ಯಶವಂತಪುರ ರೈಲು ನಿಲ್ದಾಣ ಪುನರಾಭಿವೃದ್ಧಿಗೆ ಚಾಲನೆ, ಪೂರ್ಣ ಯಾವಾಗ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ವೇಗ ಪಡೆದಿದ್ದು, ಸಿವಿಲ್ ಮತ್ತು ನಿರ್ಮಾಣ ಕಾರ್ಯಗಳು ಈಗ ಚುರುಕುಗೊಂಡಿವೆ.
ಹಂತ-1 ರ ಭಾಗವಾಗಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಒಂದರ ಪೂರ್ವ ಭಾಗದಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಏತನ್ಮಧ್ಯೆ ಮಲ್ಟಿ- ಲೆವೆಲ್ ಕಾರ್ ಪಾರ್ಕಿಂಗ್ (ಗ್ರೌಂಡ್+5), ಮತ್ತು ಆಗಮನ ಹಾಗೂ ನಿರ್ಗಮನ ಪ್ಲಾಜಾದೊಂದಿಗೆ ಎತ್ತರಿಸಿದ ರಸ್ತೆಗಾಗಿ ಇಳಿಜಾರುಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ಮಾಡಿದೆ.

ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಯು ವಿಮಾನ ನಿಲ್ದಾಣ ಮಾದರಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ. ಈ ಯೋಜನೆಯು ಪ್ರಯಾಣಿಕರಿಗೆ ಉತ್ತಮ, ಆರಾಮದಾಯಕ ಮತ್ತು ತಡೆರಹಿತ ಅನುಭವವನ್ನು ಒದಗಿಸುತ್ತದೆ.
ರೈಲು ನಿಲ್ದಾಣದಲ್ಲಿ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ವಾಹನಗಳಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಕೇಂದ್ರಗಳ ರಚನಾ ಕಲ್ಪನೆ ಇದೆ. ನಿಲ್ದಾಣವು ದೊಡ್ಡ ಏರ್ ಕಾನ್ಕೋರ್ಸ್ (14,800 ಚದರ ಮೀಟರ್ ಗಾತ್ರದಲ್ಲಿ) ಸಹ ಹೊಂದಿದ್ದು, ಇದು ಫುಡ್ ಕೋರ್ಟ್‌ಗಳು, ಚಿಲ್ಲರೆ ಅಂಗಡಿಗಳು, ವ್ಯಾಪಾರ ಕೇಂದ್ರಗಳು, ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಕಾಯುವ ಕೋಣೆ ಮಾದರಿ ಕೊಠಡಿಗಳು ಇರುತ್ತದೆ ಎಂದು ತಿಳಿಸಲಾಗಿದೆ.
ಮಳೆ ನೀರು ಕೊಯ್ಲು, ಒಳಚರಂಡಿ ನೀರು ಸಂಸ್ಕರಣಾ ಘಟಕಗಳು, ಎಲ್ಇಡಿ ದೀಪಗಳನ್ನು ಅಳವಡಿಸುವುದು ಮತ್ತು ಇತರ ಗ್ರೀನ್ ಪ್ರಾಜೆಕ್ಟ್ ಯೋಜನೆ ಮೂಲಕ ಹಸಿರು-ಕಟ್ಟಡದ ನಿಯಮಗಳ ಪ್ರಕಾರ ನಿಲ್ದಾಣವನ್ನು ನಿರ್ಮಿಸಲಾಗುವುದು. ಸಾಕಷ್ಟು ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಅನುಮತಿಸಲು ಸಾಕಷ್ಟು ಅವಕಾಶವನ್ನು ಸಹ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ನಿಲ್ದಾಣವು ಟ್ರ್ಯಾಕ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಮೇಲೆ ನಿರ್ಮಿಸಲಾದ ಕಾನ್ಕೋರ್ಸ್ ಅನ್ನು ಸಹ ಹೊಂದಿರುತ್ತದೆ. ಇದು ರೈಲು ಪ್ರಯಾಣಿಕರಿಗೆ ಸಂಪರ್ಕವನ್ನು ಸುಧಾರಿಸಲು ಹೊಸ ನಿರ್ಗಮನ ಕಟ್ಟಡವನ್ನು ಸಂಪರ್ಕಿಸುತ್ತದೆ.
ಹಂತ-1 ಅಂದರೆ ಪೂರ್ವ ಭಾಗದ ಕಾಮಗಾರಿ ಪೂರ್ಣಗೊಂಡ ನಂತರ ಪಶ್ಚಿಮ ಭಾಗದಲ್ಲಿ ಯಶವಂತಪುರ ಮೆಟ್ರೋ ಬಳಿ ಕಾಮಗಾರಿ ಆರಂಭವಾಗಲಿದೆ. ಯಶವಂತಪುರ ನಿಲ್ದಾಣದ ಸಂಪೂರ್ಣ ಪುನರಾಭಿವೃದ್ಧಿ ಕಾರ್ಯವನ್ನು ಜುಲೈ 2025 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
M/s ಗಿರ್ಧಾರಿ ಲಾಲ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ದೆಹಲಿಯು ಈ ನಿಲ್ದಾಣದ ಮರುಅಭಿವೃದ್ಧಿಯ ಗುತ್ತಿಗೆಯನ್ನು ರೂ. 380 ಕೋಟಿಗೆ ಪಡೆದಿದೆ. ಜೂನ್ 2022 ರಲ್ಲಿ ಈ ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications