ಮನೆಯಲ್ಲೊಬ್ಬ ಮನದಲ್ಲೊಬ್ಬ ಎಂದಾಕೆ ಕೃಷ್ಣನ ಜನ್ಮಸ್ಥಾನ ಸೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಆಗಸ್ಟ್ 19: ಪ್ರೀತಿ , ಕಾಮದ ಅಮಲಿನಲ್ಲಿ ಬಿದ್ದವರಿಗೆ ಜಗತ್ತಿನ ಎಲ್ಲಕ್ಕೂ ಮಿಗಿಲಾದದ್ದು ಅದೊಂದೆ ಎಂಬ ಭಾವನೆ ಮೂಡಿಬಿಡುತ್ತದೆ. ಪ್ರೀತಿಯ ಹೆಸರಿನಲ್ಲಿ ಸಂಬಂಧವನನ್ನು ಬೆಸೆದು ಅರಿವು ಮೂಡುವ ಮುನ್ನವೇ ಅಪಾಯವನ್ನು ತಂದಿಟ್ಟುಕೊಳ್ಳಲಿದ್ದಾರೆ. ಮದುವೆಯಾಗಿದ್ದ ಮಹಿಳೆ ಪ್ರೀತಿಸಿದವನಿಗೆ ಗಂಡನನ್ನು ಕೊಲ್ಲುವಂತೆ ಸುಪಾರಿ ಕೊಟ್ಟು ಬಂಧನವಾಗಿದ್ದಾಳೆ. ಅತ್ತ ಪ್ರಿಯತಮನು ಇಲ್ಲದೇ ಪತಿಯು ಇಲ್ಲದೇ ಕೃಷ್ಣ ಜನ್ಮಸ್ಥಾನವನ್ನು ಸೇರಿದ್ದಾಳೆ.
ಲವ್ ಸೆಕ್ಸ್ ಅನ್ನೋ ಲೋಕದಲ್ಲಿ ಬಿದ್ದವರಿಗೆ ಜಗವೆಲ್ಲಾ ಕುರುಡಾಗಿ ಬಿಡುತ್ತೆ. ಮನೆಯವರೆಲ್ಲಾ ಸೇರಿ ಮಗಳು ನೆಮ್ಮದಿಯಾಗಿ ಬದುಕಲಿ ಎಂದು ಮದುವೆಯನ್ನು ಮಾಡಿದ್ದರು. ಆದರೆ ಮನೆಯಲ್ಲೊಬ್ಬ ಮನದಲ್ಲೊಬ್ಬ ಎಂದು ಅವಳೊಬ್ಬಳು ಜೀವನ ನಡೆಸುತ್ತಿದ್ದಳು. ಗುಟ್ಟು ಗುಟ್ಟಾಗಿ ಜೀವನ ನಡೆಸುತ್ತಿದ್ದರೆ ಜೈಲಿಗೆ ಹೋಗುವ ಪ್ರಮೇಯ ಬರುತ್ತಿರಲಿಲ್ಲವೇನೋ, ಆದರೆ ತನ್ನ ಪ್ರಿಯಕರನೊಂದಿಗಿನ ಕಾಮದಾಟಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಪತಿಯ ಕೊಲೆಗೆ ಸುಪಾರಿ ಕೊಟ್ಟು ಸಿಕ್ಕಿಬಿದ್ದಿದ್ದಾಳೆ.
ಸರಸ ಜನನ ವಿರಸ ಮರಣ ಸಮರಸವೇ ಜೀವನ ಎಂಬ ಮಾತಿನಂತೆ ಪತಿ ಪತ್ನಿ ಅನುಸರಿಸಿಕೊಂಡು ಹೋಗಿದ್ದರೆ ಅನಾಹುತವೇ ನಡೆಯುತ್ತಿರಲಿಲ್ಲ. ತಾನೊಂದು ಬಗೆದರೇ ವಿಧಿಯ ಆಟವೇ ಬೇರೆಯಿರುತ್ತೆ ಎಂಬುದಕ್ಕೆ ಈ ಸ್ಟೋರಿಯೇ ಬೆಸ್ಟ್ ಎಗ್ಸಾಂಪಲ್ ಎನ್ನಬಹುದು. ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ, ಸುಪಾರಿ ಪಡೆದ ಪ್ರಿಯಕರ ತನ್ನ ಪ್ರಿಯತಮೆಯ ಪತಿಯನ್ನು ಕೊಂದೇ ಬಿಟ್ಟರು ಎಂದು ಭಾವಿಸಿ ನೇಣಿಗೆ ಶರಣಾಗಿಬಿಟ್ಟಿದ್ದ.

