ಮತದಾರರ ದತ್ತಾಂಶ ವಂಚನೆ ಪ್ರಕರಣ: ಇಬ್ಬರು ಚುನಾವಣಾಧಿಕಾರಿಗಳ ಅಮಾನತು
ಬೆಂಗಳೂರು, ನವೆಂಬರ್ 25: ಚುನಾವಣಾ ಆಯೋಗವು ಶುಕ್ರವಾರದಂದು ಬೆಂಗಳೂರಿನಲ್ಲಿ ಮತದಾರರ ದತ್ತಾಂಶ ಕಳವು ಪ್ರಕರಣ ಸಂಬಂಧ ಇಬ್ಬರು ಚುನಾವಣಾ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದ ಮೂರು ವಿಧಾನಸಭಾ ಸ್ಥಾನಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಅಳಿಸುವಿಕೆ ಮತ್ತು ಸೇರ್ಪಡೆಗಳ ಪರಿಶೀಲನೆಗಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ರಾಜ್ಯದಲ್ಲಿ ಮತದಾರರ ಮಾಹಿತಿ ಕಳವು ಆರೋಪದ ನಂತರ ಇಬ್ಬರು ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಜನವರಿ 1, 2022ರ ನಂತರ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗೆ ಮಾಡಲಾದ ಎಲ್ಲಾ ದತ್ತಾಂಶ ಅಳಿಸುವಿಕೆ ಮತ್ತು ಸೇರ್ಪಡೆಗಳ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲು ಚುನಾವಣಾ ಪ್ರಾಧಿಕಾರವು ಮುಖ್ಯ ಚುನಾವಣಾ ಅಧಿಕಾರಿಗೆ ಸೂಚಿಸಿದೆ.
ಕರ್ನಾಟಕದಲ್ಲಿ "ಮತದಾರರ ಮಾಹಿತಿ ಕಳ್ಳತನದ ವಂಚನೆ" ಕುರಿತು ವಿವರವಾದ ತನಿಖೆಯನ್ನು ಕೋರಿ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಚುನಾವಣಾ ಆಯೋಗದಿಂದ ಈ ನಿರ್ದೇಶನಗಳು ಬಂದಿವೆ. ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗೆ 27 ಲಕ್ಷ ಹೆಸರುಗಳನ್ನು ಅಳಿಸಿ, 11 ಲಕ್ಷ ಮತದಾರರನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚಿಲುವೆ ಎಂಬ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಗಳು ಸರ್ಕಾರಿ ಅಧಿಕಾರಿಗಳಂತೆ ಸೋಗು ಹಾಕಿಕೊಂಡು ಮತದಾರರ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಚಿಲುಮೆ ಎಂಬ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ
ಮತದಾರರ ಪಟ್ಟಿಯ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಆಯೋಗವು ಮೂರು ವಿಧಾನಸಭಾ ಸ್ಥಾನಗಳ ಅಡಿಯಲ್ಲಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರಗಿನ ಅಧಿಕಾರಿಗಳನ್ನು ನೇಮಿಸಿದೆ. ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ಚಿಲುಮೆ ಎಂಬ ಸಂಸ್ಥೆಯ ಪ್ರತಿನಿಧಿಗಳಿಗೆ ಬಿಬಿಎಂಪಿಯ ಕೆಲವು ಅಧಿಕಾರಿಗಳೇ ಮತಗಟ್ಟೆ ಹಂತದ ಅಧಿಕಾರಿ ಗುರುತಿನ ಚೀಟಿ ಮಾಡಿಕೊಟ್ಟಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ಹಲಸೂರು ಗೇಟ್ ಠಾಣೆ ಪೊಲೀಸರಿಂದ ತನಿಖೆ
ಅಕ್ರಮವಾಗಿ ಬಿಬಿಎಂಪಿ ನೀಡಿದ್ದ ಷರತ್ತು ಉಲ್ಲಂಘಿಸಿ ಮತದಾರರ ಕೆಲವು ಮಾಹಿತಿ ಸಂಗ್ರಹಿಸಿದ್ದ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದ ದೊರೆತ ಮಾಹಿತಿ ಮೇರೆಗೆ ಹಲವೆಡೆ ದಾಳಿ ನಡೆಸಿದ್ದಾರೆ. ವಿಚಾರಣೆ ಪ್ರಕಾರ, ರವಿಕುಮಾರ್ 2013ರಲ್ಲಿ ಚಿಲುಮೆ ಸಂಸ್ಥೆ ಸ್ಥಾಪಿಸಿದ್ದ. ರವಿಕುಮಾರ್ ಸಹೋದರ ಕೆಂಪೇಗೌಡ, ಪತ್ನಿ ಐಶ್ವರ್ಯ, ಸಂಬಂಧಿಕರೇ ಆದ ಪ್ರಜ್ವಲ್ ಹಾಗೂ ಇತರರ ಜೊತೆ ಸೇರಿ ಸಂಸ್ಥೆ ಮುಖೇನ ಹಲವು ಕೆಲಸಗಳನ್ನು ಮಾಡುತ್ತಿದ್ದ. ಇದರಿಂದಾಗಿ ಆರೋಪಿ ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿತ್ತು.

ಚಿಲುಮೆ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ
ಈ ಮತದಾರರ ದತ್ತಾಂಶ ಸಂಗ್ರಹಿಸುತ್ತಿದ್ದ ಸಂಸ್ಥೆ ಸದಸ್ಯರಿಗೆ ಬಿಬಿಎಂಪಿ ಕೆಲವು ಅಧಿಕಾರಿಗಳೆ ಮತಗಟ್ಟೆ ಹಂತದ ಅಧಿಕಾರಿ ಮಟ್ಟದ ಗುರುತಿನ ಚೀಟಿ ನೀಡಿದ್ದರು ಎಂದು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಸತ್ಯ ಗೊತ್ತಾಗಿತ್ತು. ತನಿಖೆ ಮುಂದುವರಿಸಿದ್ದ ಪೊಲೀಸರು ಚಿಲುಮೆ ಸಂಸ್ಥೆಯ ಕಚೇರಿಗಳು ಹಾಗೂ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು.

ಅಧಿಕಾರಿಗಳು ಮಾಡಿಕೊಟ್ಟಿದ್ದ ಗುರುತಿನ ಚೀಟಿ ವಶ
ತನಿಖೆ ವೇಳೆ ಒಟ್ಟು 50 ಗುರುತಿನ ಚೀಟಿಗಳನ್ನು ಹಾಗೂ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ಡಿಸ್ಕ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಧಿಕಾರಿಗಳು ಮಾಡಿಕೊಟ್ಟಿದ್ದ ಗುರುತಿನ ಚೀಟಿಗಳನ್ನೂ ವಶಕ್ಕೆ ಪಡೆದ ಪೊಲೀಸರಿಗೆ ಅದರಲ್ಲಿರುವ ಸಹಿ, ಮೊಹರು ಅಸಲಿ ಎಂದು ಗೊತ್ತಾಗಿತ್ತು. ಇನ್ನು ಕೆಲವು ಗುರುತಿನ ಚೀಟಿಗಳನ್ನು ಆರೋಪಿಗಳೇ ತಯಾರಿಸಿಕೊಂಡಿದ್ದಾರೆ. ಅವುಗಳಿಂದಲೇ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications