Vijayalakshmi: ಡಿಕೆಶಿ-ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು?
ಬೆಂಗಳೂರು, ಜುಲೈ 24: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ತಮ್ಮ ದಿನಕರ್ ತೂಗುದೀಪ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ರವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರೇಮ್ ಕೂಡ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು, ದರ್ಶನ್ ಕುಟುಂಬಸ್ಥರಿಗೆ ಮುಖಾಮುಖಿಯಾಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ದರ್ಶನ್ ಕುಟುಂಬಸ್ಥರ ಭೇಟಿ ಬಗ್ಗೆ ನಿರ್ದೇಶಕ ಪ್ರೇಮ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ದರ್ಶನ್ ಮಗ ವಿನೀಶ್ ಹಾಗೂ ನನ್ನ ಮಗ ಮೊದಲು ಒಂದೇ ಸ್ಕೂಲ್‌ನಲ್ಲಿದ್ದರು. ಒಂದು ವರ್ಷ ಅವನು ಬೇರೆ ಕಡೆ ಶಿಫ್ಟ್ ಆದ. ಅದೀಗ ದೂರ ಆಗುತ್ತಿದೆ. ಹೀಗಾಗಿ ಹತ್ತಿರ ಸ್ಕೂಲ್‌ಗೆ ಹಾಕಿ ಅಂತಾ ಮಾತನಾಡಿದ್ದೇವೆ ಬಿಟ್ಟರೆ, ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಹೇಳಿದರು.

ಇನ್ನು ದರ್ಶನ್ ನನ್ನ ಸ್ನೇಹಿತರು ನನ್ನ ಫ್ಯಾಮಿಲಿ. ಕಷ್ಟ ಸುಖ ಮಾತನಾಡಿಯೇ ಮಾತನಾಡುತ್ತೇವೆ. ಬೇರೆ ಏನಿಲ್ಲ. ಅದೇ ರೀತಿ ಕಾನೂನಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಬಗ್ಗೆ ನಾವೇನು ಮಾತನಾಡಲು ಆಗುವುದಿಲ್ಲ. ವಿಜಯಲಕ್ಷ್ಮಿ ಅವರಿಗಿಂತ ಮುಂಚೆ ನಾನು ಬಂದಿದ್ದೆ. ಡಿ.ಕೆ ಶಿವಕುಮಾರ್ ಹತ್ತಿರ ಮಾತನಾಡಿ ಹೊರಗಡೆ ಇದ್ದೆ. ದರ್ಶನ್ ಪತ್ನಿ ಮತ್ತು ದಿನಕರ್ ತೂಗುದೀಪ್ ಅವರು ಡಿ.ಕೆ ಶಿವಕುಮಾರ್ ಅವರ ಭೇಟಿಗೆ ಬಂದಿದ್ದರು. ಎದುರಿಗೆ ಸಿಕ್ಕಾಗ ವಿನೀಶ್ ಶಾಲೆಯ ಬಗ್ಗೆ ಮಾತನಾಡಿದೆವು. ಉಳಿದದ್ದು ಅವರವರಿಗೆ ಬಿಟ್ಟಿದ್ದು, ನನಗೂ ಅದಕ್ಕೂ ನಿಜಕ್ಕೂ ಸಂಬಂಧ ಇಲ್ಲ. ನಾನು ಆಗಾಗ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬರುತ್ತಲೇ ಇರುತ್ತೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿಯಾದ ದರ್ಶನ್ ಕುಟುಂಬ
ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಪ್ರಕರಣದ ಕುರಿತು ವಿಜಯಲಕ್ಷ್ಮಿ, ದಿನಕರ್ ತೂಗುದೀಪ್ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಅನ್ಯಾಯ ಆಗಿದ್ಯಾ? ಹೇಗೆ? ಎಂದು ಡಿ.ಕೆ.ಶಿವಕುಮಾರ್ ವಿಚಾರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಂದಹಾಗೆ, ನಿನ್ನೆ (ಜುಲೈ 23) ರಾಮನಗರದ ಕಾರ್ಯಕ್ರಮವೊಂದರಲ್ಲಿ ಡಿ.ಕೆ.ಶಿವಕುಮಾರ್ ಅವರು ಭಾಗಿಯಾದ್ದರು. ಭಾಷಣದ ಮಧ್ಯೆ ದರ್ಶನ್ ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಘೋಷಣೆ ಕೂಗಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅದರ ಬಗ್ಗೆ ನಾಳೆ ಮಾತನಾಡುತ್ತೇನೆ. ದರ್ಶನ್ರವರ ಪತ್ನಿ ಭೇಟಿ ಮಾಡಲು ಸಮಯ ಕೇಳಿದ್ದಾರೆ. ನಾಳೆ ಬೆಳಿಗ್ಗೆ ಅವರನ್ನು ಭೇಟಿ ಮಾಡುತ್ತೇನೆ. ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲು ಪ್ರಯತ್ನ ಮಾಡುತ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಯಾರಿಗೆ ಆಗಿದ್ದರೂ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದು ಹೇಳಿದ್ದರು.












Click it and Unblock the Notifications