ಝಾಂಬಿ ಡ್ರಗ್ಸ್ ಕೇಸ್ನಲ್ಲಿ ನಟ ದುನಿಯಾ ವಿಜಯ್ಗೆ ಸಂಕಷ್ಟ; ಡಿಲೀಟ್ ಆದ ವಿಡಿಯೋ ರಿಟ್ರೀವ್ ಮಾಡಲು ಇನ್ಸ್ಟಾಗೆ ಪತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 'ಝಾಂಬಿ ಡ್ರಗ್ಸ್' ಹಾವಳಿ ಶುರುವಾಗಿದೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಹಾಗೂ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಂಕಷ್ಟ ಎದುರಾಗಿದೆ. ತಪ್ಪು ಅರಿವಾದ ಕೂಡಲೇ ಇಬ್ಬರೂ ತಾವು ಶೇರ್ ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿ ಕೈತೊಳೆದುಕೊಂಡಿದ್ದರು. ಆದರೆ, ಇದೀಗ ಬಾಗಲೂರು ಪೊಲೀಸರು ಡಿಲೀಟ್ ಆಗಿರುವ ವಿಡಿಯೋವನ್ನು ರಿಟ್ರೀವ್ (ಮರುಪಡೆಯಲು) ಮಾಡುವಂತೆ ಕೋರಿ ಇನ್ಸ್ಟಾಗ್ರಾಮ್ ಸಂಸ್ಥೆಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ, ಯುವಕನೊಬ್ಬ ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್ ಸೇವಿಸಿದ ಯುವಕನ ಪರದಾಟ ಎಂದು ಹೇಳಲಾಗಿತ್ತು. ಇದರ ಸತ್ಯತೆಯ ಬಗ್ಗೆ ಯಾವುದೇ ಪೂರ್ವಾಪರ ಪರಿಶೀಲನೆ ನಡೆಸದೆ, ನಟ ದುನಿಯಾ ವಿಜಯ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ಪೊಲೀಸರು, ನಗರದಲ್ಲಿ ಅಂತಹ ಯಾವುದೇ ಝಾಂಬಿ ಡ್ರಗ್ಸ್ ಪತ್ತೆಯಾಗಿಲ್ಲ. ಇದು ಕೇವಲ ವದಂತಿ ಮತ್ತು ಸುಳ್ಳು ವಿಡಿಯೋ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದರು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಈಗಾಗಲೇ ಈ ಸುಳ್ಳು ವಿಡಿಯೋವನ್ನು ಹಂಚಿಕೊಂಡಿದ್ದ ಸುಮಾರು 15 ಮಂದಿಗೆ ಬಾಗಲೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದೇ ಹಾದಿಯಲ್ಲಿ ದುನಿಯಾ ವಿಜಯ್ ಮತ್ತು ಭಾಸ್ಕರ್ ರಾವ್ ಅವರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇನ್ಸ್ಟಾಗ್ರಾಮ್ನಿಂದ ಡಿಲೀಟ್ ಆಗಿರುವ ಆ ವಿಡಿಯೋ ರಿಟ್ರೀವ್ ಆಗಿ ಬಂದ ಕೂಡಲೇ, ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ.
ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಖ್ಯಾತ ನಟ ಹಾಗೂ ಮಾಜಿ ಪೊಲೀಸ್ ಆಯುಕ್ತರೇ ಯಾವುದೇ ಮಾಹಿತಿಯಿಲ್ಲದೆ, ಪೂರ್ವಾಪರ ಅರಿಯದೆ ಇಂತಹ ಸುಳ್ಳು ವಿಡಿಯೋವನ್ನು ಏಕೆ ಅಪ್ಲೋಡ್ ಮಾಡಿದರು ಎಂಬ ಬಗ್ಗೆ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿ ಪ್ರಶ್ನಿಸಲಿದ್ದಾರೆ. ಒಟ್ಟಿನಲ್ಲಿ, ಸತ್ಯಾಸತ್ಯತೆ ತಿಳಿಯದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಎಂತಹ ಸಂಕಷ್ಟ ಎದುರಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆಯಾಗಿದೆ.












Click it and Unblock the Notifications