ಸಭ್ಯವಾದ ಬಟ್ಟೆ ಹಾಕಮ್ಮ ಎಂದು ಸಲಹೆ ನೀಡಿದ ಹೋಂಗಾರ್ಡ್ ಮೇಲೆ ಹಲ್ಲೆ, ಯುವತಿ ಬಂಧನ
ಬೆಂಗಳೂರು: ಸಭ್ಯ ಉಡುಪು ಧರಿಸುವಂತೆ ಸಲಹೆ ನೀಡಿದ್ದ ಮಹಿಳಾ ಹೋಂಗಾರ್ಡ್ ಮೇಲೆ ಯುವತಿ ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಆರೋಪದಡಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ದಾಮಿನಿ ಅಲಿಯಾಸ್ ಮೋಹಿನಿ ಎಂದು ಗುರುತಿಸಲಾಗಿದ್ದು, ಅವರು ಮಹದೇವಪುರದ ನಾರಾಯಣಪುರ ನಿವಾಸಿ ಎಂದು ತಿಳಿದುಬಂದಿದೆ.
ದಾಮಿನಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ನಿಯೋಜಿತ ಹೋಂಗಾರ್ಡ್ ಲಕ್ಷ್ಮೀನರಸಮ್ಮ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ಲಕ್ಷ್ಮೀನರಸಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವತಿಗೆ ಚುಡಾಯಿಸಿದ್ದ ಕಿಡಿಗೇಡಿಗಳು
ಪೊಲೀಸರ ಮಾಹಿತಿ ಪ್ರಕಾರ, ನಗರದ ಕೆ.ಆರ್.ಪುರ ರೈಲು ನಿಲ್ದಾಣದ ಸಮೀಪ ದಾಮಿನಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಕೆಲ ಕಿಡಿಗೇಡಿಗಳು ಅವರ ಉಡುಪಿನ ಕುರಿತು ಅಸಭ್ಯ ಟೀಕೆಗಳನ್ನು ಮಾಡಿದ್ದರು. ಆಗ ಹತ್ತಿರದಲ್ಲೇ ಸಮೀಪದಲ್ಲೇ ಸಂಚಾರ ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಲಕ್ಷ್ಮೀನರಸಮ್ಮ ಅವರು ಮಧ್ಯಪ್ರವೇಶಿಸಿ, ಕಿಡಿಗೇಡಿಗಳನ್ನು ಅಲ್ಲಿಂದ ಓಡಿಸಿದ್ದರು.
ನಂತರ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸಭ್ಯವಾದ ಬಟ್ಟೆ ಧರಿಸುವಂತೆ ಹಾಗೂ ಭಾರಿ ವಾಹನ ಸಂಚಾರ ಇರುವ ಕಾರಣ ರಸ್ತೆಯಲ್ಲಿ ನಡೆದು ಹೋಗಬೇಡಿ ಎಂದು ದಾಮಿನಿಗೆ ಸಲಹೆ ನೀಡಿದ್ದರು. ಈ ಮಾತುಗಳಿಂದ ಕೋಪಗೊಂಡ ದಾಮಿನಿ, ಏಕಾಏಕಿ ಲಕ್ಷ್ಮೀನರಸಮ್ಮ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಹಲ್ಲೆ ತೀವ್ರವಾಗಿದ್ದರಿಂದ ಲಕ್ಷ್ಮೀನರಸಮ್ಮ ಅವರ ಮುಖ ಮತ್ತು ಮೂಗಿನ ಭಾಗದಲ್ಲಿ ರಕ್ತಸ್ರಾವಾಗಿ ಗಾಯಗಳಾಗಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ದಾಮಿನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಕ್ಷ್ಮೀನರಸಮ್ಮ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾಮಿನಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಲಯವು ಆರೋಪಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರ ಹೇಳಿಕೆಯಂತೆ, ದಾಮಿನಿ ತಾವು ಮಾಲ್ಡೀವ್ಸ್‌ನಲ್ಲಿ ಶಾಲಾ ಶಿಕ್ಷಣ ಪಡೆದು, ಬಳಿಕ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪೂರ್ಣಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಘಟನೆ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ. ಈ ಹಲ್ಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಸಭ್ಯ ಟೀಕೆಗಳು ಮತ್ತು ಕಿರುಕುಳ ಇನ್ನೂ ಕಡಿಮೆಯಾಗಿಲ್ಲ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ. ರಸ್ತೆ ಮೇಲೆ ನಡೆಯುವ ಮಹಿಳೆಗೆ ಉಡುಪಿನ ನೆಪದಲ್ಲಿ ಟೀಕೆ ಮಾಡುವ ಮನೋಭಾವನೆ, ಮಹಾನಗರವಾಗಿರುವ ಬೆಂಗಳೂರಿಗೂ ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ. ಇನ್ನೊಂದೆಡೆ, ಕರ್ತವ್ಯ ನಿರ್ವಹಿಸುತ್ತಿದ್ದ ಹೋಂಗಾರ್ಡ್ ಮೇಲೆ ಹಲ್ಲೆ ನಡೆದಿರುವುದು ಕಾನೂನು ಮತ್ತು ಶಿಸ್ತಿಗೆ ಗೌರವ ಕಡಿಮೆಯಾಗುತ್ತಿರುವ ಸಂಕೇತವಾಗಿದೆ. ಸಾರ್ವಜನಿಕ ಶಾಂತಿ ಕಾಪಾಡಲು ಮುಂದಾದ ಸಿಬ್ಬಂದಿಯೇ ಹಲ್ಲೆಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications