Delivery Boys: ಫುಡ್ ಡೆಲಿವರಿಗೆ ಯೆಲ್ಲೋ ಬೋರ್ಡ್ ಕಡ್ಡಾಯ, ವೈಟ್ ಬೋರ್ಡ್ ಬೈಕ್ಸ್ ವಶಕ್ಕೆ: ಬೆಂಗಳೂರು ಪೊಲೀಸ್
ಬೆಂಗಳೂರು, ಮಾರ್ಚ್ 02: ರಾಜಧಾನಿ ಬೆಂಗಳೂರಿನಲ್ಲಿ ಹೊಟ್ಟೆ ಪಾಡಿಗಾಗಿ ಬೈಕ್‌ಗಳ ಮೂಲಕ ಆಹಾರವನ್ನು ಮನೆ ಮನೆಗೆ ವಿತರಣೆ ಮಾಡುವ ಬಡ ಡೆಲಿವರಿ ಬಾಯ್‌ಗಳಿಗೆ ಬೆಂಗಳೂರು ನಗರ ಪೊಲೀಸರು ಶಾಕ್ ನೀಡಿದ್ದಾರೆ. ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಫುಡ್ ಡೆಲಿವರಿ ಬಾಯ್‌ಗಳ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಇಲ್ಲದೇ, ಅತ್ತ ಡೆಲಿವರಿ ಮಾಡಲಾಗದೇ ಅನೇಕ ಯುವಕರು ನಡು ರಸ್ತೆಯಲ್ಲಿ ನಿಲ್ಲುವಂತಾಗಿದೆ.
ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನ ಬಳಕೆ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ವೈಟ್ ಬೋರ್ಡ್ ನಂಬರ್ ಪ್ಲೇಟ್ ಇರುವ ದ್ವಿಚಕ್ರ ವಾಹನಗಳಲ್ಲಿ ಸ್ವಿಗ್ಗಿ, ಝೊಮ್ಯಾಟೊ ಕಂಪನಿಗಳ ಅಡಿಯಲ್ಲಿ ಮನೆ ಮನೆಗೆ ಆಹಾರ ವಿತರಿಸುವ ಡೆಲಿವರಿ ಬಾಯ್‌ಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಅಧಿಕೃತ ಆದೇಶದ ಮೇರೆಗೆ ನಿಯಮ ಉಲ್ಲಂಘಿಸುವ ಡೆಲಿವರಿ ಬಾಯ್‌ಗಳ ಬೈಕ್ ಜಪ್ತಿ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ಸಂಚಾರಿ ಪೊಲೀಸರು, ಯಾರೆಲ್ಲ ವೈಟ್ ಬೋರ್ಡ್ ಹೊಂದಿರುವ ವಾಹನಗಳಲ್ಲಿ ಆಹಾರ ವಿತರಿಸುತ್ತಿದ್ದಾರೋ ಅಂತಹ ಡೆಲಿವರಿ ಬಾಯ್‌ಗಳ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಹಿಂಬದಿ ಸೀಟಿನ ಮೇಲೆ ಕೆಂಪು ಝೊಮ್ಯಾಟೊ ಬ್ಯಾಗ್ ಇರುವ ನೂರಾರು ಬೈಕ್‌ಗಳು ಇದೀಗ ಪೊಲೀಸ್ ಸುಪರ್ದಿಯಲ್ಲಿವೆ. ಇತ್ತ ಫುಡ್ ಡೆಲಿವರಿ ವಿತರಣೆ ನೆಚ್ಚಿಕೊಂಡಿದ್ದ ಅದೆಷ್ಟೋ ಮಂದಿಗೆ ದಿಕ್ಕೇ ತೋಚದಂತಾಗಿದೆ. ಇನ್ನೂ ಕೆಲವರು ಇತರ ಉದ್ಯೋಗದ ಜೊತೆಗೆ ಸಿಕ್ಕ ಖಾಲಿ ಸಮಯದಲ್ಲಿ ಡೆಲಿವರಿ ಮಾಡುತ್ತಿದ್ದರು. ಅವರಿಗೂ ಪೊಲೀಸರು ಶಾಕ್ ನೀಡಿದ್ದಾರೆ.
