Yatnal: ಇಂದು ದೆಹಲಿಗೆ ಯತ್ನಾಳ್ ನಿಯೋಗ ಭೇಟಿ: ವರಿಷ್ಠರನ್ನು ಭೇಟಿ ಆಗ್ತಾರಾ ಹಿಂದೂ ಫೈರ್ ಬ್ರ್ಯಾಂಡ್!
ಬೆಂಗಳೂರು, ಡಿಸೆಂಬರ್ 02: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರೋಧಿ ಎಂಬ ಹಣೆ ಪಟ್ಟಿ ಹೊತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಸೋಮವಾರ (ಡಿಸೆಂಬರ್ 02) ದೆಹಲಿಗೆ ತೆರಳುತ್ತಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರು ಮತ್ತು ಶಾಸಕರ ಮಧ್ಯೆ ಏಟು, ಎದಿರೇಟು, ಬಣ ರಾಜಕೀಯ ಜೋರಾಗಿದೆ. ಈ ನಡುವೆ ಯತ್ನಾಳ್ ಅವರ ದೆಹಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ತಿಕ್ಕಾಟ ಜೋರಾಗಿದೆ. ಯಡಿಯೂರಪ್ಪ ಬಣವು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಉಚ್ಚಾಟಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇತ್ತ ಶಾಸಕರು ವಿಜಯೇಂದ್ರ ಅವರ ವಿರುದ್ಧ ಬೆಳಗಾವಿಯಲ್ಲಿ ಭಾನುವಾರವು ವಾಗ್ದಾಳಿ ಮುಂದುವರೆಸಿದ್ದಾರೆ.

ಸೋಮವಾರ ದೆಹಲಿಗೆ ತೆರಳಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡವು ಅಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆಯೇ? ಎಂಬುದು ಗೊತ್ತಾಗಬೇಕಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕಿರುವ ವಿರೋಧ, ಉಪ ಚುನಾವಣೆ ಸೋಲು, ರಾಜ್ಯಾಧ್ಯಕ್ಷರ ವಿರುದ್ಧವಿರುವ ಅಸಮಾಧಾನವನ್ನು ಅವರು ತೋರ್ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ್ದ ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಅವರು, ಸರ್ಕಾರ ಮುಸ್ಲಿಂ ರಾಷ್ಟ್ರವಾಗಿ ಮಾಡಲು ಹೊರಟಿದೆ. ಸಚಿವ ಜಮೀರ್ ಅಹ್ಮದ್ ಖಾನ್ ವಕ್ಪ್ ವಿಚಾರದಲ್ಲಿ ಇಷ್ಟೆಲ್ಲ ಮಾಡಿದ್ದಾರೆ. ಮಠಗಳು, ಜನ ಆಸ್ತಿಗಳು ವಕ್ಫ್ ಆಸ್ತಿಗಳಾಗುತ್ತಿವೆ ಎಂದು ಅವರು ಕಿಡಿ ಕಾರಿದ್ದರು.
ವಕ್ಫ್ ವರದಿ ಸಲ್ಲಿಕೆಗೆ ಮಾತ್ರವೇ ದೆಹಲಿ ಪ್ರವಾಸ!
ಈ ವಕ್ಫ್ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಿ ವರದಿ ಸಿದ್ಧಪಡಿಸಿದ್ದೆವು. ಅದನ್ನು ಕೇಂದ್ರ ಸಮಿತಿಗೆ ವರದಿ ಸಲ್ಲಿಸಲು ಸೋಮವಾರ ದೆಹಲಿಗೆ ಪ್ರತ್ಯೇಕ ವಿಮಾನದ ಮೂಲಕ ತೆರಳುತ್ತೇವೆ. ಇದು ಈ ವಿಷಯಕ್ಕೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ದೆಹಲಿ ಪ್ರವಾಸ ಎಂದು ಹೇಳಿದ್ದಾರೆ. ಆದರೆ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರು ಇರುವ ಈ ಬಣ ಕೇವಲ ವಕ್ಫ್ ವಿಚಾರಕ್ಕೆ ಮಾತ್ರ ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ಯತ್ನಾಳ್ ಅವರು ವಕ್ಫ್ ವರದಿ ಸಲ್ಲಿಸಿ, ಕೇಂದ್ರ ನಾಯಕರ ಭೇಟಿ ಮಾಡಿಕೊಂಡು ಮಹತ್ವ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಕುತೂಹಲಕ್ಕೆ ಇಂದು ಸಂಜೆ ಹೊತ್ತಿಗೆ ತೆರೆ ಬೀಳುವ ನಿರೀಕ್ಷೆ ಇದೆ. ಇತ್ತ ಯತ್ನಾಳ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಿಕ್ಕಬಳ್ಳಾಪುರದಿಂದ ದೇಗುಲ ಯಾತ್ರೆ ಆರಂಭಿಸಿದ್ದಾರೆ. ಇದು ಸಹ ವಕ್ಫ್ ಆಸಕ್ತಿ ಕಬಳಿಕೆ ನಡೆಸಿದ ಹೋರಾಟವೇ ಆಗಿದೆ.
ಯತ್ನಾಳ್ ಪರ ಬ್ಯಾಟ್ ಬೀಸಿದ ಪ್ರತಾಪ್ ಸಿಂಹ
ವಕ್ಫ್ ಅನ್ಯಾಯದ ವಿರುದ್ಧ ದೆಹಲಿಗೆ ಹೋಗಿ ಸಮಿತಿಗೆ ವರದಿ ಸಲ್ಲಿಸುತ್ತೇವೆ. ವಕ್ಫ ಹಠಾವೋ, ದೇಶ್ ಬಚಾವೋ ಹೋರಾಟ ಕೇವಲ ಚುನಾವಣೆಗಾಗಿ ಅಲ್ಲ, ದೇಶಕ್ಕಾಗಿದೆ. ಈ ಹೋರಾಟದಿಂದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಲೀಡರ್ ಆಗುತ್ತಾರೆ ಎಂಬದೇನಿಲ್ಲ. ಅವರನ್ನು ಲೀಡರ್ ಮಾಡುವ ಅಗತ್ಯವಿಲ್ಲ. ಅವರು ಈಗಾಗಲೇ ಲೀಡರ್ ಆಗಿದ್ದಾರೆ. ಹಿಂದೂ ಪರ ಕೆಲಸ ಮಾಡುತ್ತಿದ್ದಾರೆ. ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಬೆಳಗಾವಿ ಕಾರ್ಯಕ್ರಮವೊಂದರಲ್ಲಿ ಭಾನುವಾರ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ್ ಅವರು ಪ್ರತಿಕ್ರಿಯಿಸಿದರು.












Click it and Unblock the Notifications