ಸ್ವರ್ಗವನ್ನೇ ಮಂಚದ ಮೇಲೆ ಇಳಿಸುವ ಕನಸು
'ಕಾಮಾತುರಾಣಂ ನ ಭಯಂ ನ ಲಜ್ಜಾ' ಎಂಬ ಸಂಸ್ಕೃತ ನುಡಿ ಅಕ್ಷರ ಸತ್ಯವಾದದ್ದು. ಕಾಮ ಎಂದರೇ ಹಾಗೇ ಕಾಮತುರರಾದವರಿಗೆ ಭಯ ಮತ್ತು ಲಜ್ಜೆ ಇರುವುದಿಲ್ಲ. ಗುರುವಿಲ್ಲದೇ ಕಲಿಯುವ ಗುರಿಯಿಲ್ಲದೇ ಸಾಗುವ ಈ ಕಾಮಪುರಾಣದಿಂದ ಉಂಟಾಗುವ ಅನಾಹುತಗಳೇ ಹೆಚ್ಚು. ನವೀನ್ ಹಾಗು ಅನುಪಲ್ಲವಿ ದಂಪತಿಗಳು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಹಿಮಂತ ಎಂಬಾತನ ಜೊತೆ ಅನುಪಲ್ಲವಿ ಡ್ಯೂಯೆಟ್ ಪ್ರಾರಂಭವಾಗಿತ್ತು. ತನ್ನ ಲವ್ವಿ ಡವ್ವಿಗೆ ಅಡ್ಡಿಯಾಗಿದ್ದ ಪತಿಯನ್ನೇ ಇಹಲೋಕದಿಂದ ಕಳುಹಿಸಿಬಿಟ್ಟರೇ ಸ್ವರ್ಗವನ್ನೇ ಮಂಚದ ಮೇಲೆ ಇಳಿಸುವ ಕನಸನ್ನು ಕಂಡಿದ್ದರು. ಇದಕ್ಕಾಗಿ ಅನುಪಲ್ಲವಿ ತನ್ನ ಪತಿಯನ್ನು ಕೊಲ್ಲುವಂತೆ ಪ್ರಿಯಕರನಿಗೆ ಕಟ್ಟಾಜ್ಞೆಯ ಜೊತೆಗೆ ಸುಪಾರಿಯನ್ನು ನೀಡಿದ್ದಳು.

