ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗುತ್ತಾ ಸಿಎಂ ಅಭ್ಯರ್ಥಿ ಸ್ಥಾನದ ಗುದ್ದಾಟ?

By ಒನ್‌ಇಂಡಿಯಾ ಕನ್ನಡ ಡೆಸ್ಕ್‌
|
Google Oneindia Kannada News

ಬೆಂಗಳೂರು, ಜುಲೈ 25: ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಪಡೆದುಕೊಳ್ಳುವ ಎಲ್ಲ ಅವಕಾಶಗಳು ಇದ್ದವು. ಆದರೆ ಈಗ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಇವರೆಲ್ಲರೂ ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಿ ಅಧಿಕಾರ ಪಡೆಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಸರ್ವಜನಾಂಗದ ತೋಟದಲ್ಲಿ ಹತ್ತಿಕೊಂಡಿರುವ ಜಾತಿ ಎಂಬ ಕಿಡಿ ಮುಂದಿನ ಚುನಾವಣೆ ಸಮೀಪಿಸುವ ವೇಳೆಗೆ ಜ್ವಾಲೆಯಾಗಿ ಹರಡಲು ಆರಂಭಿಸಿದರೆ ಕಾಂಗ್ರೆಸ್‌ನ ಅಧಿಕಾರ ಹಿಡಿಯುವ ಆಸೆಗೆ ಕೊಡಲಿ ಏಟು ಬೀಳುವುದಂತು ಖಚಿತ. ಬಹುಶಃ ಇಷ್ಟು ವರ್ಷಗಳಲ್ಲಿ ಇಲ್ಲದ ಅದರಲ್ಲೂ ಇನ್ನೂ ಚುನಾವಣೆಗೆ ಹೋಗಿಲ್ಲ ಆಗಲೇ ಸಿಎಂ ಕುರ್ಚಿ ಮೇಲೆ ಟವಲ್ ಹಾಕಲು ಕಾಂಗ್ರೆಸ್ ಪೈಪೋಟಿ ನಡೆಸುತ್ತಿರುವುದು ನಗೆಪಾಟಲಿಗೀಡು ಮಾಡಿದೆ.

ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ: ಕುಮಾರಸ್ವಾಮಿಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ: ಕುಮಾರಸ್ವಾಮಿ

ಇಷ್ಟಕ್ಕೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಧೈರ್ಯ ಕಾಂಗ್ರೆಸ್‌ಗೆ ಬಂದಿದ್ದಾದರೂ ಹೇಗೆ? ಈಗಾಗಲೇ ನಾಯಕರ ಕಿತ್ತಾಟ ನೋಡಿರುವ ರಾಜ್ಯದ ಜನ ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರೆ ನಂಬುತ್ತಾರಾ?

 ಕಾಂಗ್ರೆಸ್ ನಾಯಕತ್ವ ಯಾರಿಗೆ?

ಕಾಂಗ್ರೆಸ್ ನಾಯಕತ್ವ ಯಾರಿಗೆ?

ರಾಜ್ಯ ರಾಜಕೀಯದಲ್ಲಿ ಅಧಿಕಾರಕ್ಕಾಗಿ ಹಪಾಹಪಿ ಶುರುವಾಗಿದೆ. ಮೊದಲಲ್ಲ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಪಡೆದ ಬಳಿಕ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ, ಲಾಭಿ ನಡೆಸುವ ಬಗೆಗಿನ ಸುದ್ದಿಗಳು ಹರಿದಾಡುತ್ತಿದ್ದವು. ಕೆಲವು ಪ್ರಾಮಾಣಿಕ, ಸಜ್ಜನ ನಾಯಕರು ಯಾವುದೇ ಲಾಭಿ ಮಾಡದೆ ತಮ್ಮ ಯೋಗ್ಯತೆ ನೋಡಿ ಪಕ್ಷ ಅವಕಾಶ ನೀಡಿದರೆ ನಿಭಾಯಿಸಿದರಾಯಿತು ಎಂಬಂತೆ ಮೌನಕ್ಕೆ ಶರಣಾಗಿ ಬಿಡುತ್ತಿದ್ದರು. ಆದರೆ ಈ ಬಾರಿ ಹಾಗೆ ಆಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಬೊಮ್ಮಾಯಿ, ಜೆಡಿಎಸ್ ಕುಮಾರಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ತೆರಳಲಿದೆ.

ಆದರೆ ಕಾಂಗ್ರೆಸ್? ಇದುವರೆಗೆ ಸಾಮೂಹಿಕ ನಾಯಕತ್ವದ ಜಪ ಮಾಡುತ್ತಾ ಬಂದಿದ್ದವರು ಈ ಬಾರಿ ದಿಕ್ಕು ತಪ್ಪಿದವರಂತೆ ಬೀದಿಯಲ್ಲಿ ಜಗಳಕ್ಕೆ ಬಿದ್ದಿರುವುದನ್ನು ಗಮನಿಸಿದರೆ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಇದ್ದ ಒಂದು ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಳ್ಳುತ್ತಾ ಎಂಬ ಸಂಶಯ ಮೂಡಲಾರಂಭಿಸಿದೆ. ಕಾಂಗ್ರೆಸ್ ಸಾಮಾನ್ಯವಾಗಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ದಲಿತ ಮತಗಳ ಮೇಲೆ ಕಣ್ಣಿಟ್ಟಿದೆ. ಅದರ ನಡುವೆ ಪಕ್ಷದಲ್ಲಿರುವ ಲಿಂಗಾಯಿತ, ಕುರುಬ, ಒಕ್ಕಲಿಗ ಹೀಗೆ ಒಂದಷ್ಟು ನಾಯಕರು ತಮ್ಮ ಪ್ರಭಾವದಿಂದ ಪಕ್ಷಕ್ಕೆ ತಮ್ಮದೇ ಸಮುದಾಯದ ಮತಗಳನ್ನು ತಂದು ಕೊಡುತ್ತಾ ಬಂದಿದ್ದಾರೆ.

 ರಾಜ್ಯ ರಾಜಕಾರಣ: ಚಾನ್ಸ್ ಕೊಟ್ಟರೆ ನೋಡೋಣ ಎಂದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣ: ಚಾನ್ಸ್ ಕೊಟ್ಟರೆ ನೋಡೋಣ ಎಂದ ಮಲ್ಲಿಕಾರ್ಜುನ ಖರ್ಗೆ

 ಕಾಂಗ್ರೆಸ್ ಬಿಟ್ಟು ಹೋಗಿರುವ ಹಿಂದುಳಿದ ವರ್ಗ

ಕಾಂಗ್ರೆಸ್ ಬಿಟ್ಟು ಹೋಗಿರುವ ಹಿಂದುಳಿದ ವರ್ಗ

ಇತಿಹಾಸವನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ರಾಜ್ಯದ ಸಿಎಂ ಪಟ್ಟ ಅಲಂಕರಿಸಿದವರಲ್ಲಿ ಹಿಂದುಳಿದ, ಅಷ್ಟೇನು ಪ್ರಬಲವಲ್ಲದ ನಾಯಕರೂ ಇದ್ದಾರೆ. ಇದುವರೆಗೆ ಸಿಎಂ ಸ್ಥಾನಕ್ಕೆ ಯೋಗ್ಯ ಯಾರು ಎಂಬುದನ್ನು ನಿರ್ಧರಿಸಿ ಅಂತಹವರನ್ನು ಸಿಎಂ ಆಗಿ ಮಾಡಲಾಗಿದೆ. ಈ ಹಿಂದೆ ಜೆಡಿಎಸ್ ನಿಂದ ತೊರೆದು ಬಂದ ಸಿದ್ದರಾಮಯ್ಯ ಅವರು ಅಹಿಂದ ಅಸ್ತ್ರ ಹಿಡಿದುಕೊಂಡೇ ಕಾಂಗ್ರೆಸ್ ನಲ್ಲಿ ಬೆಳೆದರು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ತದನಂತರ ಅಧಿಕಾರಕ್ಕೆ ಬಂದ ನಂತರ ಅವರು ಅಹಿಂದ ನಾಯಕ ಎನ್ನುವುದು ಮರೆಯಾಗಿ ಕುರುಬ ನಾಯಕ ಎಂಬಂತೆ ಬಿಂಬಿತರಾದರು.

ಯಾವಾಗ ಕುರುಬ ನಾಯಕ ಎಂಬಂತೆ ಬಿಂಬಿತರಾದರೋ ಅದರ ಪರಿಣಾಮವನ್ನು ಹಿಂದಿನ ಚುನಾವಣೆಯಲ್ಲಿ ಅನುಭವಿಸಿದ್ದಾರೆ. ಅವರೊಂದಿಗಿದ್ದ ಹಿಂದುಳಿದ ವರ್ಗದ ಕೆಲವೊಂದು ಸಮುದಾಯಗಳು ಅವರನ್ನು ಬಿಟ್ಟು ಹೋಗಿದೆ. ಹಾಗೆ ಹೋದ ಸಮುದಾಯಗಳು ಬಿಜೆಪಿಯಲ್ಲಿ ಭದ್ರವಾಗಿದೆ. ಅದರ ಪರಿಣಾಮವೇ ಬಿಜೆಪಿ ಕಳೆದ ವಿಧಾನ ಸಭೆ ಮತ್ತು ಲೋಕ ಸಭಾ ಚನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ ಸೋತಿದ್ದು ಇದಕ್ಕೆ ಸಾಕ್ಷಿಯಾಗಿದೆ.

 ಮೇಕೆದಾಟು ಪಾದಯಾತ್ರೆಗೆ ಸೆಡ್ಡು ಹೊಡೆಯಲು ಸಿದ್ದರಾಮೋತ್ಸವ?

ಮೇಕೆದಾಟು ಪಾದಯಾತ್ರೆಗೆ ಸೆಡ್ಡು ಹೊಡೆಯಲು ಸಿದ್ದರಾಮೋತ್ಸವ?

ಹೀಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಅಹಿಂದ ಮತವನ್ನು ಕ್ರೋಢೀಕರಿಸುವುದು ಅನಿವಾರ್ಯವಾಗಿರುವುದರಿಂದ ಸಿದ್ದರಾಮೋತ್ಸವದ ಮೂಲಕ ಹಿಂದುಳಿದ ವರ್ಗದ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ಸಿದ್ದರಾಮೋತ್ಸವದ ಮೂಲಕ ಮಾಡುತ್ತಿದ್ದಾರೆ. ಒಂದು ವೇಳೆ ಇದನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಿದ್ದರೆ ಅದಕ್ಕೆ ಅರ್ಥ ಬರುತ್ತಿತ್ತೇನೋ . ಆದರೆ ಯಾವಾಗ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಮೂಲಕ ಒಕ್ಕಲಿಗ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾತ್ರವಲ್ಲದೆ, ಒಕ್ಕಲಿಗ ನಾಯಕನಾಗಿ ಹೊರ ಹೊಮ್ಮುವ ಪ್ರಯತ್ನ ಮಾಡಿದರು.

ಈ ನಡುವೆ ಡಿ.ಕೆ.ಶಿವಕುಮಾರ್ ಕೆಲವು ಸಂದರ್ಭಗಳಲ್ಲಿ ತಾನೇ ಮುಂದಿನ ಸಿಎಂ ಎಂಬಂತಹ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಇದು ಸಿದ್ದರಾಮಯ್ಯನವರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಜತೆಗೆ ಬಿಜೆಪಿ ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದಾಗ ಅದನ್ನು ಖಂಡಿಸಿ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಮೇಲೆ ಮುಗಿ ಬಿದ್ದಾಗಲೂ ಅವರ ಪರವಾಗಿ ಡಿ.ಕೆ.ಶಿವಕುಮಾರ್ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಇದು ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಅದನ್ನು ಬಹಿರಂಗವಾಗಿಯೇ ಅವರು ಹೇಳಿಕೊಂಡಿದ್ದರು.

 ಕಾಂಗ್ರೆಸ್‌ನಲ್ಲಿ ನಾಯಕತ್ವದ ಶಕ್ತಿ ಪ್ರದರ್ಶನ

ಕಾಂಗ್ರೆಸ್‌ನಲ್ಲಿ ನಾಯಕತ್ವದ ಶಕ್ತಿ ಪ್ರದರ್ಶನ

ಕಳೆದೊಂದು ವರ್ಷದಿಂದ ಸಿಎಂ ಅಭ್ಯರ್ಥಿ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಮುನ್ನಲೆಗೆ ಬಂದಿತ್ತು. ಹಲವು ನಾಯಕರು ಸಿಎಂ ಆಗುವ ಬಗೆಗೆ ಹೇಳಿಕೆ ನೀಡ ತೊಡಗಿದರು. ದಿನದಿಂದ ದಿನಕ್ಕೆ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳು ಹೆಚ್ಚುತ್ತಾ ಹೋಗಿ ಅದು ಕೊನೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿಗೆ ಬಂದು ನಿಂತಿತ್ತು. ಮೊದಲಿಗೆ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಆ ಮೂಲಕ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ಕರೆತಂದು ತಾನೇನು ಎಂಬುದರ ಮಾಹಿತಿಯನ್ನು ಹೈಕಮಾಂಡ್ ಗೆ ರವಾನಿಸಿದರು.

ಇದು ಹೀಗೆಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎಂಬುದನ್ನರಿತ ಸಿದ್ದರಾಮಯ್ಯ ಸೇರಿದಂತೆ ಬೆಂಬಲಿಗರು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಆ ಮೂಲಕ ಹೈಕಮಾಂಡ್ ಗೆ ತಮ್ಮ ಶಕ್ತಿ ಏನೆಂಬುದನ್ನು ಜರೂರಾಗಿ ರವಾನಿಸುತ್ತಿದ್ದಾರೆ. ಆದರೆ ಸಿದ್ದರಾಮೋತ್ಸವ ಮುಗಿಯುವ ವೇಳೆಗೆ ಕಾಂಗ್ರೆಸ್ ನಲ್ಲಿ ಶುರುವಾಗಿರುವ ಭಿನ್ನಾಭಿಪ್ರಾಯಗಳು ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಆದರೆ ಅದರ ಪರಿಣಾಮಗಳನ್ನು ಪಕ್ಷದ ಎಲ್ಲಾ ನಾಯಕರು ಎದುರಿಸಬೇಕಾದ ಪರಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

English summary
Karnataka Congress leaders fight for the Chief minister post before the election, likely to affect on Next assembly election,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X