೆ ಮಾಡಿತ್ತು.
"ಜಾಗತಿಕ ಬೆಲೆ ಕಡಿತ ಮತ್ತು ಕಡಿಮೆಯಾದ ಖಾದ್ಯ ತೈಲ ಬೆಲೆಗಳ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಸರ್ಕಾರದ ಪ್ರಯತ್ನದ ಮುಂದುವರಿಕೆಯಾಗಿ, ಅದಾನಿ ವಿಲ್ಮಾರ್ ಕಂಪನಿಯು ಕಳೆದ ತಿಂಗಳಿಂದ ದರ ಕಡಿಮೆ ಮಾಡಿತ್ತು, ಈಗ ಖಾದ್ಯ ತೈಲ ಬೆಲೆಗಳನ್ನು ಮತ್ತಷ್ಟು ಕಡಿತಗೊಳಿಸಿದೆ" ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಸರ್ಕಾರದ ಸೂಚನೆಯಂತೆ 15 ರು. ಕಡಿಮೆಯಾಗಿತ್ತು
ಕೇಂದ್ರ ಆಹಾರ ಸಚಿವಾಲಯವು ಜುಲೈ 6 ರಂದು ಖಾದ್ಯ ತೈಲ ಬೆಲೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿತ್ತು ಮತ್ತು ಜಾಗತಿಕ ಮಟ್ಟದಲ್ಲಿ ಅಡುಗೆ ತೈಲಗಳ ಬೆಲೆ ಕುಸಿತವಾಗಿದ್ದು, ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಖಾದ್ಯ ತೈಲ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ನಂತರ ಖಾದ್ಯ ತೈಲ ಕಂಪನಿಗಳು ಪ್ರತಿ ಲೀಟರ್ ಎಣ್ಣೆ ಬೆಲೆಯನ್ನು 15 ರುಪಾಯಿ ಇಳಿಕೆ ಮಾಡಿದ್ದವು.
ರಷ್ಯಾ ಉಕ್ರೇನ್ ಯುದ್ಧದ ನಂತರ ಜಾಗತಿಕವಾಗಿ ಎಣ್ಣೆ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿತ್ತು. ಹಾಗೆಯೇ ಯುದ್ಧದ ಆರಂಭದಲ್ಲಿ ಖಾದ್ಯ ತೈಲದ ಬೆಲೆ ಹೆಚ್ಚಾಗಿತ್ತು. ನಂತರ ತೈಲದ ಬೆಲೆಯಲ್ಲಿ ಕುಸಿತ ಕಂಡ ನಂತರ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರ ಸೂಚನೆ ನೀಡಿತ್ತು.

ದರ ಪರಿಷ್ಕರಣೆ ಮಾಡಿದ ಅದಾನಿ ವಿಲ್ಮಾರ್
ಫಾರ್ಚೂನ್ ಸೋಯಾಬೀನ್ ತೈಲ ಬೆಲೆಯನ್ನು ಲೀಟರ್‌ಗೆ 195 ರುಪಾಯಿಗಳಿಂದ 165 ರುಪಾಯಿಗೆ ಪರಿಷ್ಕರಿಸಲಾಗಿದೆ. ಸೂರ್ಯಕಾಂತಿ ಎಣ್ಣೆ ದರವನ್ನು ಪ್ರತಿ ಲೀಟರ್‌ಗೆ 210 ರುಪಾಯಿಗಳಿಂದ 199 ರುಪಾಯಿಗಳಿಗೆ ಪರಿಷ್ಕರಿಸಲಾಗಿದೆ. ಸಾಸಿವೆ ಎಣ್ಣೆ ದರ ಗರಿಷ್ಠ ಚಿಲ್ಲರೆ ಬೆಲೆ ಲೀಟರ್‌ಗೆ 195 ರುಪಾಯಿಗಳಿಂದ 190 ರುಪಾಯಿಗೆ, ಫಾರ್ಚೂನ್ ರೈಸ್ ಬ್ರಾನ್ ಆಯಿಲ್ ಬೆಲೆಯನ್ನು ಲೀಟರ್‌ಗೆ 225 ರುಪಾಯಿಗಳಿಂದ 210 ರುಪಾಯಿಗೆ ಪರಿಷ್ಕರಿಸಲಾಗಿದ್ದು, ಶೇಂಗಾ ಎಣ್ಣೆಯ ಗರಿಷ್ಠ ಮಾರಾಟ ದರವನ್ನು ಲೀಟರ್‌ಗೆ 220 ರುಪಾಯಿಗಳಿಂದ 210 ರುಪಾಯಿಗೆ ಇಳಿಕೆಯಾಗಿದೆ.
ರಾಗ್ ವನಸ್ಪತಿಯ ಬೆಲೆ ಲೀಟರ್‌ಗೆ 200 ರುಪಾಯಿಯಿಂದ 185 ರುಪಾಯಿಗೆ ಮತ್ತು ರಾಗ್ ಪಾಮೋಲಿನ್ ತೈಲದ ಬೆಲೆ ಲೀಟರ್‌ಗೆ 170 ರುಪಾಯಿಗಳಿಂದ 144 ರುಪಾಯಿಗೆ ಇಳಿಕೆಯಾಗಿದೆ.
ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭ ವರ್ಗಾವಣೆ
"ನಾವು ಜಾಗತಿಕ ಬೆಲೆ ಇಳಿಕೆಯ ಪ್ರಯೋಜನಗಳನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸಿದ್ದೇವೆ ಮತ್ತು ಹೊಸ ಬೆಲೆಗಳೊಂದಿಗೆ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿವೆ" ಎಂದು ಅದಾನಿ ವಿಲ್ಮಾರ್‌ನ ಎಂಡಿ ಮತ್ತು ಸಿಇಒ ಆಂಗ್ಶು ಮಲ್ಲಿಕ್ ಹೇಳಿದರು.
"ನಮ್ಮ ಉತ್ಪನ್ನಗಳು ನಮ್ಮ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಿರುತ್ತವೆ. ಬೆಲೆ ಕಡಿತದಿಂದ ಮುಂಬರುವ ಹಬ್ಬದ ಋತುವಿನಲ್ಲಿ ಖಂಡಿತವಾಗಿಯೂ ಬೇಡಿಕೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.

ವೇಗದ ಬೆಳವಣಿಗೆ ಕಾಣುತ್ತಿರುವ ಅದಾನಿ ವಿಲ್ಮಾರ್
ಜಾಗತಿಕ ಬೆಲೆಗಳು ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಅದಾನಿ ವಿಲ್ಮಾರ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಫ್‌ಎಂಸಿಜಿ (FMCG) ಕಂಪನಿಗಳಲ್ಲಿ ಒಂದಾಗಿದೆ. ಖಾದ್ಯ ತೈಲಗಳ ಶ್ರೇಣಿಯ ಜೊತೆಗೆ, ಅದರ ಕೊಡುಗೆಗಳಲ್ಲಿ ಅಕ್ಕಿ, ಅಟ್ಟಾ, ಸಕ್ಕರೆ, ಕಡ್ಲೆಹಿಟ್ಟು, ರೆಡಿ-ಟು-ಕುಕ್ ಖಿಚಡಿ, ಸೋಯಾ ಪೀಸ್ ಮತ್ತು ಇತರವು ಸೇರಿವೆ.












Click it and Unblock the Notifications