ಕಾರ್ಪೊರೇಟ್ ಕೆಲಸಕ್ಕೆ ಟಾಟಾ ಎಂದ ಯುವತಿ, 18 ತಿಂಗಳಲ್ಲಿ ₹7.2 ಲಕ್ಷ ಸೇವಿಂಗ್ಸ್! ಕೆಲ್ಸ ಬಿಡುವ ಮುನ್ನ ನೀವು ಈ ಪ್ಲಾನ್ ಮಾಡಿ

ಪ್ರಸ್ತುತ ದಿನಗಳಲ್ಲಿ ಕಾರ್ಪೊರೇಟ್ ಜಗತ್ತಿನ ಕೆಲಸಗಳು ಎಷ್ಟರ ಮಟ್ಟಿಗೆ ಒತ್ತಡದಿಂದ ಕೂಡಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಟಾರ್ಗೆಟ್, ಡೆಡ್‌ಲೈನ್, ಮೀಟಿಂಗ್‌ಗಳ ನಡುವೆ ಸಿಲುಕಿ ಅನೇಕರು ತಮ್ಮ ವೈಯಕ್ತಿಕ ಜೀವನ ಹಾಗೂ ಆರೋಗ್ಯವನ್ನ ಹಾಳುಮಾಡಿಕೊಳ್ಳುತ್ತಿದ್ದಾರೆ.

ಹೀಗೆ ದಿನಕ್ಕೆ 15 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಿ, ಒತ್ತಡ ತಾಳಲಾರದೆ ಆಸ್ಪತ್ರೆಗೆ ದಾಖಲಾಗಿದ್ದ 33 ವರ್ಷದ ಮಹಿಳೆಯೊಬ್ಬರು, ತನ್ನ ಕಾರ್ಪೊರೇಟ್ ಉದ್ಯೋಗಕ್ಕೆ ಶಾಶ್ವತವಾಗಿ ಗುಡ್‌ಬೈ ಹೇಳಿದ್ದಾರೆ. ಆದರೆ, ಕೆಲಸ ಬಿಡುವ ಮುನ್ನ ಆಕೆ ಮಾಡಿದ ಸ್ಮಾರ್ಟ್ ಪ್ಲಾನ್ ಇದೀಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Woman Quits Toxic Corporate Job After Building Rs 7 2 Lakh Exit Fund in 18 Months Here is How

ತನ್ನ 30ನೇ ವಯಸ್ಸಿನಲ್ಲಿ ಆಫೀಸ್ಸಿನಲ್ಲಿ ತೀವ್ರ ಬರ್ನ್‌ಔಟ್ ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದ ರಿಯಾ ಎಂಬುವವರು, ಈ ಕಾರ್ಪೊರೇಟ್ ಕೆಲಸದಿಂದ ಹೊರಬರಲೇಬೇಕೆಂದು ದೃಢ ನಿರ್ಧಾರ ಮಾಡಿದ್ದರು. ಆದರೆ, ಯಾವುದೇ ಆರ್ಥಿಕ ಭದ್ರತೆ ಇಲ್ಲದೆ ಹಠಾತ್ತನೆ ರೆಸಿಗ್ನೇಶನ್‌ ನೀಡುವುದು ಮೂರ್ಖತನ ಎಂದು ಭಾವಿಸಿದ ಆಕೆ, ಹೊಸ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳುವವರೆಗೆ ತನ್ನನ್ನು ತಾನು ಕಾಪಾಡಿಕೊಳ್ಳಲು ಒಂದು ಎಕ್ಸಿಟ್ ಫಂಡ್ ನಿರ್ಮಿಸಲು ಮುಂದಾದರು.

ಎಕ್ಸಿಟ್ ಫಂಡ್ ಯೋಜನೆ

ತನ್ನ ಕೆಲಸಕ್ಕೆ ರಾಜೀನಾಮೆ ನೀಡುವ ಮುನ್ನ ರಿಯಾ ಅವರು 18 ತಿಂಗಳ ಕಾಲಾವಕಾಶವನ್ನ ತೆಗೆದುಕೊಂಡರು. ಈ ಅವಧಿಯಲ್ಲಿ ಪ್ರತಿ ತಿಂಗಳು ಬರೋಬ್ಬರಿ 40,000 ರೂಪಾಯಿಗಳನ್ನ ಉಳಿತಾಯ ಮಾಡುವ ಗುರಿಯನ್ನು ಹೊಂದಿದ್ದರು. 18 ತಿಂಗಳುಗಳಲ್ಲಿ ಆಕೆ ಒಟ್ಟು 7.2 ಲಕ್ಷ ರೂಪಾಯಿಗಳ ಎಕ್ಸಿಟ್ ಫಂಡ್ ಅನ್ನು ಕೂಡಿಟ್ಟರು. ಈ ಹಣವನ್ನು ಉಳಿಸಲು ಆಕೆ ತನ್ನ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನ ಮಾಡಿಕೊಳ್ಳಬೇಕಾಯಿತು.

ರಿಯಾ ಅನುಸರಿಸಿದ ಹಣ ಉಳಿತಾಯದ ಟಿಪ್ಸ್

ರಿಯಾ ಮೊದಲು ಕತ್ತರಿ ಹಾಕಿದ್ದು ತನ್ನ ಹೊರಗಿನ ಊಟದ ಅಭ್ಯಾಸಕ್ಕೆ. ರೆಸ್ಟೋರೆಂಟ್‌ಗಳಿಗೆ ಹೋಗುವುದು, ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದು ಹಾಗೂ ಕಾಫಿ ಶಾಪ್‌ಗಳಿಗೆ ಭೇಟಿ ನೀಡುವುದನ್ನ ಸಂಪೂರ್ಣವಾಗಿ ನಿಲ್ಲಿಸಿದರು. ಪ್ರತಿದಿನ ಮನೆಯಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುವ ಮೂಲಕ ತಿಂಗಳಿಗೆ ಸುಮಾರು 20,000 ರೂಪಾಯಿಗಳನ್ನ ಉಳಿತಾಯ ಮಾಡಿದರು.

