IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
ಬೆಂಗಳೂರು, ಮಾರ್ಚ್ 29: ಬೆಂಗಳೂರಿನಲ್ಲಿ ಈ ಬಾರಿ ನೀರಿನ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ಸರ್ಕಾರ ಇದರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಜರಿದಿದ್ದ ವಿಪಕ್ಷಗಳು, ನೀರಿನ ಬಿಕ್ಕಟ್ಟಿನಿಂದಲೇ ಕೆಲ ಕಂಪನಿಗಳು ಬೆಂಗಳೂರು ತೊರೆಯುತ್ತಿವೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೆ ಬೆಂಗಳೂರು ಜಲಮಂಡಳಿಯು ತಾನು ಐಟಿ ಕಂಪನಿಗಳಿಗೆ ನೀರು ಪೂರೈಕೆಗೆ ಬದ್ಧ ಎಂದು ಭರವಸೆ ನೀಡಿದೆ.
ಬೆಂಗಳೂರುಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣವಾದ, ಬೇರೆ ರಾಜ್ಯಗಳ ಉದ್ಯೋಗಿಗಳು ಇಲ್ಲಿ ನೆಲೆ ಕಂಡು ಕೊಳ್ಳಲು ಕಾರಣವಾದ ಐಟಿ-ಬಿಟಿ ಕಂಪನಿಗಳಿಗೂ ನೀರಿನ ಕೊರತೆಯಾಗದಂತೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷರಾದ ಡಾ.ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನೀರಿನ ಕೊರತೆ ಮತ್ತು ಪೂರೈಕೆ ವಿಚಾರವಾಗಿ ಅವರು, ಔಟರ್ ರಿಂಗ್ ರೋಡ್ ಕಂಪನೀಸ್ ಅಸೊಸಿಯೇಶನ್ (ಆರ್ಕಾ) ಮುಖ್ಯಸ್ಥರ ಜೊತೆಗೆ ಗುರುವಾರ ಜಲಮಂಡಳಿ ಸಭೆ ನಡೆಸಿತು. ನೀರಿನ ಸಮಸ್ಯೆ ಇದೆ ಎಂಬ ಪರಿಸ್ಥಿತಿ ನಡುವೆ ಜಲಮಂಡಳಿ ನಗರದಲ್ಲಿ ನೀರಿನ ಕೊರತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಅದೇ ರೀತಿ ಐಟಿ ಕಂಪನಿಗಳಿಗೂ ತೊಂದರೆ ಆಗದಂತೆ ನೀರು ಒದಗಿಸಲಾಗುವುದು ಎಂದರು.
5ನೇ ಹಂತದ ಯೋಜನೆಯಿಂದ ಸಿಗಲಿದೆ ಅಧಿಕ ನೀರು
ಬೆಂಗಳೂರಿಗೆ ಭವಿಷ್ಯದಲ್ಲಿ ನೀರಿನ ಆಸರೆ ಎನ್ನಲಾಗುತ್ತಿರುವ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ನಗರಕ್ಕೆ ನಿತ್ಯ 775 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಸಿಗಲಿದೆ. ಇದು ಏರಿಕೆ ಆಗುತ್ತಿರುವ ಜನಸಂಖ್ಯೆಗೆ ನೀರೊದಗಿಸಲು ಸಹಾಯವಾಗಲಿದೆ ಎಂದು ಜಲಮಂಡಳಿ ನಂಬಿದೆ. ಜೊತೆಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.

ನೀರು ಪೋಲಾಗದಂತೆ ಎಚ್ಚರವಹಿಸಿ
ಮಳೆ ಕಡಿಮೆ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿತಗೊಂಡಿದ್ದು, ಬೋರ್‌ವೆಲ್‌ನಲ್ಲಿ ನೀರು ಸಿಗದಂತಾಗಿದೆ. ಹೀಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ಸದ್ಯ ನೀರಿನ ಸಮಸ್ಯೆ ಕೆಲವೆಡೆ ಇದೆ, ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಕೆ ಆಗುತ್ತಿದೆ. ಬೇಸಿಗೆಯ ದಿನವಾದ್ದರಿಂದ ನೀರ ಅನಗತ್ಯವಾಗಿ ಪೂಲಾಗದಂತೆ ನೋಡಿಕೊಳ್ಳಬೇಕು. ಜಲಮಂಡಳಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿದರೆ ನೀರಿನ ಮೌಲ್ಯ ತಿಳಿಯುತ್ತದೆ ಎಂದು ಅವರು ಎಚ್ಚರಿಸಿದರು.
ಐಟಿ ಕಂಪನಿಗಳಿಗೆ ನೀರಿನ ಬಗ್ಗೆ ಆತಂಕ ಬೇಡ
ಅದೇ ರೀತಿ ಐಟಿ ಕಂಪನಿಗಳು ಸಹ ತಮ್ಮ ಉದ್ಯೋಗಿಗಳಿಗೆ ಮಿತವಾಗಿ ನೀರು ಬಳಕೆಗೆ ಸೂಚಿಸಬೇಕು. ನೀರು ಮಿತ ಬಳಕೆ ಬಗ್ಗೆ ನೌಕರರಲ್ಲಿ ಜಾಗೃತಿ ಮೂಡಿಸಬೇಕು. ನೀರು ಸಂರಕ್ಷಣೆ, ಸಂಸ್ಕರಿಸಿದ ನೀರು ಬಳಕೆ, ಮಳೆ ನೀರು ಸಂರಕ್ಷಣೆ ಎಂಬ ಮೂರು ಸೂತ್ರಗಳನ್ನು ಜಲಮಂಡಳಿಯು ಸೂಚಿಸಲು ಬಯಸುತ್ತದೆ.
ಅಲ್ಲದೇ ಐಟಿ ಕಂಪನಿಗಳಲ್ಲಿ ನೀರಿನ ಮರುಪೂರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಕುಡಿಯಲು ಶುದ್ಧ ನೀರಿನ ಹೊರತಾಗಿ ಸಂಸ್ಕೃರಿಸಿದ ನೀರನ್ನು ಇತರೆ ಕಾರ್ಯಕಗಳಿಗೆ ಬಳಸಬೇಕು. ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿರುವ ಐಟಿ ಕಂಪನಿಗಳಿಗೆ ನೀರು ಪೂರೈಸಲು ಬದ್ಧವಾಗಿದೆ. ಈ ಬಗ್ಗೆ ಕಂಪನಿಗಳಿಗೆ ತೊಂದರೆ ಬೇಡ ಎಂದು ಜಲಮಂಡಳಿ ಅಧ್ಯಕ್ಷರು ಅಭಯ ನೀಡಿದರು.
ಪಂಚಸೂತ್ರ ಅಳವಡಿಕೆಗೆ ಜಲಮಂಡಳಿ ಸೂಚನೆ
ನಗರದಲ್ಲಿರುವ ವಸತಿ ಸಮುಚ್ಚಯಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಪ್ರದೇಶಗಳು, ಹೋಟೆಲ್-ರೆಸ್ಟೋರೆಂಟ್ ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುಖಾಸುಮ್ಮನೆ ನೀರು ಪೋಲಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರದೇಶಗಳಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ಲಂಬರ್ ಗಳಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ನೀರಿನ ಸಮಸ್ಯೆ ಪರಿಹಾರಾರ್ಥವಾಗಿ ಜಲಮಂಡಳಿಯು ಪಂಚ ಸೂತ್ರ ಅಳವಡಿಸುವಂತೆ ಅಪಾರ್ಟ್‌ಮೆಂಟ್, ಕಂಪನಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಅಪಾರ್ಟ್‌ಮೆಂಟ್ ಪಂಚಸೂತ್ರ ಅಳವಡಿಕೆಗೆ ಮುಂದಾಗಿವೆ. ಐಟಿ ಕಂಪನಿಗಳು ಅದನ್ನು ಅಳವಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.












Click it and Unblock the Notifications