Brand Bengaluru: ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಎಂದ ಬಿಜೆಪಿ, ಕಾರಣವೇನು ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಜಾರಿ ಮಾಡುವುದಾಗಿ ಹೇಳಿದೆ. ಅಂದರೆ, ಬೆಂಗಳೂರನ್ನು ಬ್ರ್ಯಾಂಡ್ ಆಗಿರೂಪಿಸುವುದು. ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ಕಾಂಗ್ರೆಸ್ ಹೇಳಿದೆಯಾದರೂ, ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ಇನ್ನಷ್ಟೇ ಆಗಬೇಕಿದೆ. ಈ ನಡುವೆ ಬ್ರ್ಯಾಂಡ್ ಬೆಂಗಳೂರಿಗೆ ಕಾಂಗ್ರೆಸ್ ಗ್ರಹಣ ಹಿಡಿಸಿದೆ ಎಂದು ಬಿಜೆಪಿ ದೂರಿದೆ. ಇದಕ್ಕೆ ಕಾರಣವೂ ಇದೆ.
ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಹಿಡಿದಿದೆ. ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಬ್ರಾಂಡ್ ಬೆಂಗಳೂರು ಕೇವಲ ಜಾಹೀರಾತಿಗೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ಬಿಜೆಪಿ ವ್ಯಂಗ್ಯವಾಡಿದೆ. ಬಿಜೆಪಿ ಈ ರೀತಿ ವ್ಯಂಗ್ಯ ಮಾಡಿರುವುದಕ್ಕೆ ಕಾರಣವೂ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿರುವ ಗುತ್ತಿಗೆದಾರರ ಕಾಮಗಾರಿ ಬಾಕಿ ಬಿಲ್ ಅನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘವು ಸೆಪ್ಟೆಂಬರ್ 2ರಿಂದ ಅನಿರ್ದಿಷ್ಟಾವಧಿಗೆ ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ವಿಷಯವನ್ನು ಪ್ರಸ್ತಾಪಿಸಿರುವ ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಲ್ ಪಾವತಿಸುವ ಯೋಗ್ಯತೆ ಇಲ್ಲ: ಬಿಜೆಪಿ ಟೀಕೆ
ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆ ಈ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಬೆಂಗಳೂರನ್ನು ಬ್ರಾಂಡ್ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರರು ಎರಡನೇ ಬಾರಿ ಮುಷ್ಕರಕ್ಕೆ ಇಳಿಯುತ್ತಿದ್ದಾರೆ. ಲಜ್ಜೆಗೆಟ್ಟ ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಅಸಲಿ ಕರ್ನಾಟಕ ಮಾಡೆಲ್. ಇದೇನಾ ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಘೋಷಣೆಗಳದ್ದೇ ದರ್ಬಾರು
2023ರಿಂದಲೂ ರಾಜ್ಯ ಕಾಂಗ್ರೆಸ್ ಸರ್ಕಾರವು ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದೆ. ಸಭೆ, ಸಲಹೆಗಳು ನಡೆದರೂ, ಮುಂದಕ್ಕೆ ಹೋಗುತ್ತಿಲ್ಲ. ಬೆಂಗಳೂರಿನ ಜನರು ಬೆಂಗಳೂರನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂದು ನಿರೀಕ್ಷಿಸುತ್ತಾರೋ ಅದೇ ಮಾದರಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದರು. ಇನ್ನು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಂಟು ಜನ ವಿಶೇಷ ಆಯುಕ್ತರನ್ನು ಇದಕ್ಕಾಗಿ ನೇಮಿಸಲಾಗಿತ್ತ.
ಎಂಟು ವಿಭಾಗಗಳನ್ನಾಗಿ ಮಾಡಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಆಕರ್ಷಕ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಜಲಸುರಕ್ಷಾ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶೈಕ್ಷಣಿಕ ಬೆಂಗಳೂರು ಹಾಗೂ ಟೆಕ್ ಬೆಂಗಳೂರು. ಈ ರೀತಿ ಎಂಟು ವಿಭಾಗಗಳನ್ನು ಮಾಡಿಕೊಳ್ಳಲಾಗಿತ್ತು. ಈ ಎಂಟು ವಿಭಾಗಗಳಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಬ್ರ್ಯಾಂಡ್ ಬೆಂಗಳೂರು ಎನ್ನುವುದು ಘೋಷಣೆಗೆ ಸೀಮಿತವಾಗಿದೆ.












Click it and Unblock the Notifications