ಟೊಮ್ಯಾಟೊ ಸಾಸ್ ಟ್ವಿಸ್ಟ್
ಅನುಪಲ್ಲವಿಯ ಕೊಲೆಯ ರಾಗಕ್ಕೆ ದನಿಯಾಗಿದ್ದ ಪ್ರಿಯಕರ ಹಿಂಮತ್ ತನ್ನಬ್ಬರು ಸ್ನೇಹಿತರಿಗೆ ಈ ಬಗ್ಗೆ ತಿಳಿಸಿದ್ದ ಹರೀಶ್ ಹಾಗು ನಾಗರಾಜ್ ಎಂಬಿಬ್ಬರು ಪತಿ ನವೀನ್‌ನನ್ನು ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪ್ ಮಾಡಿ ತಮಿಳುನಾಡಿನ ವಿರೂದ್ ನಗರ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಲೆಯನ್ನು ಮಾಡಲು ತಮಿಳುನಾಡಿನ ಮುಗಿಲನ್ ಹಾಗು ಕಣ್ಣನ್ ಎಂಬುವವರನ್ನು ಕೆರೆಸಿಕೊಂಡಿದ್ದರು. ಆದರೆ ನವೀನ್ ನನ್ನು ಕೊಲ್ಲಲು ಧೈರ್ಯ ಸಾಲದೇ ಕಂಠಪೂರ್ತಿ ಕುಡಿಸಿದ್ದಾರೆ. ನವೀನ್ ಕುಡಿದು ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದಾಗ ದೇಹದ ಮೇಲೆ ಟೊಮ್ಯಾಟೊ ಸಾಸ್ ಹಾಕಿ ಫೋಟೋ ತೆಗೆದುಕೊಂಡಿದ್ದಾರೆ. ಆ ಫೋಟೋವನ್ನು ಅನುಪಲ್ಲವಿ ಪ್ರಿಯಕರ ಹಿಮಂತನಿಗೆ ಕಳುಹಿಸಿದ್ದಾರೆ.

ಭಯದಲ್ಲೇ ಹಿಮಂತ ಏನಾದ ಗೊತ್ತಾ?
ನವೀನ್‌ನನ್ನು ಕೊಲ್ಲಲಾಗಿದೆ ಎಂಬ ಫೋಟೋ ಹಿಮಂತನ ಮೊಬೈಲಿಗೆ ಬಂದಿದ್ದೆ ಆತ ಗಾಬರಿಯಾಗಿ ಭಯಗೊಂಡಿದ್ದ. ನವೀನನ್ನು ಕೊಂದೇ ಎಂಬ ನೋವು , ಪೊಲೀಸರು ಬಂಧಿಸುವ ಭಯ, ಇವೆಲ್ಲದರ ನಡುವೆ ಹಿಮಂತ ಗಟ್ಟಿ ನಿರ್ಧಾರವನ್ನು ಮಾಡಿಕೊಂಡು ಬಿಟ್ಟಿದ್ದ. ಸ್ವರ್ಗ ಸುಖದ ಕನಸನ್ನು ಕಂಡಿದ್ದ ಹಿಮಂತ ಇಲ್ಲೇ ನರಕಯಾತನೆ ಅನುಭವಿಸಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ದ.

ಅನುಪಲ್ಲವಿ ಸೇರಿ ಐವರ ಬಂಧನ
ಕಿಡ್ನಾಪ್ ಆಗಿದ್ದ ನವೀನ್ ತಮಿಳುನಾಡಿನಿಂದ ವಾಪಸ್ ಆಗಿದ್ದ. ಆತ ವಾಪಾಸ್ ಬಂದು ಪೀಣ್ಯಾ ಬಳಿ ದೂರು ನೀಡಿದ್ದ. ಆ ಪ್ರಕರಣ ಸಂಬಂಧ ನಿರಂತರ ಕಾರ್ಯಾಚರಣೆ ನಡೆಸಿ ನವೀನ್ ಪತ್ನಿ ಅನುಪಲ್ಲವಿ , ಅಮುಜಮ್ಮ, ಹರೀಶ್ , ನಾಗರಾಜ್ ಹಾಗು ಮುಗಿಲನ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಅನುಪಲ್ಲವಿ ಇದ್ದ ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಂಡು ಅತ್ತ ಪತಿಯು ಇಲ್ಲದೇ ಇತ್ತ ಪ್ರಿಯಕರನು ಇಲ್ಲದೇ ಶ್ರೀ ಕೃಷ್ಣನ ಜನ್ಮಸ್ಥಾನವನ್ನು ಸೇರಿದ್ದಾಳೆ.












Click it and Unblock the Notifications