ಡೆಲಿವರಿ ಬಾಯ್‌ಗಳ ಬೈಕ್ ವಶಕ್ಕೆ ಯಾಕೆ?
ಬಿಳಿ ನಂಬರ್ ಪ್ಲೇಟ್ (ವೈಟ್ ಬೋರ್ಡ್) ಹೊಂದಿರುವ ಯಾವ ವಾಹನಗಳು ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆ ಮಾಡಕೂಡದು. ಇವು ಖಾಸಗಿ ಬಳಕೆಗೆ ಮಾತ್ರ ಬಳಕಸಬೇಕಿದೆ. ಕೇವಲ ಹಳದಿ ನಂಬರ್ ಪ್ಲೇಟ್ ಹೊಂದಿದ ವಾಹನಗಳನ್ನು ಇತರ ಉದ್ದೇಶಗಳಿಗೆ ಬಾಡಿಗೆ, ವಾಣಿಜ್ಯ ಸಂಚಾರಕ್ಕೆ ಬಳಕೆ ಮಾಡಬಹುದಾಗಿದೆ. ಡೆಲಿವರಿ ಬಾಯ್‌ಗಳ ಬಳಿ ಇರುವ ವೈಟ್ ನಂಬರ್ ಪ್ಲೇಟ್‌ನ ವಾಹನಗಳಿಂದಲೇ ದುಡಿಮೆ ಮಾಡುತ್ತಿರುವುದು ಇದು ನಿಯಮ ಉಲ್ಲಂಘನೆ ಎಂಬ ಕಾರಣಕ್ಕೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ್ದಿದ್ದಾರೆ.

ಬಹುತೇಕ ಬೈಕ್‌ಗಳು ವೈಟ್ ಬೋರ್ಡ್‌ನಲ್ಲಿರುವ ಕಾರಣ, ಡೆಲಿವರಿ ಬಾಯ್‌ಗಳು ರಸ್ತೆಗೆ ಇಳಿಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವಾರಂತ್ಯದಲ್ಲಿ ಹೆಚ್ಚಿನ ಹಣ ದುಡಿಯಬಹುದು ಎಂಬ ಅವರ ಆಸೆಗೆ ಪೊಲೀಸರು ತಣ್ಣಿರೆರಚಿದ್ದಾರೆ. ಸದ್ಯ ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಇವರು ಯಾರು ಧನಿಕರಲ್ಲ. ಯಾವ ಲಾಭಿಗಾಗಿ ಹೀಗೆ ಬೈಕ್ ವಶಕ್ಕೆ ಪಡೆಯುತ್ತೀದ್ದೀರಿ ಪೊಲೀಸರೇ ಎಂದು ಪ್ರಶ್ನಿಸಲಾಗಿದೆ. ಬಡವರ ಮೇಲಿನ ನಿಮ್ಮ ಈ ಕ್ರಮಕ್ಕೆ ಸರ್ಕಾರದ ಒಪ್ಪಿಗೆ ಇದೆಯಾ? ಎಂದು ಕೇಳಲಾಗಿದೆ. ಈ ಕುರಿತು @sanatan_kannada ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಬಡವರ ಪರ ಧ್ವನಿ ಎತ್ತಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಈ ದಿನ ಮಾನ್ಯ ಮೇಲಾಧಿಕಾರಿಗಳ ಆದೇಶದ ಮೇರೆಗೆ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿರುವ 250 E-commerce ದ್ವಿಚಕ್ರ ವಾಹನಗಳನ್ನು ಪೊಲೀಸ್ ನೋಟಿಸ್ ನೀಡಿ ಜಪ್ತಿ ಮಾಡಲಾಗಿರುತ್ತದೆ. @blrcitytraffic @Jointcptraffic @DCPSouthTrBCP @acpsouthtrf pic.twitter.com/Q5lgOgCZJx
— HULIMAVU TRAFFIC BTP (@hulimavutrfps) March 1, 2025
ಇಲಾಖೆ ಗಡುವು ನೀಡಲಿ: ಕಂಪನಿಗಳು ಸಹಕರಿಸಬೇಕು
ವೈಟ್ ಬೋರ್ಡ್ ಇರುವ ಡೆಲಿವರಿ ಬಾಯ್‌ಗಳ ತಮ್ಮ ವಾಹನಗಳನ್ನು ಹಳದಿ ಬೋರ್ಡ್ ಗೆ ಪರಿವರ್ತಿಸಿಕೊಳ್ಳಲು, ಉದ್ಯೋಗದಾತ ಕಂಪನಿಗಳಾದ ಸ್ವಿಗ್ಗಿ, ಜೊಮ್ಯಾಟೊ, ರಾಪಿಡೊ, ಉಬರ್, ಲಿಂಕಿಂಗ್, ಜೆಪ್ಟೊ, ಫ್ಲಿಪ್‌ಕಾರ್ಟ್ ಇತ್ಯಾದಿಗಳಿಗೆ ಕಂಪನಿಯು ಬೆಂಬಲ ನೀಡಬೇಕಿದೆ. ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗಿಗಳನ್ನು ಕೈ ಬಿಡಬಾರದು. ನಗರಕ್ಕೆ ಡೆಲಿವರಿ ಬಾಯ್‌ಗಳ ಅಗತ್ಯತೆ ಇದೆ.
