Water Crisis: ಬೇಕಾಬಿಟ್ಟಿ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಇರಲಿ ಎಚ್ಚರ!
ಬೆಂಗಳೂರು, ಮಾರ್ಚ್ 10: ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಅದರಲ್ಲೂ ಬೋರ್‌ವೆಲ್‌ಗಳನ್ನು ಆಶ್ರಯಿಸಿರುವ ಪ್ರದೇಶಗಳಲ್ಲಿ ನೀರಿನ ಬವಣೆ ಇನ್ನು ಹೆಚ್ಚಾಗಿದೆ. ಅಂತರ್ಜಲ ಕಡಿಮೆಯಾಗಿದ್ದು, ಇರುವ ಬೋರ್‌ವೆಲ್‌ಗಳಲ್ಲಿಯೂ ನೀರು ಇರದೆ ರೀಬೋರಿಂಗ್ ಮಾಡಿಸುವುದು ನಡೆಯುತ್ತಿದೆ. ಇನ್ನು ಹಲವೆಡೆ ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ.
ಇದೇ ಕಾರಣಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಲವು ನಿಯಮಗಳನ್ನು ಹೊರಡಿಸಿದೆ. ಬೋರ್‌ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿದೆ. ಬೇಕಾಬಿಟ್ಟಿ ಬೋರ್‌ವೆಲ್ ಕೊರೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಆದೇಶ ಹೊರಡಿಸಿದೆ. ಈ ನಿಯಮ ಮಾರ್ಚ್ 15 ರಿಂದ ಜಾರಿಯಾಗಲಿದೆ

ಜಲ ಮಂಡಳಿ ಆದೇಶ ಪತ್ರದಲ್ಲಿ ಇರುವುದೇನು?
ಬೆಂಗಳೂರು ಮಹಾನಗರದಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು ನಗರದಲ್ಲಿನ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಅಂತರ್ಜಲ ನೀರಿನ ಮಟ್ಟ ಕಡಿಮೆಯಾಗಿರುತ್ತದೆ.ಬೆಂಗಳೂರು ನಗರದಲ್ಲಿ ವೈಯಕ್ತಿಕ ಅಥವಾ ಇನ್ನಿತರೆ ಬಳಕೆಗೆ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಂಡಿಕೆ 11 ರಂತೆ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಆವೈಜ್ಞಾನಿಕವಾಗಿ ಕೊಳವೆ ಬಾವಿಗಳನ್ನು ಕೊರೆಯುತ್ತಿರುವುದು ಹಾಗೂ ನಿಯಮಾನುಸಾರ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವುದರಿಂದ ಬೆಂಗಳೂರು ನಗರದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಆದೇಶಿಸಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊಳವೆಬಾವಿಗಳನ್ನು ಕೊರೆಯವವರು ಅನುಮತಿ ಪಡೆದಿರುವ ಜಾಗದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯತಕ್ಕದ್ದು. ಒಂದು ವೇಳೆ ಅನುಮತಿ ಪಡೆಯದೇ ಇರುವ ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದಲ್ಲಿ ಅಂತಹ ಕೊಳವೆಬಾವಿ ಕೊರೆಯುವರ ವಿರುದ್ಧ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಂಡಿಕೆ 17 ರ ಅಧಿಕಾರದನ್ವಯ ನಿಯಮಾನುಸಾರ ರಿಗ್ ಪಡೆಯಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಲು ಕ್ರಮವಹಿಸುವುದು ಮತ್ತು ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹಾಗೆಯೇ, ಇನ್ನು ಮುಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಂಡಿಕೆ 11 ರನ್ವಯ ಎಲ್ಲಾದರು ಸಂಬಂಧಪಟ್ಟ ಪ್ರಾಧಿಕಾರಿಯಿಂದ ಅನುಮತಿ ಪಡೆಯದೇ ಕೊಳವೆ ಬಾವಿಗಳನ್ನು ಕೊರೆದಲ್ಲಿ ಕೊಳವೆಬಾವಿಯನ್ನು ಕೊರೆಸುವ ಮಾಲೀಕರ ವಿರುದ್ಧ ನಿಯಮ ಉಲ್ಲಂಘನೆ ಮಾಡಿರುವುದ್ದಾಗಿ ದೂರು ದಾಖಲಿಸುವುದು ಹಾಗೂ ಅಂತವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರೂಗಿಸಲಾಗುವುದು.
ಈ ಮೇಲ್ಕಂಡ ಆದೇಶವು ದಿನಾಂಕ: 15.03.2024 ರಿಂದ ಜಾರಿಗೆ ಬರಲಿದೆ. ದಿನಾಂಕ: 15.03.2024 ರಿಂದ ಬೆಂಗಳೂರು ಜಲಮಂಡಳಿ ಜಾಲತಾಣದಲ್ಲಿ ಕೊಳವೆಬಾವಿ ಕೊರೆಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ತಾವು ಅನುಮತಿ ಕೇಳಿದಲ್ಲಿ ಸಾರ್ವಜನಿಕ ಕೊಳವೆಬಾವಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಹಾಗೂ ಖಾಸಗಿ ಕೊಳವೆ ಬಾವಿಗಳಿಗೆ ಅಂತರ್ಜಲ ಮಟ್ಟ, ಅವಶ್ಯಕತೆ ಹಾಗೂ ತಜ್ಞರ ವರದಿ ಆಧಾರಿಸಿ ಸಂಬಂಧಪಟ್ಟವರಿಂದ ಸ್ಥಳ ಪರಿಶೀಲಿಸಿ ನಂತರ ನಿಯಮಾನುಸಾರ ಸೂಕ್ತ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications