PM Modi In Bidar: ನಾನು 'ದೆಹಲಿಯಲ್ಲಿ ಕೂತಿರುವ ನಿಮ್ಮ ಬೇಟಾ' ಎಂದ ಮೋದಿ
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಸಮಾವೇಶದಲ್ಲಿ ಭಾಗವಹಿಸಿ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ ಜಗಜ್ಯೋತಿ ಬಸವಣ್ಣನವರಿಗೆ ನಮಸ್ಕರಿಸಿದರು. ಬಸವೇಶ್ವರರ ನಾಡಿಗೆ ನನ್ನ ನಮಸ್ಕಾರ ಎಂದು ಹೇಳಿದರು. ಈ ಚುನಾವಣೆ ಬರೀ ಐದು ವರ್ಷದ ಚುನಾವಣೆಯಲ್ಲ, ವಿಶ್ವದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರವು ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲಿದೆ, ರಾಜ್ಯದ ಮೂಲೆ ಮೂಲೆಯನ್ನು ಅಭಿವೃದ್ಧಿ ಮಾಡುತ್ತೇವೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವಂತೆ ಮೋದಿ ಮನವಿ ಮಾಡಿದರು.
ರೈತರಿಗೆ ಕಾಂಗ್ರೆಸ್-ಜೆಡಿಎಸ್ ಮೋಸ ಮಾಡಿವೆ, ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ನನ್ನನ್ನು ಬೆದರಿಸುವ ಕೆಲಸ ಮಾಡುತ್ತಿದೆ.
— oneindiakannada (@OneindiaKannada) April 29, 2023
-ನರೇಂದ್ರ ಮೋದಿ #bidar #pmmodi #narendramodi #humnabadrally #Modiinkarnataka #KarnatakaElection2023 pic.twitter.com/gk7kh7Wlsz
ಬೀದರ್ ಜಿಲ್ಲೆಗೆ ಬಂದಿರುವುದು ನನ್ನ ಸೌಭಾಗ್ಯ, ಕರ್ನಾಟಕದ ಕಿರೀಟ ಬೀದರ್ ಜನರ ಆಶೀರ್ವಾದ ಈ ಹಿಂದೆಯೂ ಬಿಜೆಪಿ ಮೇಲಿತ್ತು. ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳನ್ನು ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಮಾಡುತ್ತೇವೆ, ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂಡವಾಳ ಹರಿದುಬರುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಮಾಡಿದೆ. ಬಿಜೆಪಿ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೈತರ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಲಾಭವಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ 6 ಸಾವಿರ ನೀಡುತ್ತಿದ್ದೇವೆ. ರಾಜ್ಯ ಸರ್ಕಾರದ ಅನುದಾನ ಸೇರಿ ರೈತರಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ 5 ವರ್ಷದಲ್ಲಿ ಭಾರಿ ಅಭಿವೃದ್ದಿಯಾಗಿದೆ.
ಕಾಂಗ್ರೆಸ್, ಜೆಡಿಎಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ರೈತರಿಗೆ ಹಲವು ಗ್ಯಾರಂಟಿ ಸ್ಕೀಂ ಅನ್ನು ಜಾರಿಗೆ ತಂದಿತು. ಆದರೆ ಯಾವುದೂ ರೈತರ ಬ್ಯಾಂಕ್ ಅಕೌಂಟಿಗೆ ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಅಕೌಂಟಿಗೆ ಮಾತ್ರ ದುಡ್ಡು ಬಿತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರಿಗೆ ಬಡವರ ಕಷ್ಟ ಎಂದಿಗೂ ಅರ್ಥವಾಗಲ್ಲ, ಕಾಂಗ್ರೆಸ್‌ನವರು ಬಡತನವನ್ನೇ ನೋಡಿಲ್ಲ, ರೈತರಿಗಾಗಿ ಕಾಂಗ್ರೆಸ್, ಜೆಡಿಎಸ್ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಮೋದಿ ಹೇಳಿದರು. ಸಾಲಮನ್ನಾ ಮಾಡುವುದಾಗಿ ಹೇಳಿ ಎರಡೂ ಪಕ್ಷದ ನಾಯಕರು ಮೋಸ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದರು.
