ಬಿಜೆಪಿ ನಾಯಕರಿಂದಲೇ 'ಲವ್ ಜಿಹಾದ್': ದಿಗ್ವಿಜಯ್ ಸಿಂಗ್
ಭೋಪಾಲ್, ಅಕ್ಟೋಬರ್ 30: ಬಿಜೆಪಿ ನಾಯಕರಾದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸಯ್ಯದ್ ಶಹನವಾಜ್ ಹುಸೇನ್ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ 'ಲವ್ ಜಿಹಾದ್' ಆರೋಪ ಮಾಡಿದ್ದಾರೆ.
'ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಮದುವೆಯಾಗುವುದೇ ಲವ್ ಜಿಹಾದ್ ಎಂದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಇರುವ ನಖ್ವಿ ಹಿಂದೂ ಮಹಿಳೆಯನ್ನು ಮದುವೆಯಾಗಿದ್ದಾರೆ. ಬಿಜೆಪಿ ನಾಯಕ ಹುಸೇನ್ ಅವರ ಪತ್ನಿ ಕೂಡ ಹಿಂದುವೇ. ಇವೂ ಕೂಡ ಲವ್ ಜಿಹಾದ್ ಆಗುತ್ತದೆ ಅಲ್ಲವೇ' ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯವಾಗಿ ಹೇಳಿದ್ದಾರೆ.
'ಅವರಿಗೆ (ಬಿಜೆಪಿ) ಹಿಂದೂ-ಮುಸ್ಲಿಂ ವಿಚಾರಗಳನ್ನು ಕೆದಕುವುದರ ಹೊರತಾಗಿ ಬೇರೆ ಯಾವುದೇ ಅಜೆಂಡಾವಿಲ್ಲ, ಚರ್ಚಿಸಲು ವಿಷಯಗಳೂ ಇಲ್ಲ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ದ್ವೇಷವನ್ನು ಹರಡುವುದು ಮತ್ತು ಜನರನ್ನು ಕೆರಳಿಸುವುದನ್ನೇ ಅವರು ಬಯಸುತ್ತಿರುತ್ತಾರೆ. ನಾವು ಇದನ್ನು ವಿರೋಧಿಸುತ್ತೇವೆ' ಎಂದು ಆರೋಪಿಸಿದ್ದಾರೆ.

'ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಶಾಸಕರೊಬ್ಬರು 35 ಕೋಟಿ ರೂಗೆ ಮಾರಾಟವಾಗಿದ್ದಾರೆ. ಅವರು ನಿಮ್ಮನ್ನು ಹಣ ಮತ್ತು ಮದ್ಯ ಹಿಡಿದು ಸಂಪರ್ಕಿಸುತ್ತಾರೆ. ಆದರೆ ನೀವು ಆ 35 ಕೋಟಿಯ ವಿವರ ಕೇಳಬೇಕಿದೆ. ಪ್ರತಿ ಮತವನ್ನೂ 6,300 ರೂಗೆ ಮಾರಾಟ ಮಾಡಲಾಗಿದೆ' ಎಂದು ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಮುಂಗೌಳಿ ವಿಧಾನಸಭೆ ಕ್ಷೇತ್ರದ ಪ್ರಚಾರದ ವೇಳೆ ಆರೋಪಿಸಿದ್ದಾರೆ.
ದಿಗ್ವಿಜಯ ಸಿಂಗ್ ಅವರು ಆಧಾರ ರಹಿತ ಆರೋಪದ ಮೂಲಕ ಜನರ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.












Click it and Unblock the Notifications