RV Road-Bommasandra Metro Line: ಹಳದಿ ಮಾರ್ಗದಲ್ಲಿ ಜನ ಸಂಚಾರಕ್ಕೆ ಸಮಯ ಫಿಕ್ಸ್! ಟಿಕೆಟ್ ದರ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಪ್ರಯಾಣಿಕರ ಬಹುನಿರೀಕ್ಷೆ ನಮ್ಮ ಮೆಟ್ರೋ ಹಳದಿ ಮಾರ್ಗ ಇಂದು ಲೋಕಾರ್ಪಣೆಗೊಂಡಿದೆ. ಆರ್‌ವಿ.ರಸ್ತೆ-ಬೊಮ್ಮಸಂದ್ರವರೆಗಿನ 19 ಕಿಲೋ ಮೀಟರ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ಹಾಗಾದ್ರೆ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಆರಂಭ ಯಾವಾಗ? ಟಿಕೆಟ್ ದರ ಎಷ್ಟು? ವಾರದ ದಿನ, ವಾರಾಂತ್ಯದ ಮೆಟ್ರೋ ಓಡಾಟದ ಸಮಯದ ವಿವರ ಇಲ್ಲಿದೆ.
ಬೆಂಗಳೂರಿ ಆರ್‌ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಸೋಮವಾರ 2025 ಆಗಸ್ಟ್ 11ರಂದು ಬೆಳಗ್ಗೆಯಿಂದಲೇ ಶುರುವಾಗಲಿದೆ. ಈ ಮಾರ್ಗದ ರೈಲು ಸಂಚಾರದ ವೇಳಾಪಟ್ಟಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿಗದಿಪಡಿಸಲಾಗಿದೆ.

ಸೋಮವಾರದಿಂದ ಶನಿವಾರದವರೆಗೆ ವಾರದ ಎಲ್ಲಾ ದಿನಗಳಲ್ಲಿ, ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣ ಸಮಯವು ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರುತ್ತದೆ. ಒಟ್ಟು 16 ನಿಲ್ದಾಣಗಳಿವೆ, ಇದರಲ್ಲಿ ಎರಡು ಟರ್ಮಿನಲ್‌ಗಳು ಸೇರಿವೆ.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42 ಕ್ಕೆ ಮತ್ತು ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಹೊರಡುತ್ತದೆ. ಬೆಳಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10.00 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಸೇವೆ ಸಮಯ, ಟಿಕೆಟ್ ದರ
ಭಾನುವಾರ ರಜಾ ದಿನ ಇದ್ದು ಅಂದು ಮೆಟ್ರೋ ಸೇವೆಗಳು ಬೆಳಗ್ಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗುತ್ತವೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ರೂ.60/-. ಟೋಕನ್ ಗಳು, NCMC ಕಾರ್ಡ್ ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್ ಗಳು, QR ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿರುತ್ತವೆ.
ಈಗಾಗಲೇ ಇರುವ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಕಾರ್ಯ ನಿರ್ವಹಣೆ ಇರಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಐಫೋನ್ ಬಳಸುವ ಬಿಎಂಆರ್‌ಸಿಎಲ್ ಪ್ರಯಾಣಿಕರು 2025ರ ಆಗಸ್ಟ್ 11ರಿಂದ ಆಪಲ್ ಸ್ಟೋರ್‌ನಿಂದ ನಮ್ಮ ಮೆಟ್ರೋ ಅಧಿಕೃತ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಹಾಗೂ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಳದಿ ಮಾರ್ಗದಲ್ಲಿ ಹೆಚ್ಚು ರೈಲು ಸೆಟ್‌ಗಳನ್ನು ಸೇವೆಗೆ ಸೇರಿಸುತ್ತಿದ್ದಂತೆ ರೈಲು ಸಂಚಾರದ ಅವಧಿಯನ್ನು ಹೆಚ್ಚಿಸಲಾಗುವುದು. ಸದ್ಯ ಮೂರು ರೈಲುಗಳು ಸಂಚಾರ ನಡೆಸಲಿವೆ. ಆಗಸ್ಟ್ ಕೊನೆವಾರ ನಾಲ್ಕನೇ ರೈಲು ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ.












Click it and Unblock the Notifications