Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ

ಬೆಂಗಳೂರು: ಸಾರ್ವಜನಿಕ ಸ್ಥಳವೊಂದರಲ್ಲಿ ಯುವಕನೊಬ್ಬ ಪ್ರಜ್ಞೆ ತಪ್ಪಿದವನಂತೆ, ಗಂಟೆಗಟ್ಟಲೆ ಒಂದೇ ಕಡೆ ನಿಶ್ಚಲವಾಗಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಯುವಕನ ವಿಚಿತ್ರ ವರ್ತನೆಗೆ ನಿಖರ ಕಾರಣವೇನು ಎಂಬ ಪ್ರಶ್ನೆ ಇದೀಗ ನೆಟ್ಟಿಗರನ್ನು ಕಾಡುತ್ತಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವರದಿಗಳ ಪ್ರಕಾರ, ಈ ವಿಡಿಯೋವನ್ನು ನಗರದ ಬಾಗಲೂರು ಪ್ರದೇಶದ ನಿಟ್ಟೆ ಕಾಲೇಜು (Nitte College) ಬಳಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವ ಯುವಕ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಕಿಂಚಿತ್ತೂ ಅರಿವಿಲ್ಲದಂತೆ ಒಂದೇ ಭಂಗಿಯಲ್ಲಿ ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರು, ಇದು ಅತ್ಯಂತ ಆತಂಕಕಾರಿ ವಿಚಾರ ಎಂದು ಎಚ್ಚರಿಸಿದ್ದು, ನಗರಕ್ಕೆ 'ಜಾಂಬಿ ಡ್ರಗ್' (Zombie drug) ಎಂದು ಕರೆಯಲಾಗುವ ಅಪಾಯಕಾರಿ ಮಾದಕ ವಸ್ತು ಪ್ರವೇಶಿಸಿದೆ ಎಂದು ಆರೋಪಿಸಿದ್ದಾರೆ.

Zombie Drug

ವೈರಲ್‌ ವಿಡಿಯೋದಲ್ಲಿ ಏನಿದೆ?

"ಬೆಚ್ಚಿಬೀಳಿಸುವ ದೃಶ್ಯ! ಬಳಕೆದಾರರನ್ನು ನಿಶ್ಚಲರನ್ನಾಗಿ, ಜಾಂಬಿಗಳಂತೆ ಪರಿವರ್ತಿಸುವ ಮಾರಣಾಂತಿಕ 'ಜಾಂಬಿ ಡ್ರಗ್' (ಕ್ಸೈಲಾಜಿನ್ ಮಿಶ್ರಿತ ವಸ್ತು) ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ನಿಟ್ಟೆ ಕಾಲೇಜು ಬಳಿಯ ಬಾಗಲೂರಿನಿಂದ ಇಂತಹ ಆತಂಕಕಾರಿ ವರದಿಗಳು ಹೊರಬರುತ್ತಿವೆ. ಪೋಷಕರು, ಯುವಕರು ಮತ್ತು ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಸಮಯವಿದು. ಇದು ನಮ್ಮ ನಗರಕ್ಕೆ ನೀಡುತ್ತಿರುವ ಗಂಭೀರ ಎಚ್ಚರಿಕೆ. ಬೆಂಗಳೂರು 'ಉಡ್ತಾ ಬೆಂಗಳೂರು' ಆಗುತ್ತಿದೆ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ!" ಎಂದು ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ.

ಯಲಹಂಕ ಪೊಲೀಸರ ಪ್ರತಿಕ್ರಿಯೆ

ಈ ವೈರಲ್ ವಿಡಿಯೋಗೆ ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯ ಅಧಿಕೃತ ಎಕ್ಸ್ ಖಾತೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಬಳಕೆದಾರರಿಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದೆ. "ದಯವಿಟ್ಟು ನಿಮ್ಮ ವಿವರಗಳನ್ನು ಡಿಎಂ (DM) ಮಾಡಿ ಸರ್" ಎಂದು ಪ್ರತಿಕ್ರಿಯಿಸಿರುವ ಪೊಲೀಸರು, ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವು ಬಳಕೆದಾರರು ಕಳವಳ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ. "ಇದು ನಿಜಕ್ಕೂ ಭಯಾನಕವಾಗಿದೆ" ಎಂದು ಒಬ್ಬರು ಬರೆದರೆ, "ಅವನಿಗೆ ಅಗತ್ಯವಿರುವ ವೈದ್ಯಕೀಯ ನೆರವು ಸಿಗಲಿ ಎಂದು ನಾನು ಆಶಿಸುತ್ತೇನೆ. ಇದು ಒಂದು ಕೆಟ್ಟ ಕಾಲ, ಯಾರೂ ಸಹ ಇಂತಹ ಪರಿಸ್ಥಿತಿಯನ್ನು ಎದುರಿಸಬಾರದು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ತುಂಬಾ ಭಯಾನಕ. ಯುವಜನತೆಯನ್ನು ಈ ಅಪಾಯದಿಂದ ಪಾರು ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದು ಮತ್ತೊಬ್ಬ ಬಳಕೆದಾರರು ಆಗ್ರಹಿಸಿದ್ದಾರೆ.

ಚಂಡೀಗಢದಲ್ಲೂ ನಡೆದಿತ್ತು ಇದೇ ರೀತಿಯ ಘಟನೆ

ವಿಶೇಷವೆಂದರೆ, ಕೆಲವೇ ದಿನಗಳ ಹಿಂದಷ್ಟೇ ಚಂಡೀಗಢದಿಂದಲೂ ಇದೇ ರೀತಿಯ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಡೆಲಿವರಿ ಬಾಯ್ ಒಬ್ಬ ಗಂಟೆಗಟ್ಟಲೆ ಯಾವುದೇ ಪ್ರತಿಕ್ರಿಯೆ ನೀಡದೆ ನಿಶ್ಚಲವಾಗಿ ನಿಂತಿದ್ದ. ಆತನ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಆದಾಗ್ಯೂ, ಆ ಘಟನೆಯ ಹಿಂದಿನ ನಿಖರ ಕಾರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಚಂಡೀಗಢದ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಈ ವರ್ತನೆಗೆ ಮಾದಕ ವಸ್ತು ಸೇವನೆ ಕಾರಣವಿರಬಹುದು ಎಂದು ಶಂಕಿಸಿದ್ದರು. ಆದರೆ, ಆ ವಾದಗಳು ಸಹ ಇದುವರೆಗೂ ದೃಢಪಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+