ಶೀಘ್ರವೇ ಹೆಚ್ಚಾಗಲಿದೆ ಸರ್ಕಾರಿ ನೌಕಕರ ಸಂಬಳ!
ಕೇಂದ್ರ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಸರ್ಕಾರ ವರ್ಷಕ್ಕೆ ಎರಡನೇ ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತಿದೆ. ಮೂಲಗಳ ಪ್ರಕಾರ ಜುಲೈ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
7ನೇ ವೇತನ ಆಯೋಗವು ಜುಲೈ 1 ರಂದು ಕೇಂದ್ರವು ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ತುಟ್ಟಿಭತ್ಯೆ ಹೆಚ್ಚಳ ಕುರಿತು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ, ಜುಲೈ 1ರಿಂದ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ವರ್ಷದ ಜನವರಿಯಲ್ಲಿ, ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 31 ರಿಂದ 34 ಕ್ಕೆ ಹೆಚ್ಚಿಸಿತ್ತು. ಡಿಎ ಹೆಚ್ಚಳದಿಂದ ಸುಮಾರು 50 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
ಜನವರಿಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3 ರಷ್ಟು ಡಿಎ ಹೆಚ್ಚಳ ಮಾಡಿತ್ತು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಆಧರಿಸಿ ಡಿಎ ಹೆಚ್ಚಳ ಮಾಡುತ್ತದೆ.

ಶೇಕಡಾ 4ರಷ್ಟು ಡಿಎ ಹೆಚ್ಚಾಗುವ ನಿರೀಕ್ಷೆ
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಹೆಚ್ಚಳದ ನಂತರ ಡಿಎ ಶೇಕಡಾ 4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಶೇಕಡಾ 34 ರಷ್ಟು ಡಿಎ ಪಡೆಯುತ್ತಿದ್ದಾರೆ.
ಈಗ ತುಟ್ಟಿಭತ್ಯೆ ಶೇಕಡಾ 4ರಷ್ಟು ಹೆಚ್ಚಾದರೆ ಅದು ಶೇ.38ಕ್ಕೆ ಏರಿಕೆಯಾಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.

ಎಷ್ಟು ಸಂಬಳ ಹೆಚ್ಚಾಗುತ್ತೆ?
7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ಆಗಿದ್ದು, ತುಟ್ಟಿ ಭತ್ಯೆ 21,622ರಷ್ಟು ಡಿಎ ಪಡೆಯಲಿದ್ದಾರೆ. ಪ್ರಸ್ತುತ ಶೇಕಡಾ 34ರ ದರದಲ್ಲಿ 19,346 ರೂಪಾಯಿ ಡಿಎ ಪಡೆಯುತ್ತಿದ್ದಾರೆ.
ಶೇಕಡಾ 4 ರಷ್ಟು ಡಿಎ ಹೆಚ್ಚಳದಿಂದ ವೇತನ 2,276 ರೂಪಾಯಿ ಏರಿಕೆಯಾಗಲಿದೆ. ವೇತನ ವಾರ್ಷಿಕವಾಗಿ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ಗ್ರಾಹಕ ದರ ಸೂಚ್ಯಂಕ ಏರಿಕೆ
ಗ್ರಾಹಕ ದರ ಸೂಚಿಯಂತೆ ಭತ್ಯೆ ಏರಿಕೆ ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 50 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ.
ಜನವರಿ ಮತ್ತು ಫೆಬ್ರವರಿಯಲ್ಲಿ ಗ್ರಾಹಕ ದರ ಸೂಚ್ಯಂಕ (ಎಐಸಿಪಿಐ)ಕ್ರಮವಾಗಿ 125.1 ಮತ್ತು 125 ರಷ್ಟಿತ್ತು, ಮಾರ್ಚ್‌ನಲ್ಲಿ ಅದು 126ಕ್ಕೆ ಏರಿತು. ಸೂಚ್ಯಂಕದ ಆಧಾರದ ಮೇಲೆ ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

ಹಣದುಬ್ಬರ ಕಡಿಮೆ ಮಾಡಲು ಡಿಎ ಹೆಚ್ಚಳ
ಹಣದುಬ್ಬರ ಕಡಿಮೆ ಮಾಡಲು ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಚಿಲ್ಲರೆ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿರುವುದರಿಂದ, ತುಟ್ಟಿಭತ್ಯೆ ಹೆಚ್ಚಳದ ಸಾಧ್ಯತೆಗಳು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಎಂಟು ವರ್ಷಗಳ ಗರಿಷ್ಠ ಶೇಕಡಾ 7.79 ರಷ್ಟಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ನೌಕರ ನಗರ ವಲಯದಲ್ಲಿ, ಅರೆ ನಗರ ವಲಯದಲ್ಲಿ ಅಥವಾ ಗ್ರಾಮೀಣ ವಲಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬುದರ ಆಧಾರದ ಮೇಲೆ ತುಟ್ಟಿಭತ್ಯೆ ಪ್ರಮಾಣ ಉದ್ಯೋಗಿಯಿಂದ ಉದ್ಯೋಗಿಗೆ ಬದಲಾಗುತ್ತದೆ.












Click it and Unblock the Notifications