ನಾನು ದೆಹಲಿಯಲ್ಲಿ ಕೂತಿರುವ ನಿಮ್ಮ ಮನೆ ಮಗ
ಹಳ್ಳಿಗಳಲ್ಲಿ ಶೌಚಾಲಯ ಇರಲಿಲ್ಲ, ಪ್ರತಿ ಮನೆಗೆ ಕುಡಿಯುವ ನೀರು ಬರುತ್ತಿರಲಿಲ್ಲ ಬಿಜೆಪಿ ಸರ್ಕಾರ ಇಂದು ಎಲ್ಲಾ ಮನೆಗಳಿಗೆ ಶೌಚಾಲಯ ನೀಡಿದೆ, ಪ್ರತಿ ಮನೆಗೆ ಕುಡಿಯುವ ನೀರು ಬರುತ್ತಿದೆ. ನಾನು ದೆಹಲಿಯಲ್ಲಿ ಕೂತಿರುವ ನಿಮ್ಮ ಮನೆ ಮಗ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮೋದಿ ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನವರು ನನ್ನನ್ನು ಟೀಕೆ ಮಾಡಲು ಶುರು ಮಾಡಿಕೊಂಡಿದ್ದಾರೆ. 91 ಬಾರಿ ಬೇರೆ ಬೇರೆ ರೀತಿಯ ಬೈಗುಳಗಳನ್ನು ಬೈದಿದ್ದಾರೆ. ಇವರು ಡಾ. ಬಿ. ಆರ್ ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ, ಅವರನ್ನೂ ನಿಂದಿಸಿದ್ದಾರೆ. ಅಂಬೇಡ್ಕರ್ ಅವರನ್ನು ರಾಷ್ಟ್ರದ್ರೋಹಿ ಎಂದು ಕರೆದಿದ್ದರು. ಅಂಬೇಡ್ಕರ್, ಸಾವರ್ಕರ್ ರನ್ನು ನಿಂದಿಸಿದಂತೆ ನನ್ನನ್ನು ನಿಂದಿಸಲಾಗುತ್ತಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅವರು ನನ್ನನ್ನು ಬೈಯುತ್ತಿರಲಿ ನಾನು ದೇಶದ, ದೇಶದ ಜನರ ಸೇವೆಯನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್‌ನವರು ಬೈದಾಗಲೆಲ್ಲಾ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿ ಕೂಡ ಅವರಿಗೆ ಜನ ಪಾಠ ಕಲಿಸಲಿದ್ದಾರೆ ಎಂದು ಮೋದಿ ಹೇಳಿದರು.
ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಏನೂ ಮಾಡಿಲ್ಲ, ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು, ಮೀಸಲಾತಿ ನೀಡಿದ್ದೇವೆ. ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದೆ. ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಮೋದಿ ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 30 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದೆ. ಎಥೆನಾಲ್ ಉತ್ಪಾದನೆ ಹೆಚ್ಚಿಸಿರುವುದರಿಂದ ರೈತರಿಗೆ ಲಾಭವಾಗಿದೆ. ಪೆಟ್ರೋಲ್ ಮೇಲಿನ ಅವಲಂಬನೆ ಕೂಡ ಕಡಿಮೆಯಾಗಲಿದೆ ಎಂದು ಮೋದಿ ಹೇಳಿದರು.
ಅಭಿವೃದ್ಧಿಗಾಗಿ ಮತ ನೀಡಲು ಮೋದಿ ಮನವಿ
ನಿಮ್ಮ ಸೇವಕ ನರೇಂದ್ರ ಮೋದಿ ಬೀದರ್ ಜಿಲ್ಲೆಗೆ ಬಂದಿದ್ದರು, ಜಿಲ್ಲೆಯ ಪ್ರತಿ ಮನೆ ಮನೆಗೆ ಹೋಗಿ ಈ ಮಾತನ್ನು ಹೇಳಿ, ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಕೊಡಿ ಎಂದು ಕೇಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ನರೇಂದ್ರ ಮೋದಿ ಮನವಿ ಮಾಡಿದರು.












Click it and Unblock the Notifications