ಮನೆಯಲ್ಲಿ ಇದೇ ರೀತಿಯ ಉಯ್ಯಾಲೆಯಿದ್ದರೆ ಮಾತ್ರ ಶುಭ: ಸರಿಯಾದ ದಿಕ್ಕಿನಲ್ಲಿ ಹಾಕಿದರೆ ಹಣಕಾಸಿನ ಸಮಸ್ಯೆಯೂ ನೀಗುವುದು
ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಶಕ್ತಿ ಇರುತ್ತದೆ. ಆದ್ದರಿಂದ, ಮನೆಯ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಇದು ಮನೆಯಲ್ಲಿ ನಿರಂತರವಾಗಿ ಸಕಾರಾತ್ಮಕತೆ ಇರುವಂತೆ ನೋಡಿಕೊಳ್ಳುವುದು.ಆದ ಕಾರಣ ಜೀವನದಲ್ಲಿ ನೆಮ್ಮದಿ ಮನೆ ಮಾಡಬೇಕಾದರೆ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಮನೆಯೊಳಗೆ ಹಾಕುವ ಉಯ್ಯಾಲೆ:
ಜನರು ಸಾಮಾನ್ಯವಾಗಿ ಮನೆಯ ಒಳಗೆ ಉಯ್ಯಾಲೆ ಹಾಕುತ್ತಾರೆ. ಫ್ಯಾಷನ್‌ಗಾಗಿಯೋ ಅಥವಾ ಮನೆಯ ಅಂದ ಹೆಚ್ಚಿಸುವ ಉದ್ದೇಶದಿಂದಲೋ ಮನೆಯೊಳಗೆ ಉಯ್ಯಾಲೆ ಹಾಕುವುದು ಇತ್ತೀಚಿನ ದಿನಗಳಲ್ಲಿ ರೂಢಿಯಾಗಿ ಬಿಟ್ಟಿದೆ. ಆದರೆ ಅದಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಅನೇಕ ಜನರು ಪಾಲಿಸುವುದಿಲ್ಲ. ಅನೇಕರಿಗೆ ಉಯ್ಯಾಲೆಯನ್ನು ಮನೆಯೊಳಗೆ ಹಾಕಬಹುದೇ ಎನ್ನುವ ಕನಿಷ್ಟ ಜ್ಞಾನವೂ ಇರುವುದಿಲ್ಲ.

ಮನೆಯ ಒಳಗೆ ಉಯ್ಯಾಲೆ ಹಾಕುವುದು ಶುಭವೋ ಅಶುಭವೋ?:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಒಳಾಂಗಣದಲ್ಲಿ ಉಯ್ಯಾಲೆಯನ್ನು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ. ಉಯ್ಯಾಲೆ ಇರುವ ಮನೆಯು ನಕಾರಾತ್ಮಕ ಶಕ್ತಿಯಿಂದ ಮುಕ್ತವಾಗಿರುತ್ತದೆ ಎನ್ನಲಾಗಿದೆ. ಯಾವ ಮನೆಯಲ್ಲಿ ಉಯ್ಯಾಲೆ ಇರುವುದೋ ಆ ಮನೆಯಲ್ಲಿ ಜಗಳ, ಕದನ, ಮನಸ್ತಾಪಗಳು ಇರುವುದಿಲ್ಲ ಎನ್ನಲಾಗಿದೆ. ಇದಲ್ಲದೆ, ಗ್ರಹ ದೋಷಗಳು ನಿವಾರಣೆಯಾಗಿ ಶಾಂತಿ ನೆಲೆಸುತ್ತದೆಯಂತೆ.
ಮನೆಯಲ್ಲಿ ಮರದ ಉಯ್ಯಾಲೆಯಿದ್ದರೆ ಶುಭ:
ಇತ್ತೀಚಿನ ದಿನಗಳಲ್ಲಿ ಜನರು ಆಧುನಿಕ ಉಯ್ಯಾಲೆಗಳತ್ತ ಮೊರೆ ಹೋಗುತ್ತಾರೆ. ಮನೆಯಲ್ಲಿ ಕಬ್ಬಿಣ ಅಥವಾ ಇತರ ಲೋಹಗಳಿಂದ ಮಾಡಿದ ಉಯ್ಯಾಲೆಗಳನ್ನು ಹಾಕುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಉಯ್ಯಾಲೆ ಇಡುವುದಾದರೆ ಮರದಿಂದ ಮಾಡಿದ ಉಯ್ಯಾಲೆಯನ್ನು ಮಾತ್ರ ಇಡುವುದು ಶುಭ.ಮನೆಯಲ್ಲಿ ಮರದಿಂದ ಮಾಡಿದ ಉಯ್ಯಾಲೆ ಇಡುವುದರಿಂದ, ಅನಗತ್ಯ ಖರ್ಚು ನಿಯಂತ್ರಣಕ್ಕೆ ಬರುತ್ತದೆ. ಕ್ರಮೇಣ ಆರ್ಥಿಕ ಸ್ಥಿತಿ ಬಲಗೊಳ್ಳಲು ಪ್ರಾರಂಭಿಸುತ್ತದೆ. ಮರದಿಂದ ಮಾಡಿದ ಉಯ್ಯಾಲೆ ಇರುವ ಮನೆ ವೇಗವಾಗಿ ಅಭಿವೃದ್ಧಿಯಾಗುವುದು. ಮನೆಯ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಮನೆಯಲ್ಲಿರುವ ಮಕ್ಕಳಿಗೆ ಕೆಟ್ಟ ಕನಸುಗಳು ಬೀಳುವುದಿಲ್ಲ. ಶಿಕ್ಷಣದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅಂತಹ ಮನೆಯ ಜನರು ಅನಗತ್ಯ ಭಯದಿಂದ ಪರಿಹಾರವನ್ನು ಪಡೆಯುತ್ತಾರೆ.
ಉಯ್ಯಾಲೆ ಇಡಲು ಸರಿಯಾದ ದಿಕ್ಕು ಯಾವುದು?:
ವಾಸ್ತು ಶಾಸ್ತ್ರದ ಪ್ರಕಾರ, ಉಯ್ಯಾಲೆಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ. ಯಾವಾಗಲೂ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ದಿಕ್ಕಿನಲ್ಲಿ ಉಯ್ಯಾಲೆಯನ್ನು ಇರಿಸಬೇಕು. ಇದಲ್ಲದೆ, ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಉಯ್ಯಾಲೆಯನ್ನು ತೂಗು ಹಾಕುವುದರಿಂದಲೂ ಅದೃಷ್ಟ ಮತ್ತು ಯಶಸ್ಸು ಬರುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಉಯ್ಯಾಲೆಯನ್ನು ಎಂದಿಗೂ ಇಡಬಾರದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications