ಮುದ್ದೆ ತಿಂದರೂ ಜಯಲಲಿತಾಗೆ ನಿದ್ದೆ ಬರಲಿಲ್ಲ
ಬೆಂಗಳೂರು, ಸೆ.28: ಪರಪ್ಪನ ಅಗ್ರಹಾರ ಬಯಲು ಬಂದೀಖಾನೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಸಾಮಾನ್ಯ ಕೈದಿಯಂತೆ ಜೈಲಿನಲ್ಲಿ ನೀಡಿದ ಊಟವನ್ನೇ ಸೇವಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಜಯಾ ಹಾಗೂ ಅವರ ಸಂಗಡಿಗರು ಜೈಲಿನಲ್ಲಿ ಏನು ಮಾಡುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಯಾರೆಲ್ಲಾ ಕಾತುರರಾಗಿದ್ದಾರೆ ಮುಂದೆ ನೋಡೋಣ..
ಶನಿವಾರ ಸಂಜೆ ಸುಮಾರು 5 ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ವಿಶೇಷ ಕೋರ್ಟ್ನಲ್ಲಿ ನ್ಯಾಯಾಧೀಶ ಜಾನ್ ಮೈಕೆಲ್ ಡಿ ಕುನ್ಹಾ ಅವರು ಐತಿಹಾಸಿಕ ತೀರ್ಪು ಪ್ರಕಟಿಸಿ, ಜಯಲಲಿತಾ ಅವರು ಅಪರಾಧಿ ಎಂದು ಘೋಷಿಸಿದರು.
ನಂತರ4 ವರ್ಷ ಸೆರೆವಾಸದ ಜೊತೆಗೆ 100 ಕೋಟಿ ರು ದಂಡ ವಿಧಿಸಲಾಯಿತು. ಜಯಲಲಿತಾ ಜೊತೆಗೆ ಅವರ ಸಾಕು ಮಗ ಸುಧಾಕರನ್, ಗೆಳತಿ ಶಶಿಕಲಾ ಹಾಗೂ ಇಳವರಸಿಗೆ ಕೂಡ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಜಯಲಲಿತಾ ಕೈದಿ ನಂಬರ್ 7402 : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಈಗ ಕೈದಿ ನಂಬರ್ - 7402. ಎರಡನೇ ಆರೋಪಿ ಶಶಿಕಲಾ ಕೈದಿ ನಂಬರ್ - 7403, ಇಳವರಸಿ ಕೈದಿ ನಂಬರ್ - 7404, ಹಾಗೂ ಜಯಾ ದತ್ತು ಪುತ್ರ ಸುಧಾಕರನ್ ಗೆ ಕೈದಿ ನಂಬರ್-7405 ಸಂಖ್ಯೆಯನ್ನು ನೀಡಲಾಗಿದೆ
ಪರಪ್ಪನ ಅಗ್ರಹಾರದಲ್ಲಿ ಜಯಾ ಮೊದಲ ರಾತ್ರಿ : ಪರಪ್ಪನ ಅಗ್ರಹಾರ ಜೈಲಿನ 23ನೇ ಸೆಲ್ ನಲ್ಲಿ ಜಯಲಲಿತಾರನ್ನು ಇರಿಸಲಾಗಿದೆ. ರಾತ್ರಿ ಜಯಲಲಿತಾ ಅವರು ಜೈಲಿನಲ್ಲಿ ನೀಡಿದ ಊಟ ಮಾಡಿದರು. ಒಂದು ಮುದ್ದೆ, 200 ಗ್ರಾಂ ಅನ್ನ, ಸಾಂಬಾರು, 2 ಚಪಾತಿ, ಮಜ್ಜಿಗೆ ನೀಡಲಾಗಿತ್ತು. ಇದೇ ವೇಳೆ ಶಶಿಕಲಾ ಮನವಿ ಮೇರೆಗೆ ಅವರಿಗೆ ಮೊಸರನ್ನ ಕೂಡ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಮುದ್ದೆ ತಿಂದರೂ ಜಯಲಲಿತಾ ಅವರಿಗೆ ನಿದ್ದೆ ಬರಲಿಲ್ಲವಂತೆ.
ಮೊದಲ ದಿನ(ಸೆ.28): ಬೆಳಗ್ಗೆ 5.30ಕ್ಕೆ ಎದ್ದ ಜಯಲಲಿತಾ ಅವರು ಕೆಲ ಕಾಲ ವಾಕಿಂಗ್ ಮಾಡಿದ್ದಾರೆ. ಜಯಲಲಿತಾ ಅವರ ಆಪ್ತ ಸಹಾಯಕ ವೀರ ಪೆರುಮಾಳ್ ಅವರು ಇಡ್ಲಿ ಸಾಂಬಾರ್ ತಂದು ಕೊಟ್ಟಿದಾರೆ. ಬೆಳಗ್ಗೆ ಜೈಲು ಸಿಬ್ಬಂದಿ ಪಲಾವ್ ತಂದುಕೊಟ್ಟಿದ್ದಾರೆ. ಶಶಿಕಲಾ, ಇಳವರಸಿಗೂ ಪಲಾವ್ ನೀಡಲಾಗಿದೆ.
ಭಾನುವಾರವಾಗಿರುವುದರಿಂದ ವಿಶೇಷ ಪಾಸ್ ಇದ್ದರೆ ಮಾತ್ರ ಜೈಲುವಾಸಿಗಳನ್ನು ಸಂದರ್ಶಕರು ಭೇಟಿ ಮಾಡಬಹುದಾಗಿದೆ. ತಮಿಳುನಾಡಿನ ಪನ್ನೀರ್ ಸೆಲ್ವಂ ಸೇರಿದಂತೆ ಪ್ರಮುಖ ನಾಯಕರು ಜಯಾ ಅವರನ್ನು ಭೇಟಿ ಮಾಡಿದ್ದಾರೆ.
ಜಯಲಲಿತಾ ಅವರಿಗೆ ಎಸ್ ಪಿ ಅವರು ಅತಿಥಿ ಗೃಹ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು, ಅದರೆ, ಅದೆಲ್ಲವೂ ಗಾಳಿಸುದ್ದಿ ಎಂದು ತಿಳಿದು ಬಂದಿದ್ದು, 8X12 ವಿಸ್ತೀರ್ಣದ ಕೊಠಡಿಯಲ್ಲಿ ಶೌಚಾಲಯ, ಟೇಬಲ್ ವ್ಯವಸ್ಥೆ ಮಾತ್ರ ನೀಡಲಾಗಿದೆ. ದಿನಪತ್ರಿಕೆ ಓದಲು ನೀಡಲಾಗುತ್ತಿದೆ. ಮನೆಯೂಟ ತರೆಸಿಕೊಳ್ಳಬಹುದಾಗಿದೆ. ಜೈಲಿನ ಸಮವಸ್ತ್ರವನ್ನು ನೀಡಲಾಗಿಲ್ಲ. ಅದರೆ, ಕೈದಿಗಳ ಸಂಖ್ಯೆ ನೋಂದಣಿ ಮಾಡಿಕೊಳ್ಳಲಾಗಿದೆ.












Click it and Unblock the Notifications