ಏನು ಮಾಡುತ್ತಿದ್ದೀರ? @blrcitytraffic @CPBlr @CMofKarnataka ಗಿಗ್ ಗಾಗಿ ಕೆಲಸ ಮಾಡುವವರು ಯಾರೂ ಕೂಡ ಧನಿಕರಲ್ಲ, ಯಾವ ಲಾಭಿಗಾಗಿ ಈ ಕೆಲಸ? ಬಡವರ ಮೇಲೆ ನಿಮ್ಮ ಈ ಕ್ರಮಕ್ಕೆ ಸರ್ಕಾರದ ಒಪ್ಪಿಗೆಯಿದೆಯೇ? @nitin_gadkari Sir Kindly help these gig workers. Bangalore cops are seizing all white board two wheelers. pic.twitter.com/S5zOe4JYfy
— ಸನಾತನ (@sanatan_kannada) March 1, 2025
ಈ ಡೆಲಿವರಿ ಬಾಯ್ ಉದ್ಯೋಗಿಗಳಿಗೆ ಕನಿಷ್ಠ ವೇತನವನ್ನು ನೀಡಬೇಕು. ಇನ್ನೂ ಪೊಲೀಸ್ ಇಲಾಖೆ ಕ್ರಮದಿಂದ ಹಿಂದೆ ಸರಿದ ಹಳದಿ ನಂಬರ್ ಪ್ಲೇಟ್ ಪರಿವರ್ತನೆಗಾಗಿ ಗಡುವು ವಿಧಿಸಬೇಕು, ಇದ್ದಕ್ಕಿದ್ದಂತೆ ಅವರು ಈ ವ್ಯಕ್ತಿಗಳಿಗೆ ದಂಡ ವಿಧಿಸಲು ಸಾಧ್ಯವಿಲ್ಲ. ಇದೊಂದು ಅಮಾನವೀಯ ನಡೆ ಎಂದು ಮ್ಯಾಂಗೂಸ್ ಹೆಸರಿನ @ManjunathR64546 ಅವರು ಪ್ರತಿಕ್ರಿಯಿಸಿದ್ದಾರೆ.
ಪೊಲೀಸ್ ಇಲಾಖೆ ಆದೇಶ: ಬೈಕ್ ಜಪ್ತಿ
ಇನ್ನೂ ಫುಡ್ ಡೆಲಿವರಿ ಬಾಯ್‌ಗಳ ಬೈಕ್‌ಗಳನ್ನು ಆಯಾ ಪೊಲೀಸ್ ಠಾಣೆ ಸರಹದ್ದಿನಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಮೇಲಾಧಿಕಾರಿಗಳ ಆದೇಶದಂತೆ ನಗರದ ಎಲ್ಲ ಕಡೆಗಳಲ್ಲಿ ನಿಯಮ ಉಲ್ಲಂಘಿಸುವ E-commerce ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಸದ್ಯ ಜಪ್ತಿ ಮಾಡಿದ ವಾಹನಗಳಿಗೆ, ಸವಾರರಿಗೆ ನೋಟಿಸ್ ನೀಡಲಾಗಿದೆ ಎಂದು ಹುಳಿಮಾವು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications