ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದಿದ್ದರೆ ಲೈಸೆನ್ಸ್ ರದ್ದು!
ಭುವನೇಶ್ವರ್, ನವೆಂಬರ್.19: ಬೈಕ್ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವುದನ್ನು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ. ಒಂದು ವೇಳೆ ಹೆಲ್ಮೆಟ್ ಧರಿಸದೇ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಲೈಸೆನ್ಸ್ ನ್ನು ರದ್ದುಗೊಳಿಸಲಾಗುತ್ತದೆ. ಇಂಥದೊಂದು ಕಟ್ಟುನಿಟ್ಟಿನ ಕಾನೂನನ್ನು ಒಡಿಶಾ ಸರ್ಕಾರವು ಜಾರಿಗೊಳಿಸಿದೆ.
ಪ್ರತಿ ಕುಟುಂಬಕ್ಕೂ ಉಚಿತ ಸ್ಮಾರ್ಟ್ ಫೋನ್ ಘೋಷಿಸಿದ ಸರ್ಕಾರ!
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವ ಅಪರಾಧಿಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒಡಿಶಾ ಸರ್ಕಾರ ಗುರುವಾರ ರಾಜ್ಯ ಪೊಲೀಸ್ ಮತ್ತು ಸಾರಿಗೆ ಆಯುಕ್ತರಿಗೆ ಆದೇಶಿಸಿದೆ.
ಒಡಿಶಾದ ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಎಸ್.ಪಾಧಿ ಡಿಜಿಪಿ ಮತ್ತು ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವವರ ಚಾಲನಾ ಪರವಾನಗಿ (ಡಿಎಲ್) ಅಮಾನತುಗೊಳಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಹೊಸ ಕಾನೂನು ಜಾರಿಗೊಳಿಸಲು ಕಾರಣ:
ಕಳೆದ 2019ರಲ್ಲಿ ಮತ್ತು 2020ರ ಜನವರಿಯಿಂದ ಅಕ್ಟೋಬರ್ ತಿಂಗಳಾಂತ್ಯದವರೆಗೂ ಹೆಲ್ಮೆಟ್ ಧರಸದೇ ಕಾನೂನು ಉಲ್ಲಂಘಿಸಿದ ಹಿನ್ನೆಲೆ ಡಿಎಲ್ ಅನ್ನು ಅಮಾನತುಗೊಳಿಸಿದ ಬಗ್ಗೆ ಜಿಲ್ಲಾವಾರು ವರದಿಯನ್ನು ಏಳು ದಿನಗಳಲ್ಲಿ ಸುಪ್ರೀಂಕೋರ್ಟ್ ಸಮಿತಿಯ ಮೌಲ್ಯಮಾಪನಕ್ಕಾಗಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಳೆದ ವರ್ಷದ ಒಡಿಶಾದಲ್ಲಿ ಸಂಭವಿಸಿದ 11064 ಅಪಘಾತಗಳಲ್ಲಿ 4688 ಬೈಕ್ ಅಪಘಾತಗಳೇ ಆಗಿರುವ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಒಟ್ಟು ರಸ್ತೆ ಅಪಘಾತದಲ್ಲಿ ಕಳೆದ ವರ್ಷ 5333 ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 2398 ಮಂದಿ ಬೈಕ್ ಸವಾರರೇ ಆಗಿದ್ದರು. ಅದರಲ್ಲೂ ಬೈಕ್ ಅಪಘಾತದಲ್ಲಿ ಮೃತಪಟ್ಟ 2398 ಬೈಕ್ ಸವಾರರಲ್ಲಿ 2156 ಜನ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿತ್ತು.