ಗ್ರಾಮಕ್ಕೆ ಬಂದ ಮಾವೋ ಉಗ್ರನನ್ನು ಕೊಂದ ಹಳ್ಳಿಗರು
ಭುವನೇಶ್ವರ, ಜನವರಿ 26: ಮಾವೋ ಉಗ್ರರ ಹಿಂಸಾಚಾರದಿಂದ ಬೇಸತ್ತಿದ್ದ ಹಳ್ಳಿಗರು ಮಾವೋ ಉಗ್ರನನ್ನು ಹೊಡೆದು ಕೊಂದಿರುವ ಘಟನೆ ಒಡಿಸ್ಸಾದಲ್ಲಿ ನಡೆದಿದೆ.
ಒಡಿಸ್ಸಾದ ಮಲ್ಕಂಗಿರಿ ಬಳಿಯ ಜಂತುರಾಯಿ ಗ್ರಾಮಕ್ಕೆ ಇಬ್ಬರು ಮಾವೋ ಉಗ್ರರು ನಿನ್ನೆ ರಾತ್ರಿ ಆಗಮಿಸಿದ್ದಾರೆ. ಗಣರಾಜ್ಯೋತ್ಸವವನ್ನು ಭಹಿಷ್ಕರಿಸಿರೆಂದು ತಾಕೀತು ಮಾಡಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಳ್ಳಿಗರು ಇಬ್ಬರು ಮಾವೊ ಉಗ್ರರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಹಳ್ಳಿಗರನ್ನು ಭಯಭಿತಗೊಳಿಸಲು ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಹಳ್ಳಿಗರು ಬಿಲ್ಲು-ಬಾಣಗಳೊಂದಿಗೆ ಉಗ್ರರ ಮೇಲೆ ದಾಳಿ ಮಾಡಿದ್ದಾರೆ. ಹಳ್ಳಿಗರ ಪ್ರತಿದಾಳಿಯಲ್ಲಿ ಒಬ್ಬ ಮಾವೊ ಉಗ್ರ ಹತನಾಗಿದ್ದರೆ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ಮಾವೊ ಉಗ್ರರಿಂದ ಆ ಭಾಗ ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಇತ್ತೀಚೆಗಷ್ಟೆ ಜಂತುರಾಯಿ ಗ್ರಾಮಕ್ಕೆ ಮಂಜೂರಾಗಿದ್ದ ರಸ್ತೆ ಕಾಮಗಾರಿಯನ್ನು ವಿರೋಧಿಸಿದ್ದ ಮಾವೋ ಉಗ್ರರು ದಾಂಧಲೆ ಎಬ್ಬಿಸಿ ಕಾಮಗಾರಿ ನಡೆಯದಂತೆ ಮಾಡಿದ್ದರು.
ಇದೇ ಸಿಟ್ಟಿನಲ್ಲಿದ್ದ ಗ್ರಾಮಸ್ಥರನ್ನು ಹೆದರಿಸಿ ಗಣರಾಜ್ಯೋತ್ಸವ ಆಚರಿಸ ಬೇಡಿ ಎಂದು ತಾಕೀತು ಮಾಡಿದಾಗ ಆಕ್ರೋಶ ಕಟ್ಟೆ ಒಡೆದು ಗ್ರಾಮಸ್ಥರೇ ಮಾವೋ ಉಗ್ರರನ್ನು ಕೊಂದಿದ್ದಾರೆ.












Click it and Unblock the Notifications