ಇದರ ಜೊತೆಗೆ, ನೆಟ್‌ಫ್ಲಿಕ್ಸ್, ಸ್ಪಾಟಿಫೈ ಸೇರಿದಂತೆ ಓಟಿಟಿ ಮತ್ತು ಇತರ ಆ್ಯಪ್‌ಗಳ ಸಬ್‌ಸ್ಕ್ರಿಪ್ಶನ್‌ಗಳನ್ನ ರದ್ದುಗೊಳಿಸಿದರು. ತಾನು ಇವುಗಳನ್ನ ಹೆಚ್ಚಾಗಿ ಬಳಸುತ್ತಿಲ್ಲ ಎಂಬುದನ್ನು ಅರಿತ ಆಕೆ, ಇದರಿಂದ ತಿಂಗಳಿಗೆ 5,000 ರೂಪಾಯಿ ಉಳಿಸಿದರು.

ಇನ್ನು ಶಾಪಿಂಗ್ ವಿಚಾರಕ್ಕೆ ಬಂದರೆ, ಸತತ 18 ತಿಂಗಳ ಕಾಲ ರಿಯಾ ಯಾವುದೇ ಹೊಸ ಬಟ್ಟೆ ಅಥವಾ ಅನಗತ್ಯ ವಸ್ತುಗಳನ್ನ ಖರೀದಿಸಲಿಲ್ಲ. ತನ್ನಲ್ಲಿದ್ದ ಹಳೆಯ ಬಟ್ಟೆಗಳನ್ನೇ ಬಳಸುವ ಮೂಲಕ ತಿಂಗಳಿಗೆ ಅಂದಾಜು 10,000 ರೂಪಾಯಿಗಳನ್ನ ಉಳಿತಾಯ ಮಾಡಿದರು. ತಮಗೆ ಎಷ್ಟು ಬಟ್ಟೆಗಳ ಅವಶ್ಯಕತೆ ಇದೆ ಎಂಬುದನ್ನ ಅರಿತರೆ ಇದು ದೊಡ್ಡ ತ್ಯಾಗ ಎನಿಸುವುದಿಲ್ಲ ಎಂಬುದು ಆಕೆಯ ಅಭಿಪ್ರಾಯ.

ಸಾಮಾಜಿಕ ಜೀವನಕ್ಕೆ ಬ್ರೇಕ್

ಹಣ ಉಳಿಸುವ ಭರದಲ್ಲಿ ರಿಯಾ ತೆಗೆದುಕೊಂಡ ಅತಿ ಕಠಿಣ ನಿರ್ಧಾರವೆಂದರೆ, ವೀಕೆಂಡ್ ಟ್ರಿಪ್ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು. ಪ್ರವಾಸದ ಮೇಲಿನ ಆಸಕ್ತಿಯನ್ನ ಬದಿಗೊತ್ತಿ ತಿಂಗಳಿಗೆ 2,000 ರೂಪಾಯಿ ಉಳಿಸಿದರು. ಹಾಗೆಯೇ, ಮದುವೆ, ಹುಟ್ಟುಹಬ್ಬದ ಪಾರ್ಟಿ, ಬ್ರಂಚ್‌ಗಳಂತಹ ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿ, ತಿಂಗಳಿಗೆ ಮತ್ತೊಂದು 3,000 ರೂಪಾಯಿಗಳನ್ನ ಉಳಿಸಿದರು. ಪ್ರತಿಯೊಂದು ರೂಪಾಯಿ ಹಾಗೂ ಪ್ರತಿಯೊಂದು ಗಂಟೆಯೂ ಆಕೆಗೆ ಮುಖ್ಯವಾಗಿತ್ತು.

ಆಕೆಯ ಈ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಕೇವಲ 3,000 ರೂಪಾಯಿಗಾಗಿ ಕುಟುಂಬದ ಮದುವೆ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಆದರೆ, ರಿಯಾ ಅವರ ಪ್ರಕಾರ, ಈ ತ್ಯಾಗಗಳು ಕೇವಲ ಜೀವನಶೈಲಿಯನ್ನ ಬಿಟ್ಟುಕೊಟ್ಟಿದ್ದಲ್ಲ, ಬದಲಾಗಿ ತನ್ನ ನೆಮ್ಮದಿಯನ್ನ ಕಸಿದುಕೊಂಡಿದ್ದ ಕೆಲಸದಿಂದ ಮುಕ್ತಿ ಪಡೆಯಲು ತಾನು ಖರೀದಿಸಿದ 'ಸ್ವಾತಂತ್ರ್ಯ'ವಾಗಿತ್ತು.

ಕೆಲಸ ಬಿಡುವ ನಿರ್ಧಾರ ತೆಗೆದುಕೊಂಡು ಎರಡು ವರ್ಷಗಳು ಕಳೆದಿವೆ. ಕಠಿಣ ಶ್ರಮ ಹಾಗೂ ಆರ್ಥಿಕ ಶಿಸ್ತಿನಿಂದಾಗಿ ರಿಯಾ ಇಂದು ನಾಲ್ಕು ವಿಭಿನ್ನ ಮೂಲಗಳಿಂದ ಆದಾಯ ಗಳಿಸುತ್ತಿದ್ದು, ತನ್ನ ಸ್ವಂತ ಬದುಕು ಹಾಗೂ ವೃತ್ತಿಜೀವನಕ್ಕೆ ತಾನೇ ಬಾಸ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+