Year Ender 2025: ನಿರೀಕ್ಷೆಯಷ್ಟು ಆಗದ ನಮ್ಮ ಮೆಟ್ರೋ ವಿಸ್ತರಣೆ, BMRCL ಸಾಧಿಸಿದ್ದೆಷ್ಟು?
Bengaluru Metro: ಬೆಂಗಳೂರಿನ ಸುಮಾರು 10 ಲಕ್ಷ ಮಂದಿ ಪ್ರಯಾಣಿಕರು ನಿತ್ಯ ನಮ್ಮ ಮೆಟ್ರೋ ಸಾರಿಗೆ ಅವಲಂಬಿಸಿದ್ದಾರೆ. ಅಷ್ಟ ದಿಕ್ಕುಗಳಿಗೂ ವಿಸ್ತರಣೆಗೆ ಉದ್ದೇಶಿಸಲಾಗಿರುವ ಮೆಟ್ರೋ ಜಾಲ ಈ 2025ರಲ್ಲಿ ನಿರೀಕ್ಷೆಯಷ್ಟು ವಿಸ್ತರಣೆ ಆಗಲಿಲ್ಲ. ಹಾಗಾದರೆ ಈ ವರ್ಷ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಜಾಲ ವಿಸ್ತರಣೆಯಲ್ಲಿ ಸಾಧಿಸಿದ್ದೆಷ್ಟು? ಉದ್ದೇಶಿತ ಮಾರ್ಗಗಳು ಯಾವುವು, ತೆರೆಯಲು ಸಜ್ಜಾಗಿರುವ ಮಾರ್ಗಗಳು ಯಾವುವು?
ಹೊಸ ಮಾರ್ಗಗಳ ಅನುಮೋದನೆ ಬೆನ್ನಲ್ಲೆ, ಡಿಪಿಆರ್, ಕಾರ್ಯಸಾಧ್ಯತಾ ವರದಿ ಕೆಲಸಗಳಿಗೆ ನಮ್ಮ ಮೆಟ್ರೋ ವೇಗ ನೀಡಿದೆ. 2026ರಲ್ಲಿ ಒಟ್ಟು 176 ಕಿಲೋ ಮೀಟರ್ ವರೆಗೆ ಮೆಟ್ರೋ ಜಾಲ ವಿಸ್ತರಿಸುವ ಗುರಿ ಹೊಂದಲಾಗಿದೆ.

2041ರ ಹೊತ್ತಿಗೆ 314 ಕಿಲೋ ಮೀಟರ್ ಗುರಿ ಇಟ್ಟುಕೊಳ್ಳಲಾಗಿದೆ. ಹಾಗಾದರೆ ಗುರಿಯಲ್ಲಿ ಈವರೆಗೆ ಎಷ್ಟು ಸಾಧನೆ ಆಗಿದೆ ಎಂದು ನೋಡಿದರೆ ನಿರೀಕ್ಷೆಯಷ್ಟು ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆ ಆಗಿಲ್ಲ. ಎರಡು ವರ್ಷಗಳ ಹಿಂದೆಯೇ ತೆರೆಯಬೇಕಿದ್ದ 19.4 ಕಿಲೋ ಮೀಟರ್ ಉದ್ದದ ಬೊಮ್ಮಸಂದ್ರ-ಆರ್.ವಿ.ರಸ್ತೆ ಹಳದಿ ಮೆಟ್ರೋ ಮಾರ್ಗವು ಈ ವರ್ಷ ಆಗಸ್ಟ್ 10ರಂದು ಲೋಕಾರ್ಪಣೆಗೊಂಡಿತು. ಇದರ ಹೊರತು ಮತ್ತಾವುದೇ ಮಾರ್ಗ ವಿಸ್ತರಣೆ ಆಗಿಲ್ಲ. ಈ ವಿಚಾರದಲ್ಲಿ ಬಿಎಂಆರ್‌ಸಿಎಲ್ ತೀರಾ ಕಡಿಮೆ ಸಾಧನೆ ಮಾಡಿದೆ ಎನ್ನಬಹುದು.
ಹಸಿರು ಮಾರ್ಗ, ನೇರಳೆ ಮಾರ್ಗ ವಿಸ್ತರಣೆ
ಕಳೆದ ನವೆಂಬರ್ ತಿಂಗಳಲ್ಲಿ ಹಸಿರು ಮಾರ್ಗದ ಕೊನೆ ನಿಲ್ದಾಣವಾಗಿದ್ದ ನಾಗಸಂದ್ರದಿಂದ ಮಾದವರವರೆಗೆ 3.5 ಕಿಲೋ ಮೀಟರ್ ವಿಸ್ತರಣೆ ಆಗಿತ್ತು. ಅದಕ್ಕೂ ಹಿಂದಿನ ವರ್ಷ 2023ರಲ್ಲಿ ಮೆಟ್ರೋ ನೇರಳೆ ಮಾರ್ಗವು ಚಲಘಟ್ಟ, ವೈಟ್‌ಫಿಲ್ಡ್ ವರೆಗೆ ವಿಸ್ತರಣೆ ಆಗಿತ್ತು. ಈ ವರ್ಷ ಬಾಕಿ ಮಾರ್ಗವನ್ನೆ ವಿಸ್ತರಣೆ ಮಾಡಿದೆ. ಈ ವಿಳಂಬ ನೀತಿ ಅಥವಾ ಕಾಮಗಾರಿಗೆ ಎದುರಾಗುವ ಸವಾಲುಗಳ ನಿವಾರಣೆ ತಡವಾದಲ್ಲಿ 2026ರ ಜಾಲ ವಿಸ್ತರಣೆ ಮುಟ್ಟುವುದು ಕಷ್ಟವಾಗಲಿದೆ.
ಮೆಟ್ರೋ ಗುಲಾಬಿ ಮಾರ್ಗ ಓಪನ್..
ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಇರುವ ನಮ್ಮ ಮೆಟ್ರೋ ಪಿಂಕ್ ಲೈನ್ 2026 ರಲ್ಲಿ ಎರಡು ಹಂತಗಳಲ್ಲಿ ತೆರೆಯಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. 2026 ರ ಮೇ ತಿಂಗಳಲ್ಲಿ ವೇಳೆಗೆ ಎತ್ತರದ ತಾವರೆಕೆರೆ-ಕಾಲೇನ ಅಗ್ರಹಾರವರೆಗಿನ ಲೈನ್ ಅನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಿದೆ. ನಂತರ ಡಿಸೆಂಬರ್ 2026 ರ ಹೊತ್ತಿಗೆ ಈ 21.5 ಕಿಲೋ ಮೀಟರ್‌ನ ಈ ಗುಲಾಬಿ ಮಾರ್ಗವು ಪೂರ್ಣವಾಗಿ ತೆರೆಯುವ ನಿರೀಕ್ಷೆ ಇದೆ. ರೈಲುಗಳ ಪೂರೈಕೆ ವಿಳಂಬವಾದರೆ ಹೊಸ ಮಾರ್ಗ ತೆರೆಯುವುದು ನಿಧಾನವಾಗಬಹುದು. ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಟಿಟಾಘರ್‌ನಿಂದ ತಿಂಗಳಿಗೆ ಒಂದರಂತೆ ಹೊಸ ರೈಲು ಬೋಗಿಗಳ ಸೆಟ್ ಬೆಂಗಳೂರಿಗೆ ರವಾನಿಸುವ ಬಗ್ಗೆ ಕಂಪನಿ ಈಗಾಗಲೇ ಭರವಸೆ ನೀಡಿದೆ.












Click it and Unblock the Notifications